ಜೊಯಿಡಾ: ಅಣು ಎಂದರೇನು? ಪರಮಾಣು ಮತ್ತು ಅಣು ನಡುವಿನ ವ್ಯತ್ಯಾಸ ಏನು? ನಿಮಗೆ ಉತ್ತರ ಗೊತ್ತಿದೆ ಆದರೆ ನೀವು ಉತ್ತರ ಹೇಳಲು ಭಯಪಡುತ್ತಿದ್ದಿರಿ, ನೀವೆಲ್ಲರೂ ಜಾಣರಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಹುರಿದುಂಬಿಸಿದವರು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂರವರು.
ಅವರು ಕುಂಬಾರವಾಡದ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ರಸಾಯನ ಶಾಸ್ತ್ರ ವಿಷಯದ ಪಾಠ ಮಾಡಿ ಗಮನಸೆಳೆದರು. ಜೊಯಿಡಾ ತಾಲ್ಲೂಕಿನ ಕುಂಬಾರವಾಡದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಗ್ರಾಮ ಪಂಚಾಯಿತಿ ಕಟ್ಟಡ ಮತ್ತು ನಿರ್ಮಾಣ ಹಂತದಲ್ಲಿರುವ ಪದವಿ ಪೂರ್ವ ಕಾಲೇಜಿನ ಹೆಚ್ಚುವರಿ ಕೊಠಡಿಗಳ ಕಾಮಗಾರಿಯನ್ನು ಪರಿಶೀಲಿಸಿ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಭೇಟಿ ನೀಡಿದ ಅವರು ಇಲ್ಲಿನ ವಿದ್ಯಾರ್ಥಿಗಳಿಗೆ ಸುಮಾರು ಇಪ್ಪತ್ತು ನಿಮಿಷ ಪ್ರಶ್ನೆಗಳನ್ನು ಕೇಳುತ್ತಾ ಪಾಠವನ್ನು ಮಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಇದೇ ಸಂದರ್ಭದಲ್ಲಿ ಅವರು ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಇತಿಹಾಸ ವಿಷಯದ ಕುರಿತು ಪ್ರಶ್ನೆಗಳನ್ನು ಕೇಳಿ ಜ್ಞಾನವನ್ನು ಹಂಚಿಕೊಂಡರು.
ತಾವೊಬ್ಬ ಅಧಿಕಾರಿ ಎಂಬ ದರ್ಪ ಇಲ್ಲದೆ ಸರಳತೆಯಿಂದ, ಸಾಮಾನ್ಯರಂತೆ ವಿದ್ಯಾರ್ಥಿಗಳೊಂದಿಗೆ ಬೆರೆತ ಅವರು ಸಮಾಧಾನದಿಂದ ವಿಧ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದರು, ಉಳವಿ ಗುಂದ ಭಾಗದಿಂದ ಶಾಲಾ ಕಾಲೇಜುಗಳಿಗೆ ಬರುವ ಮಕ್ಕಳಿಗೆ ಬಸ್ ಸಮಸ್ಯೆ ಇದೆ ಎಂದು ವಿಧ್ಯಾರ್ಥಿಗಳು ಹೇಳಿದಾಗ, ಸಂಬಂಧಿಸಿದವರಿಗೆ ಪತ್ರ ಬರೆದು ಸೂಕ್ತ ಸಮಯಕ್ಕೆ ಬಸ್ ವ್ಯವಸ್ಥೆ ಮಾಡಲಾಗುವುದು ಎಂದು ವಿದ್ಯಾರ್ಥಿಗಳಿಗೆ ಭರವಸೆ ನೀಡಿದ ಅವರು ವಿಧ್ಯಾರ್ಥಿಗಳು ಕಲಿಕೆಯಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು ಮತ್ತು ಹೆಚ್ಚು ಅಂಕ ಪಡೆದು ಪಾಸಾಗಬೇಕು ಎಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ತಾಪಂ ಇಓ ಭಾರತಿ ಎನ್, ಸಹಾಯಕ ನಿರ್ದೇಶಕ ನಜೀರ್ ಸಾಬ್ ಅಕ್ಕಿ, ಜಿಪಂ ಇಂಜಿನಿಯರ್ ಪ್ರವೀಣ್, ಪ್ರಾಚಾರ್ಯ ಪ್ರಶಾಂತ ಜಾಧವ, ಜ್ಞಾನೇಶ್ವರ ದೇಸಾಯಿ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ತದನಂತರ ಅವರು ತಾಲ್ಲೂಕಿ ಗಾಂಗೋಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗನವಾಡಿ, ಮತ್ತು ಪ್ರಾಥಮಿಕ ಶಾಲೆಗೆ ಭೇಟಿ ನೀಡಿದರು.