ಕಾರವಾರ: ರಾಹುಲ್ ಗಾಂಧಿಗೆ ಇಡಿ ನೋಟಿಸ್ ನೀಡಿದರೆ ಡಿ.ಕೆ.ಶಿವಕುಮಾರ್, ಸಿದ್ದರಾಮಯ್ಯ, ಆರ್.ವಿ.ದೇಶಪಾಂಡೆ ಹುಯಿಲೆಬ್ಬಿಸುತ್ತಾರೆ. ಪ್ರತಿಭಟನೆಗೆ ದೆಹಲಿಗೆ ಹೋಗುತ್ತಾರೆ. ಆದರೆ ರಾಜಸ್ಥಾನದಲ್ಲಿ ಆದ ಒಬ್ಬ ಶ್ರಮಿಕನ ಹತ್ಯೆಯ ಬಗ್ಗೆ ಒಂದು ಶಬ್ಧದಲ್ಲೂ ಖಂಡಿಸುವ ಔಚಿತ್ಯವನ್ನು ತೋರದ ಕಾಂಗ್ರೆಸ್, ಕತ್ತಿಯ ಮನಃಸ್ಥಿತಿಯನ್ನು ಬೆಂಬಲಿಸುತ್ತದೆ ಎಂದು ಬಿಜೆಪಿ ವಕ್ತಾರ ನಾಗರಾಜ ನಾಯಕ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಂಗಡಿ ಒಡೆದಾಗ ಸಹಿ ಸಂಗ್ರಹಿಸಿದ್ದೀರಿ. ಅರ್ಜಿ ನೀಡಿದ್ದೀರಿ. ರಾಜಸ್ಥಾನದಲ್ಲಿ ಒಬ್ಬ ಬಡ ಶ್ರಮಿಕನ ಹತ್ಯೆಯಾದಾಗ ಕಾಂಗ್ರೆಸ್ಸಿಗರು ಫೇಸ್‌ಬುಕ್‌ನಲ್ಲೂ ಅಳಲನ್ನು ತೋಡಿಕೊಂಡಿಲ್ಲ. ಕಾಂಗ್ರೆಸ್ ಹಾಗೂ ಅದರ ಬೆಂಬಲಿತ ಅರೆಬೆಂದ ಬುದ್ಧಿಜೀವಿಗಳಿಗೆ ನಾಚಿಕೆ ಆಗುವುದಿಲ್ಲವೇ? ಕೆಂಪು ರಕ್ತ ಎಂದು ಕಲ್ಲಂಗಡಿ ಬಗ್ಗೆ ಕವನ ಬರೆದಿದ್ದೀರಿ. ಈಗ ನಿಮ್ಮ ಕವನ ಎಲ್ಲಿ ಹೋಗಿದೆ. ಕಲ್ಲಂಗಡಿ ಒಡೆದಾಗ ಆದ ದುಃಖ, ಕುತ್ತಿಗೆ ಕತ್ತರಿಸಿದಾಗ ಆಗಿಲ್ಲವೇ ಎಂದು ಪ್ರಶ್ನಿಸಿದರು.
ಟೈಲರ್ ಕನ್ಹಯ್ಯಾಲಾಲ್ ಹತ್ಯೆಗೆ ಪರೋಕ್ಷಗಾಗಿ ರಾಜಸ್ಥಾನದ ಆಡಳಿತಾರೂಡ ಕಾಂಗ್ರೆಸ್ ಕಾರಣವಾಗಿದೆ. ಕನ್ಹಯ್ಯಾ ಅವರಿಗೆ ಬೆದರಿಕೆ ಕರೆಬಂದಾಗ ಪೊಲೀಸ್ ದೂರು ನೀಡಿದ್ದಾರೆ. ಆದರೆ ಅಲ್ಲಿನ ಪೊಲೀಸರು ಇದನ್ನು ಲಘುವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಭಯೋತ್ಪಾದಕರು ಅವರನ್ನು ಹತ್ಯೆ ಮಾಡಿದ್ದಾರೆ. ದೂರು ನೀಡಿದ ಸಂದರ್ಭದಲ್ಲಿ ಗಂಭೀರವಾಗಿ ಪರಿಗಣಿಸಿ ಭದ್ರತೆ ನೀಡಿದ್ದರೆ ಈ ರೀತಿ ಘಟನೆ ಆಗುತ್ತಿರಲಿಲ್ಲ. ಕಾಂಗ್ರೆಸ್ ಪಕ್ಷದ ಜಿಹಾದಿ ಮನಸ್ಥಿತಿ ಇದಕ್ಕೆ ಕಾರಣವಾಗಿದೆ ಎಂದು ದೂರಿದರು.
ಬಿಜೆಪಿ ವಿಶೇಷ ಆಹ್ವಾನಿತ ಮನೋಜ್ ಭಟ್, ಕಾರವಾರ ನಗರ ಘಟಕದ ಅಧ್ಯಕ್ಷ ನಾಗೇಶ್ ಕುಡ್ತರಕರ್, ನಗರಸಭೆಯ ಸದಸ್ಯೆ ರೇಷ್ಮಾ ಮಾಳ್ಸೇಕರ್, ವಕೀಲ ನಿತಿನ್ ರಾಯ್ಕರ್ ಇದ್ದರು.