ಹೇರೂರಿನಲ್ಲಿ ಕದಂಬ ಕನ್ನಡ ಜಿಲ್ಲೆಗಾಗಿ ಸಹಿ ಸಂಗ್ರಹಣಾ ಅಭಿಯಾನಕ್ಕೆ ಚಾಲನೆ
ಸಿದ್ದಾಪುರ: ಜನರ ಬಯಕೆ ತೀವ್ರವಾದರೆ ಶಾಸಕರೂ ಒಪ್ಪಬೇಕು, ಮಂತ್ರಿಯೂ ಒಪ್ಪಬೇಕು, ಮುಖ್ಯಮಂತ್ರಿಯೂ ಒಪ್ಪಬೇಕು. ಈ ಹಿನ್ನೆಲೆಯಲ್ಲಿ ಎಲ್ಲರೂ ಪ್ರತ್ಯೇಕ ಜಿಲ್ಲಾ ರಚನೆಗೆ ಆಗ್ರಹಿಸಿ ಸಹಿ ನೀಡಿ ಸಹಕರಿಸಬೇಕೆಂದು ಕದಂಬ ಕನ್ನಡ ಜಿಲ್ಲೆ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್ ಅಧ್ಯಕ್ಷ ಅನಂತಮೂರ್ತಿ ಹೆಗಡೆ ಹೇಳಿದರು.
ಅವರು ಹೇರೂರಿನ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಕದಂಬ ಕನ್ನಡ ಜಿಲ್ಲೆಗಾಗಿ ನಡೆದ ಜನಜಾಗೃತಿ ಹಾಗೂ ಸಹಿ ಸಂಗ್ರಹಣಾ ಅಭಿಯಾನದಲ್ಲಿ ಮಾತನಾಡಿದರು.
ನಾನು ಈ ಹಿಂದೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕಾರವಾರದವರೆಗೆ ಪಾದಯಾತ್ರೆ ಮಾಡಿದ ಸಂದರ್ಭದಲ್ಲಿ ಜಿಲ್ಲೆಗೊಂದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನೀಡುವುದಾಗಿ ಸರಕಾರದ ಸಚಿವರು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ರಚನೆ ಆಗಿದ್ದೇ ಆದಲ್ಲಿ ಘಟ್ಟದ ಮೇಲ್ಭಾಗದ ಪ್ರದೇಶಕ್ಕಷ್ಟೇ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯೂ ದೊರೆಯುತ್ತದೆ. ಇದರಿಂದಾಗಿ ಜನ ಹಣ ಖರ್ಚು ಮಾಡಿ ದೂರದ ಮಂಗಳೂರಿಗೋ ಇನ್ನೆಲ್ಲೋ ಹೋಗುವುದು ತಪ್ಪುತ್ತದೆ ಎಂದರು.
ಪ್ರತ್ಯೇಕ ಜಿಲ್ಲೆ ನಿರ್ಮಾಣದಿಂದ ಮೆಡಿಕಲ್ ಕಾಲೇಜು ಸಿಗಲಿದೆ. ಮೆಡಿಕಲ್ ಕಾಲೇಜಿನ ಉಪನ್ಯಾಸಕರಾಗಿ ಬರುವ ವೈದ್ಯರಿಂದ ಸುತ್ತಮುತ್ತಲಿನ ಭಾಗದ ಜನರಿಗೆ ಉಪಯುಕ್ತವಾಗಲಿದೆ. ಅಷ್ಟೇ ಅಲ್ಲದೇ ಇಂಜಿನಿಯರಿಂಗ್ ಕಾಲೇಜು, ಕೈಗಾರಿಕೋದ್ಯಮಗಳು ಪ್ರಾರಂಭ ಆಗುತ್ತದೆ. ಅಲ್ಲದೇ ಸರಕಾರಿ ಜಿಲ್ಲಾ ಕಚೇರಿಗಳ ಸೌಲಭ್ಯ ಹತ್ತಿರದಲ್ಲಿಯೇ ದೊರೆತು ಅನುಕೂಲವಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲಿ ಪ್ರತ್ಯೇಕ ಜಿಲ್ಲೆ ಅನಿವಾರ್ಯವಾಗಿದೆ. ಪ್ರತ್ಯೇಕ ಜಿಲ್ಲೆ ಎಂದರೆ ಇಬ್ಭಾಗವಾಗಿಸುವುದೇನಿಲ್ಲ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ ಮಾದರಿಯನ್ನೇ ನಾವು ಅನುಸರಿಸೋಣ. ಹಾಗಾಗಿ ಎಲ್ಲರೂ ನಮ್ಮ ಈ ಹೋರಾಟಕ್ಕೆ ಬೆಂಬಲ ನೀಡಿ ಅಭಿವೃದ್ಧಿಗೆ ಸಹಕಾರ ನೀಡಬೇಕೆಂದು ಎಲ್ಲರಲ್ಲಿಯೂ ಕೇಳಿಕೊಳ್ಳುತ್ತೇನೆ ಎಂದರು.
ಕದಂಬ ಕನ್ನಡ ಜಿಲ್ಲಾ ಟ್ರಸ್ಟ್ ಸಂಚಾಲಕ ಎಂ.ಎಂ. ಭಟ್ ಕಾರೇಕೊಪ್ಪ ಮಾತನಾಡಿ, ಶಿರಸಿಯಲ್ಲಿ ಪ್ರತ್ಯೇಕ ಜಿಲ್ಲೆ ರಚನೆಗೆ ಸಹಕಾರಿ ಆಗುವ ಬಹುತೇಕ ಎಲ್ಲ ಕಚೇರಿಗಳಿವೆ. ಡಿಸಿ ಕಚೇರಿ, ಎಸ್.ಪಿ ಕಚೇರಿಯನ್ನು ಬಿಟ್ಟು ಬಹುತೇಕ ಎಲ್ಲಾ ಕಚೇರಿಗಳು ಇವೆ. ಪ್ರತ್ಯೇಕ ಜಿಲ್ಲೆ ರಚನೆಗೆ ಬೆಂಬಲ ನೀಡದಿದ್ದರೆ ನಮ್ಮ ಅಭಿವೃದ್ಧಿಗೆ ನಾವೇ ಅಡ್ಡಗಾಲು ಹಾಕಿಕೊಂಡಂತೆ. ಶೈಕ್ಷಣಿಕ ಜಿಲ್ಲೆ ರಚನೆಯಿಂದ ಆಗುತ್ತಿರುವ ಅನುಕೂಲಗಳನ್ನು ನಾವು ದಿನಂಪ್ರತಿ ನೋಡುತ್ತಿದ್ದೇವೆ. ಹಾಗಾಗಿ ಪ್ರತ್ಯೇಕ ಕಂದಾಯ ಜಿಲ್ಲೆಯಿಂದ ಉಂಟಾಗುವ ಅನುಕೂಲತೆಗಳನ್ನು ಅವಲೋಕನ ಮಾಡಿ ಬೆಂಬಲ ನೀಡೋಣ ಎಂದರು.
ಈ ವೇಳೆ ಸ್ಥಳೀಯ ಸಂಚಾಲಕ ಕಮಲಾಕರ ನಾಯ್ಕ್ ಹೇರೂರು, ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷ ನರಸಿಂಹ ಮೂರ್ತಿ ಹೆಗಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎಂ.ಜಿ ಹೆಗಡೆ ಗೆಜ್ಜೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ ತಟ್ಟಿಕೈ ಒಕ್ಕೂಟದ ಅಧ್ಯಕ್ಷ ಶಂಕರ ಗೌಡ ಸರಕುಳಿ, ರಾಮಾಂಜನೇಯ ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷ ಗಣೇಶ ಹೆಗಡೆ, ಅಣಲೆಬೈಲ್ ಗ್ರಾ.ಪಂ ಅಧ್ಯಕ್ಷ ರಾಜೀವ ಭಾಗವತ, ಎಮ್.ಎಸ್ ಹೆಗಡೆ ಅಣಲೇಬೈಲ್, ಗಣಪತಿ ಭಟ್ ಹೊಸ್ತೋಟ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಪ್ರತ್ಯೇಕ ಜಿಲ್ಲಾ ರಚನೆಗಾಗಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮನೆಮನೆ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ ನೀಡುವ ಮೂಲಕ, ನಮ್ಮ ಹೋರಾಟದ ಧ್ವನಿಯನ್ನು ಹೆಚ್ಚಿಸುತ್ತಿದ್ದೇವೆ. ಈ ಅಭಿಯಾನದಲ್ಲಿ ಪ್ರತಿಯೊಬ್ಬರೂ ಸ್ವಯಂಪ್ರೇರಣೆಯಿಂದ ಭಾಗಿಯಾಗಿ, ಪ್ರತ್ಯೇಕ ಜಿಲ್ಲೆ ಹೋರಾಟಕ್ಕೆ ಬೆಂಬಲ ನೀಡುವಂತಾಗಲಿ.– ಅನಂತಮೂರ್ತಿ ಹೆಗಡೆ, ಅಧ್ಯಕ್ಷರು, ಕದಂಬ ಕನ್ನಡ ಜಿಲ್ಲಾ ರಚನೆ ಮತ್ತು ಹಿತರಕ್ಷಣಾ ಟ್ರಸ್ಟ್