60ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ನೂರಕ್ಕೂ ಅಧಿಕ ಮರಗಳು ನೆಲಸಮ | ಹಾರಿ ಹೋದ ಮನೆ, ಅಂಗಡಿಗಳ ಮೇಲ್ಛಾವಣಿ
ಅಕ್ಷಯ ಶೆಟ್ಟಿ ರಾಮನಗುಳಿ
ಅಂಕೋಲಾ: ತಾಲೂಕಿನ ಗ್ರಾಮೀಣ ಪ್ರದೇಶಗಳಾದ ಸುಂಕಸಾಳ, ಡೋಂಗ್ರಿ ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಸೋಮವಾರ ಮಧ್ಯಾಹ್ನ ಅನಿರೀಕ್ಷಿತವಾಗಿ ಬೀಸಿದ ರಣಭೀಕರ ಸುಂಟರಗಾಳಿ, ಗುಡುಗು ಸಹಿತ ಮಳೆಯ ಪರಿಣಾಮ ಜನಸಾಮಾನ್ಯರ ಮನೆ, ಅಂಗಡಿ ಮುಂಗಟ್ಟುಗಳ ತಗಡು, ಹಂಚಿನ ಮೇಲ್ಛಾವಣಿ ಹಾರಿ ಹೋಗಿದ್ದು ನೂರಕ್ಕೂ ಹೆಚ್ಚಿನ ಮರಗಳು ನೆಲಸಮವಾದ ಘಟನೆ ನಡೆದಿದೆ.
ಅತ್ಯಂತ ವೇಗವಾಗಿ ಬೀಸಿದ ಗಾಳಿಯ ಪರಿಣಾಮ ಸುಮಾರು 60ಕ್ಕೂ ಅಧಿಕ ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ ಎನ್ನಲಾಗಿದೆ. ಆಕಸ್ಮಿಕವಾಗಿ ಬೀಸಿದ ಗಾಳಿ, ಮಳೆಯ ಪರಿಣಾಮ ಗ್ರಾಮೀಣ ಪ್ರದೇಶದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಮನೆಯ ಅಕ್ಕಪಕ್ಕದ ತೆಂಗಿನ ಮರಗಳು, ಅಡಿಕೆ ಮರಗಳು, ಮಾವು, ಹಲಸಿನ ಮರಗಳು ಮನೆಯ ಮೇಲೆ ಬಿದ್ದು ಹಾನಿಯಾದ ಘಟನೆ ವರದಿಯಾಗಿದೆ.
ವಿದ್ಯುತ್ ಸಂಪರ್ಕ ಕಡಿತ:
ಗ್ರಾಮೀಣ ಭಾಗದಲ್ಲಿ ಸಂಪೂರ್ಣ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ರಾಷ್ಟ್ರೀಯ ಹೆದ್ದಾರಿ ಪಕ್ಕ ಹಾಗೂ ಗ್ರಾಮೀಣ ಪ್ರದೇಶದ ಒಳರಸ್ತೆಗಳ ಪಕ್ಕದಲ್ಲಿ ಲೆಕ್ಕವಿಲ್ಲದಷ್ಟು ಮರಗಳು ವಿದ್ಯುತ್ ಕಂಬದ ಮೇಲೆ ಬಿದ್ದಿದ್ದು ವಿದ್ಯುತ್ ತಂತಿಗಳು ಹರಿದು ಹೋಗಿವೆ. ವಿದ್ಯುತ್ ಸಂಪರ್ಕ ಪುನಃ ಜೋಡಿಸಲು ಹೆಸ್ಕಾಂ ಸಿಬ್ಬಂದಿಗಳು ಕಾರ್ಯಾಚರಣೆಗೆ ಇಳಿದಿದ್ದಾರೆ. ಇನ್ನೆರಡು ದಿನ ವಿದ್ಯುತ್ ಪೂರೈಕೆಯಲ್ಲಿ ತೀವ್ರ ವ್ಯತ್ಯಯವಾಗುವ ಸಾಧ್ಯತೆಗಳಿವೆ.
ಅಡಿಕೆ ತೋಟಗಳಿಗೆ ಹಾನಿ:
ಗ್ರಾಮೀಣ ಭಾಗದಲ್ಲಿ ಕೃಷಿಕರ ತೋಟಗಳಲ್ಲಿ ಅಂದಾಜು ಎರಡು ಸಾವಿರಕ್ಕೂ ಅಧಿಕ ಅಡಿಕೆ ಮರಗಳು ಮುರಿದು ಬಿದ್ದಿವೆ. 100ಕ್ಕೂ ಅಧಿಕ ತೆಂಗಿನ ಮರಗಳು ಸೇರಿದಂತೆ ಲೆಕ್ಕವಿಲ್ಲದಷ್ಟು ಮರಗಳು ಮುರಿದು ಬಿದ್ದಿವೆ ಎನ್ನಲಾಗಿದ್ದು ಕಂದಾಯ ಇಲಾಖೆಯಿಂದ ನಿಖರವಾದ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಮನೆಯ ಮೇಲೆ ಬಿದ್ದ ಮರಗಳು:
ಗ್ರಾಮೀಣ ಪ್ರದೇಶದ ವಿವಿಧೆಡೆ ಹಲಸು, ಮಾವು, ತೆಂಗಿನ ಮರಗಳು ಮುರಿದು ಮನೆಯ ಮೇಲೆ ಬಿದ್ದಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಎಲ್ಲಿಯೂ, ಯಾರಿಗೂ ಜೀವಹಾನಿ ಸಂಭವಿಸಿಲ್ಲ. ಯಾವುದೇ ಮುನ್ಸೂಚನೆ ಇಲ್ಲದೇ ಬೀಸಿದ ಸುಂಟರಗಾಳಿ, ಮಳೆಯ ಪರಿಣಾಮ ಜನರು ಕಂಗಾಲಾಗಿದ್ದಾರೆ. ಸಂಬಂಧಪಟ್ಟ ಇಲಾಖೆ ಶೀಘ್ರವೇ ಪರಿಶೀಲನೆ ನಡೆಸಿ ಹಾನಿಯ ವಿವರವನ್ನು ಪಡೆದು ಪರಿಹಾರ ನೀಡುವ ಕಾರ್ಯ ಮಾಡಬೇಕಿದೆ ಎಂದು ನಾಗರಿಕರು ಆಗ್ರಹಿಸಿದ್ದಾರೆ.
ಇದೇ ಮೊದಲ ಬಾರಿಗೆ ಇಂತಹ ರಣಭೀಕರವಾದ ಗಾಳಿ, ಮಳೆ ಬೀಸಿದ್ದು ಗ್ರಾಮೀಣ ಪ್ರದೇಶದ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಆಕಸ್ಮಿಕವಾಗಿ ನಡೆದ ಘಟನೆಯಲ್ಲಿ ಲೆಕ್ಕವಿಲ್ಲದಷ್ಟು ವಿದ್ಯುತ್ ಕಂಬಗಳು, ಮರಗಳು ಸಾಲು ಸಾಲಾಗಿ ಮುರಿದು ಬಿದ್ದಿವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಶೀಘ್ರದಲ್ಲೇ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಸಂತ್ರಸ್ತರಿಗೆ ಪರಿಹಾರ ಒದಗಿಸುವ ಕೆಲಸ ಮಾಡಬೇಕು ಎಂದು ಆಗ್ರಹಿಸುತ್ತೇನೆ.
- ವಿಲ್ಸನ್ ಡಿಕೋಸ್ತಾ
ಮಾಜಿ ಸದಸ್ಯರು ತಾಲೂಕು ಪಂಚಾಯತ್ ಅಂಕೋಲಾ