ಸಿದ್ದಾಪುರ: ಸೇವೆ ಮಾಡುವುದರಿಂದ ನಮ್ಮ ಮನಸ್ಸಿಗೆ ಸಂತೋಷ ಲಭಿಸುತ್ತದೆ. ಐಶ್ವರ್ಯ ಬಂದಾಗ ಸೇವೆಗೆ ಕಿಂಚಿತ್ತಾದರೂ ಬಳಸಿಕೊಳ್ಳಬೇಕು. ಸಮಾಜದಲ್ಲಿ ಇಲ್ಲದವರು, ಇದ್ದವರು ಎಂಬ ವರ್ಗವಿದೆ. ಇಲ್ಲದವರಿಗೆ ಇದ್ದವರು ಸಹಕರಿಸಬೇಕು. ಮಾನವೀಯ ಪ್ರೀತಿ, ಅನುಕಂಪ, ದಯೆ ಇರಬೇಕು. ಅದು ಬಲುದೊಡ್ಡ ಅಂಶವಾಗಿದೆ. ಅನ್ಯರ ಕಷ್ಟದಲ್ಲಿ ನೆರವಾಗುವುದಕ್ಕೆ ಲಯನ್ಸ್ ಕ್ಲಬ್‌ಗಳು ಜನಪರವಾದ ಕಾರ್ಯದಲ್ಲಿ ತೊಡಗಿದೆ. ಇಂತಹ ಕ್ಲಬ್‌ಗಳ ಸದಸ್ಯತ್ವ ಹೊಂದುವುದರ ಮೂಲಕ ನಿಜವಾದ ಸಂತಸ ಸಿಗುತ್ತದೆ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಮನೋಜ್ ಮಾಣಿಕ್ ಹೇಳಿದರು.
ಅವರು ಸ್ಥಳಿಯ ಲಯನ್ಸ್ ಕ್ಲಬ್‌ಗೆ ತಮ್ಮ ಅಧಿಕೃತವಾದ ಭೇಟಿ ನೀಡಿ ಲಯನ್ಸ್ ಸದಸ್ಯರನ್ನು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ಹಾಗೂ ಕಳೆದ ಸಾಲಿನಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಬಗ್ಗೆ ಪ್ರಶಂಸನಾ ಪತ್ರವನ್ನು ಆರ್.ಎಂ ಪಾಟೀಲ್ ಅವರಿಗೆ ನೀಡಿದರು.
ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಡಾ. ರವಿ ಹೆಗಡೆ ಹೂವಿನಮನೆ ಮಾತನಾಡಿ ಆರೋಗ್ಯ, ಶಿಕ್ಷಣ, ಜನಪರ ಸೇವಾ ಕಾರ್ಯದಲ್ಲಿ ಸ್ಥಳೀಯ ಲಯನ್ಸ್ ಕ್ಲಬ್ ಸೇವೆ ಅತ್ಯುತ್ತಮವಾಗಿ ನಡೆಯುತ್ತಿದೆ ಎಂದು ಹೇಳಿದರು. ಸಂಪುಟ ಕಾರ್ಯದರ್ಶಿ ವಿನೋದ ಜೈನ್, ಪ್ರಾದೇಶಿಕ ಅಧ್ಯಕ್ಷ ಆರ್.ಎಚ್.ನಾಯ್ಕ, ವಲಯ ಅಧ್ಯಕ್ಷೆ ಶ್ಯಾಮಲಾ ಹೆಗಡೆ ಹೂವಿನಮನೆ ಮಾತನಾಡಿದರು.
2024 ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೇಶವ ಹೆಗಡೆ ಕೊಳಗಿ, ಪಟ್ಟಣ ಪಂಚಾಯತ ಸಿಬ್ಬಂದಿ ಮಧು ಕೊರರ್ ಹಾಗೂ ಇತ್ತೀಚೆಗೆ ಗೌರವ ಡಾಕ್ಟರೇಟ್ ಪದವಿ ಹೊಂದಿದ್ದ ಜಿ.ಜಿ ಹೆಗಡೆ ಬಾಳಗೋಡ ಅವರನ್ನು ಸನ್ಮಾನಿಸಲಾಯಿತು. ಸನ್ಮಾನಿತ ಕೇಶವ ಹೆಗಡೆ ಕೊಳಗಿ ಡಾ.ಜಿ.ಜಿ ಹೆಗಡೆ ಬಾಳಗೋಡ ಮಾತನಾಡಿ ಸನ್ಮಾನಕ್ಕೆ ಕೃತಜ್ಞತೆ ಹೇಳಿದರು. ಅಧ್ಯಕ್ಷತೆಯನ್ನು ಲಯನ್ಸ್ ಅಧ್ಯಕ್ಷ ಏ.ಜಿ.ನಾಯ್ಕ ವಹಿಸಿದ್ದರು. ಸುಮತಿ ಭಾವಗೀತೆ ಹಾಡಿದರು. ರಕ್ಷಾ ಮನೋಜ ಮಾಣಿಕ್ ಅವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಅರ್ಚನಾ ಹೆಗಡೆ ನಿಡಗೋಡ ಪ್ರಾರ್ಥಿಸಿದರು. ನಾಗರಾಜ ದೋಶೆಟ್ಟಿ ಧ್ವಜವಂದನೆ ಸಲ್ಲಿಸಿದರು. ರಾಘವೇಂದ್ರ ಭಟ್ಟ ಸನ್ಮಾನ ಪತ್ರ ವಾಚನಗೈದರು. ಕಾರ್ಯದರ್ಶಿ ಕುಮಾರ ಗೌಡರ್ ಹೊಸೂರು ವರದಿವಾಚನ ಗೈದರು. ಐ.ಕೆ ಪಾಟೀಲ ವಂದಿಸಿದರು. ಆಕಾಶ ಹೆಗಡೆ ಗುಂಜಗೋಡ ನಿರೂಪಿಸಿದರು.