ಶಿರಸಿ: ಸಹಕಾರಿ ಸಂಸ್ಥೆ ಕ್ಯಾಂಪ್ಕೊ ಉತ್ಪಾದನೆ ಮಾಡಿರುವ ಚಾಕಲೇಟ್‍ನ್ನು ಬುಧವಾರ ನಗರದ ಕ್ಯಾಂಪ್ಕೋ ಸಂಸ್ಥೆಯ ಆವಾರದಲ್ಲಿ ಬಿಡುಗಡೆ ಮಾಡಲಾಯಿತು.
ಕ್ಯಾಂಪ್ಕೋ ನಿರ್ದೇಶಕ ಶಂಭುಲಿಂಗ ಹೆಗಡೆ ಗ್ರಾಹಕರಿಗೆ ಚಾಕಲೇಟ್ ವಿತರಿಸುವ ಮೂಲಕ ಬಿಡುಗಡೆಗೊಳಿಸಿದರು. ಹಲವು ಸಹಕಾರಿಗಳ ಪ್ರಯತ್ನದಿಂದ ಬೆಳೆದ ಕ್ಯಾಂಪ್ಕೋ ಸಂಸ್ಥೆ ದೇಶದಲ್ಲೆ ಮಾದರಿಯಾಗಿ ಬೆಳೆದು ನಿಂತಿದೆ. ಕಳೆದ ಸಾಲಿನಲ್ಲಿ 118ಕೋಟಿ ಲಾಭ ಗಳಿಸಿದೆ ಎಂದರು. ಕ್ಯಾಂಪ್ಕೋ ಸಂಸ್ಥೆ ರೈತರ ಆಶೋತ್ತರ ಈಡೇರಿಸುತ್ತಿದೆ. ಅಡಿಕೆ ಬೆಳೆ ಪ್ರದೇಶ ವರ್ಷದಿಂದ ವರ್ಷಕ್ಕೆ ಜಾಸ್ತಿ ಆಗುತ್ತಿದೆ. ಆದರೂ ಬೆಲೆ ಸ್ಥಿರತೆ ಕಾಪಾಡುವಲ್ಲಿ ಸಂಸ್ಥೆ ಪ್ರಯತ್ನಿಸುತ್ತಿದೆ ಎಂದರು.
ರೈತರು ಒಂದೇ ಬೆಳೆ ನಂಬಿಕೊಂಡು ಇರಬಾರದು ಎಂದು ಬೆಳೆದ ಕೊಕ್ಕೊಕ್ಕೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲು, ರೈತರಿಗೆ ಹೆಚ್ಚಿನ ಬೆಲೆ ದೊರಕಿಸಲು ಸಂಸ್ಥೆ ಕೊಕೋ ಚಾಕಲೇಟ್ ಪ್ಯಾಕ್ಟರಿ ಆರಂಭಿಸಿ ಮಾರುಕಟ್ಟೆ ಮಾಡುತ್ತಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಕಾಳುಮೆಣಸು ಖರೀದಿ ಮಾಡುತ್ತಿದ್ದೇವೆ. ಕಳೆದ ವರ್ಷ 10ಸಾವಿರ ಕ್ವಿಂಟಲ್ ಖರೀದಿಸಿದ್ದೇವೆ. ಈಗ ಗೋಡೌನ್ ಸಮಸ್ಯೆ ನಿವಾರಣೆಯಾಗಿದ್ದು ಈ ಬಾರಿ 15-18ಸಾವಿರ ಕ್ವೀಂಟಲ್ ಗುರಿ ಹೊಂದಿದ್ದೇವೆ. ಸಂಸ್ಥೆ ರೈತರಿಗೆ ಪೂರಕವಾಗಿ ನಿಂತಿದೆ ಎಂದರು.
ಹಲವು ವಿಧದ ಚಾಕಲೇಟ್ ಪರಿಚಯಿಸಿರುವ ಸಂಸ್ಥೆ ಗುಣಮಟ್ಟದ ಕಲಬೆರಕೆ ಇಲ್ಲದ ಚಾಕಲೇಟ್ ಉತ್ಪಾದಿಸುತ್ತಿದೆ. ಬೆಲ್ಲದ ಚಾಕಲೇಟ್, ಆಯುರ್ವೇದ ಗುಣಧರ್ಮ ಇರುವ ಚಾಕಲೇಟ್ ತಯಾರಿಸಲು ಅಧಿಕಾರಿಗಳಿಗೆ ಸಲಹೆ ನೀಡಿದ್ದೇವೆ. ಈ ಮೂಲಕ ರೈತ ಬೆಳೆದ ಉತ್ಪನ್ನಕ್ಕೂ ಮಾರುಕಟ್ಟೆ ಸಿಗಬೇಕು ಎಂಬುದು ನಮ್ಮ ಉದ್ದೇಶವಾಗಿದೆ ಎಂದರು.
ಸಂಸ್ಥೆಯ ಹುಬ್ಬಳ್ಳಿ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕ ಶಿವಮಾದ ನಾಯಕ ಮಾತನಾಡಿ, 24 ವಿಧದ ಸ್ವಾದಿಷ್ಟ ಚಾಕಲೇಟ್‍ನ್ನು ಕ್ಯಾಂಪ್ಕೋ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇನ್ನು ಹಲವು ವೆರೈಟಿಯ ಚಾಕಲೇಟ್ ತಯಾರಿಸುವ ಉದ್ದೇಶವಿದೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಉತ್ತಮ ಬೇಡಿಕೆಯಿದೆ ಎಂದರು.
ಕ್ಯಾಂಪ್ಕೋ ಪ್ರಾದೇಶಿಕ ವ್ಯವಸ್ಥಾಪಕ ಭರತ ಭಟ್ಟ, ಗಜಾನನ ಭಟ್ಟ ಉಪಸ್ಥಿತರಿದ್ದರು.
ರೈತರು ಸಹಕಾರಿ ವ್ಯವಸ್ಥೆಯಲ್ಲೆ ತಾವು ಬೆಳೆದ ಮಹಸೂಲು ಮಾರಾಟ ವ್ಯವಹಾರ ನಡೆಸಬೇಕು. ಇದರಿಂದ ಬೆಳೆಯ ಬೆಲೆ ಸ್ಥಿರತೆ ಸಾಧಿಸಲು ಸಾಧ್ಯವಾಗುತ್ತದೆ.
-ಶಂಭುಲಿಂಗ ಹೆಗಡೆ, ಕ್ಯಾಂಪ್ಕೋ ನಿರ್ದೇಶಕ