ಕತ್ತಲೆ ಹೋರಾಟದಿಂದ, ಭೂಮಿ ಹಕ್ಕಿನ ಬೆಳಕಿನೆಡೆ ಸಾಗಬೇಕಾಗಿದೆ: ರಂಜಿತಾ ರವೀಂದ್ರ
ಶಿರಸಿ: ಅರಣ್ಯ ಭೂಮಿ ಹಕ್ಕಿನ ಹೋರಾಟಕ್ಕೆ ೩೩ ವರ್ಷವಾಗಿದೆ. ಇಂದು ನಾವು ಕತ್ತಲೆಯ ಹೋರಾಟದಿಂದ, ಭೂಮಿ ಹಕ್ಕಿನ ಬೆಳಕಿನ ಕಡೆ ಸಾಗಬೇಕಾಗಿದೆ. ಈ ಹಿನ್ನಲೆಯಲ್ಲಿ ಹೋರಾಟಕ್ಕೆ ಮಹಿಳೆಯರ ಶಕ್ತಿ ವೃದ್ದಿಸಿಕೊಂಡು ಸಾಂಘಿಕ ಹೋರಾಟ ಮುಂದುವರೆಸುವುದು ಅವಶ್ಯ ಎಂದು ರಾಜ್ಯ ಅರಣ್ಯ ಭೂಮಿ ಹಕ್ಕು ವೇದಿಕೆ ಪ್ರಧಾನಿ ಸಂಚಾಲಕಿ ಮತ್ತು ನ್ಯಾಯವಾದಿ ರಂಜಿತಾ ರವೀಂದ್ರ ಹೇಳಿದರು.
ಅವರು ಶಿರಸಿಯ ಹೋರಾಟಗಾರರ ವೇದಿಕೆಯ ಕಾರ್ಯಾಲಯದಲ್ಲಿ ಹೋರಾಟಗಾರರ ಮಹಿಳಾ ಘಟಕಕ್ಕೆ ಚಾಲನೆ ನೀಡಿ ಮೇಲಿನಂತೆ ಮಾತನಾಡಿದರು..
ಇಂದಿನವರೆಗೂ ಹೋರಾಟದ ಯಶಸ್ಸಿನಲ್ಲಿ ಮಹಿಳೆಯರ ಪಾತ್ರ ಮುಖ್ಯವಾಗಿದ್ದು ಹೋರಾಟದ ಯಶಸ್ಸಿನಲ್ಲಿ ಮಹಿಳಾ ಅತಿಕ್ರಮಣದಾರರು ಮೂಲ ಕಾರಣವಾಗಿದ್ದಾರೆ. ಮುಂದಿನ ದಿನಗಳಲ್ಲಿ ಹೋರಾಟದಲ್ಲಿ ಮಹಿಳೆಯರಿಗೆ ಪಾತಿನಿದ್ಯ ನೀಡುವ ಉದ್ದೇಶದಿಂದ ಮಹಿಳಾ ಘಟಕಕ್ಕೆ ಚಾಲನೆ ನೀಡಲಾಗಿದೆ ಎಂದು ಅವರು ಹೇಳಿದರು. ಅರಣ್ಯ ಭೂಮಿ ಹಕ್ಕಿಗಾಗಿ ನಿರಂತರ ಹೋರಾಟ ಜರುಗಿದರೂ ಸಹಿತ, ಸುಪ್ರೀಂ ಕೊರ್ಟನ ನಿರ್ದೇಶನದಿಂದ ಅರಣ್ಯವಾಸಿಗಳು ಅತಂತ್ರವಾಗುವ ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಅರಣ್ಯವಾಸಿಗಳ ಪರವಾಗಿ ಕಾರ್ಯ ಜರುಗಿಸುವುದು ಕರ್ತವ್ಯವೆಂದು ಅವರು ಹೇಳಿದರು.
ಸಭೆಯಲ್ಲಿ ಕಲ್ಪನಾ ಪಾವಸ್ಕರ್ ಸ್ವಾಗತಿಸಿದರು. ಯಶೋದಾ ಬಿ. ನವಟ್ಟೂರು ಪ್ರಸ್ತಾವನೆ ಮಾಡಿದರು. ಕೊನೆಯಲ್ಲಿ ಗಂಗುಬಾಯಿ ಆರ್. ರಜಪೂತ್ ವಂದಿಸಿದರು. ಜಿಲ್ಲಾ ಸಂಚಾಲಕ ಇಬ್ರಾಹಿಂ ಗೌಡಳ್ಳಿ ಹಾಗೂ ಯಲ್ಲಾಪುರ ಅಧ್ಯಕ್ಷ ಭೀಮ್ ಸಿ ವಾಲ್ಮೀಕಿ ಮಾರ್ಗದರ್ಶನ ನೀಡಿದರು. ಜುಬೇದಾ ಎನ್. ಖಾನ್ ಹಾಗೂ ಜಯಶ್ರೀ , ಸುನಂದಾ ಸಿದ್ದಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ವೇದಿಕೆಯ ಮೇಲೆ ಗಾಯತ್ರಿ ರವಿ ಸಿದ್ದಿ, ಸಾಹೇರಾ ಗುಡುಸಾಬ, ಹಲೀಮಾ ಬಿ ಗೌಡಳ್ಳಿ, ಸಾವಿತ್ರಿ ಆಚಾರಿ, ಪಂಪಾವತಿ ಮುಕ್ರಿ, ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾದ್ಯಂತ ೨೦೦ ಘಟಕ:
ಉತ್ತರ ಕನ್ನಡ ಜಿಲ್ಲಾಧ್ಯಂತ ಗ್ರಾಮ ಪಂಚಾಯತಿಯಿಂದ, ಜಿಲ್ಲಾಮಟ್ಟದವರೆಗೆ ಹಳ್ಳಿ, ಹಳ್ಳಿಯಲ್ಲಿ ಮಹಿಳಾ ಘಟಕ ರಚಿಸಲು ನಿರ್ಧರಿಸಲಾಗಿದೆ. ಅಲ್ಲದೇ, ಭೂಮಿ ಹಕ್ಕಿಗೆ ಸಂಬಂಧಿಸಿ ಮಹಿಳಾ ಅತಿಕ್ರಮಣದಾರರಿಗೆ ಕಾನೂನು ಸಬಲೀಕರಣಗೊಳಿಸಲಾಗುವುದು ಎಂದು ರಂಜಿತಾ ರವೀಂದ್ರ ಹೇಳಿದರು.