Slide
Slide
Slide
previous arrow
next arrow

ಕೋನಾಳದಲ್ಲೊಬ್ಬ ಅಪರೂಪದ ಬುದ್ಧ ಪ್ರೇಮಿ

300x250 AD

“ಬುದ್ಧ ಕುಟೀರ” ಸ್ಥಾಪಿಸಿ ಬುದ್ಧನ ಸಂದೇಶವನ್ನು ಸಾರಲು ಮುಂದಾದ ಗಿರೀಶ ಭಟ್ಟರು!

ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ತಾಲೂಕಿನ ಕಲ್ಲೇಶ್ವರ ಗ್ರಾಮದ ಕೋನಾಳದಲ್ಲಿ ಸಾಧಕರು, ಹಿರಿಯ ಸಮಾಜ ಸೇವಕರು ಆದ ಗಿರೀಶ ಭಟ್ಟ ಎಂಬುವವರು ತಮ್ಮ 75 ನೇ ವಯಸ್ಸಿನಲ್ಲಿ ತಮ್ಮ ಬಹುದಿನದ ಕನಸಾದ “ಬುದ್ಧ ಕುಟೀರ” ವನ್ನು ತಮ್ಮದೇ ಜಾಗದಲ್ಲಿ, ಸ್ವಂತ ಖರ್ಚಲ್ಲಿ ನಿರ್ಮಿಸಿ ಅದರೊಳಗೆ ಕೃಷ್ಣ ಶಿಲೆಯಿಂದ ಕೆತ್ತಿದ ಅದ್ಭುತ ಬುದ್ಧ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬುದ್ಧನ ತತ್ವಾದರ್ಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯದ ಮೂಲಕ ಗಮನ ಸೆಳೆದಿದ್ದಾರೆ.

ಬುದ್ಧನ ತತ್ವ, ಸಿದ್ಧಾಂತಗಳಿಂದ ಪ್ರೇರೇಪಿತರಾಗಿ ಬುದ್ಧನ ಅನುಯಾಯಿ ಆಗಿರುವ ಭಟ್ಟರು, 3ವರೆ ಅಡಿ ಎತ್ತರದ ಬುದ್ಧನ ಪ್ರತಿಮೆಯನ್ನು ಭಟ್ಕಳದ ಪ್ರಮೋದ ದೇವಾಡಿಗ ಬಳಗದಿಂದ ಕೆತ್ತಿಸಿದ್ದಾರೆ. ಅತಿ ಸುಂದರವಾಗಿ ಮೂಡಿಬಂದಿರುವ ಧ್ಯಾನಸ್ಥ ಸ್ಥಿತಿಯಲ್ಲಿ ಕಂಗೊಳಿಸುತ್ತಿದ್ದ ಬುದ್ಧ ಬೋಧಿ ವೃಕ್ಷದ ಕೆಳಗೆ ಕಮಲ‌ಶಿಲೆಯಲ್ಲಿ ಕುಳಿತಿದ್ದಾನೆ. ಇಂತಹ ಭವ್ಯ ಮೂರ್ತಿಗೆ ತಮ್ಮ ತೋಟದ ಮಧ್ಯ, ಮನೆಯ ಪಕ್ಕ ಸರಳ ಧ್ಯಾನ ಮಂದಿರವನ್ನು ಗಿರೀಶ ಭಟ್ಟರು ರೂಪಿಸಿದ್ದಾರೆ. ಧ್ಯಾನದ ವಿವಿಧ ಸ್ವರೂಪಗಳ ಬಗ್ಗೆ ತಿಳುವಳಿಕೆ ಮಾಡಿಕೊಂಡಿರುವ ಗಿರೀಶ ಭಟ್ಟರು ಬುದ್ಧನ ಕುರಿತು ಪ್ರವಚನ ಕೂಡಾ ಮಾಡಬಲ್ಲರು‌.

ಧ್ಯಾನ, ಯೋಗ, ವ್ಯಾಯಾಮ, ಕಾಲ್ನಡಿಗೆಯ ಪ್ರವಾಸ ಇವರ ಹವ್ಯಾಸ. ವಯಸ್ಸು 75 ಆದರೂ ಚಿರಯುವಕನ ಉತ್ಸಾಹದಲ್ಲಿ ಏನಾದರೂ ಹೊಸದನ್ನು ಮಾಡಬೇಕೆನ್ನುವ ಛಲ ಭಟ್ಟರದ್ದು. ಅಲ್ಲದೇ, ಪುಸ್ತಕ ಪ್ರಿಯರಾದ ಇವರು ಸ್ವಂತ ವಾಚನಾಲಯ ನಿರ್ಮಿಸಿಕೊಂಡಿದ್ದಾರೆ. ಬುದ್ಧ ಕುಟೀರಕ್ಕೆ ಬರುವವರು ಪುಸ್ತಕವನ್ನು ಓದಿ ಜ್ಞಾನವನ್ನು ಹೆಚ್ಚಿಸಿಕೊಳ್ಳಬಹುದು. ಯುವಕರನ್ನು, ವೃದ್ಧರನ್ನು ಗೌರವಿಸುವ ಇವರು ಮುಂದಿನ ದಿನಗಳಲ್ಲಿ ಅವರನ್ನು ಧ್ಯಾನದೆಡೆಗೆ ಸೆಳೆಯಲು ಹಿರಿದಾದ ಯೋಜನೆ ಹಾಕಿಕೊಂಡಿದ್ದಾರೆ‌ ಎಂದು ತಿಳಿಸಿದ್ದಾರೆ.

300x250 AD

ನಿಸರ್ಗ ವೀಕ್ಷಣೆ, ಏಕಾಂತ ಧ್ಯಾನ, ಪ್ರಶಾಂತ ವಾತಾವರಣದಲ್ಲಿ ಪುಸ್ತಕ ಓದು ಅನುಭವಿಸಲು ಎಲ್ಲಾ ಪ್ರವಾಸಿಗಳು ಬುದ್ಧ ಕುಟೀರ ಸ್ಥಳಕ್ಕೆ ಬರಲಿ ಎಂಬುದು ಇವರ ಆಶಯವಾಗಿದೆ‌. ಈ ಪ್ರೇರಣೆ ಸಮಾಜಮುಖಿ ಚಿಂತಕರಿಗೆ ಹೊಸ‌ ಆಯಾಮ‌ ದೊರಕಿಸಿಕೊಡುವುದರಲ್ಲಿ ಯಾವ ಸಂಶಯವೂ ಇಲ್ಲ ಎಂಬುದು ದೂರದರ್ಶಿತ್ವ ಇರುವವರ ಹೃದಯದ ಮಾತಾಗಿದೆ‌.

ಬುದ್ಧನ ವಿಚಾರಧಾರೆ ಪ್ರಸ್ತುತ ವಾತಾವರಣಕ್ಕೆ ಬಂದು ಹೇಗೆ ಬೆರೆತು ಹೋಗಿದೆ ಎಂಬ ಬಗ್ಗೆ ಇನ್ನಷ್ಟು ಅರ್ಥವತ್ತಾಗಿ ನಿರೂಪಿಸಲು ಪ್ರಾಜ್ಞರನ್ನು ಕಲೆ ಹಾಕಿ ಗೋಷ್ಠಿಯನ್ನು ನಡೆಸಬೇಕಾದದ್ದು ಅಷ್ಟೇ ಅಗತ್ಯ ಇದೆ ಎಂಬುದು ಗಿರೀಶ ಭಟ್ಟರ ಅಭಿಪ್ರಾಯ. ತನ್ನ ಬಿಡುವಿನ ಸಮಯವನ್ನೆಲ್ಲಾ ಬುದ್ಧ ಸೇವನಾಗಿ ದುಡಿಯಲು ಅವನ ಸಂದೇಶವನ್ನು ಸಮಾಜಕ್ಕೆ ಮುಟ್ಟಿಸಲು ಹಗಲಿರುಳು, ಚಿಂತನೆ ಮಾಡುವುದಾಗಿದೆ ಹೇಳಿಕೊಂಡಿದ್ದಾರೆ.


ಬುದ್ಧನ ಸಂದೇಶಗಳು ಪ್ರಸ್ತುತ ಸಮಾಜಕ್ಕೆ ಅಗತ್ಯವಿದೆ. ಜೀವನದ ಕೊನೆವರೆಗೆ ಬುದ್ಧನ ತತ್ವ, ಆದರ್ಶಗಳನ್ನು ಸಮಾಜಕ್ಕೆ ತಿಳಿಸುವ ಕಾರ್ಯ ಮಾಡುವೆ.

  • ಗಿರೀಶ ಭಟ್ಟ ಕೋನಾಳ
    ಬುದ್ಧಕುಟೀರ
Share This
300x250 AD
300x250 AD
300x250 AD
Back to top