ಸಿದ್ದಾಪುರ: ಇಡೀ ದೇಶದ ಪ್ರತಿ ಹಿಂದುವಿನ ಮನೆಯಲ್ಲಿ ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ, ಜೀಜಾ ಬಾಯಿಯಂತಹ ವೀರ ವನಿತೆಯರು ಹುಟ್ಟುವಂತಾದಾಗ ಮಾತ್ರ ತಾಯಂದಿರು, ಅಕ್ಕ- ತಂಗಿಯರು ಸುರಕ್ಷಿತರಾಗಿರಲು ಸಾಧ್ಯ ಎಂದು ಶ್ರೀರಾಮ ಸೇನೆಯ ಪ್ರಮುಖ ಪ್ರಮೋದ ಮುತಾಲಿಕ್ ಹೇಳಿದರು.
ಪಟ್ಟಣದ ನೆಹರೂ ಮೈದಾನದಲ್ಲಿ ನಡೆದ ಯುಗಾದಿ ಉತ್ಸವದ ಮುಖ್ಯ ವಕ್ತಾರರಾಗಿ ಭಾಗಿಯಾಗಿ ಮಾತನಾಡಿ, ಮರಗಳು ತನ್ನ ಒಣ ಎಲೆಗಳನ್ನು ಉದುರಿಸಿ ಹೊಸದಾಗಿ ಚಿಗುರೊಡೆದು ಹಸಿರಾಗುವಂತೆ ಸ್ವಾಯಂತ್ರ್ಯ ಸಿಕ್ಕರೂ ನಮ್ಮಲ್ಲುಳಿದ ದಾಸ್ಯ ಮನೋಭಾವ ಕಿತ್ತೆಸೆದು ರಾಷ್ಟ್ರೀಯತೆಯ ಭಾವ ಬೆಳಸಿಕೊಳ್ಳಬೇಕು. ನಮ್ಮ ಶಾಲೆಗಳಲ್ಲಿರುವ ಇತಿಹಾಸ ಪಠ್ಯ ಕ್ರೂರಿ ಔರಂಗಜೇಬ್ನಂತವರನ್ನು ವಿಜೃಂಭಿಸಿದೆ. ಹಿಂದೂ ಪರ ಸಂಘಟನೆಗಳು ಇರದಿದ್ದರೆ ನಾವಿಂದು ನಿರ್ಭಯವಾಗಿ ಸಭೆ, ಸಭಾರಂಭಗಳನ್ನು ಮಾಡಲು ಆಗುತ್ತಿರಲಿಲ್ಲ. ನಮ್ಮಲ್ಲಿರುವ ತ್ರಿಶೂಲಧಾರಿ ಶಿವ ಮತ್ತು ಚಕ್ರಧಾರಿ ಕೃಷ್ಣನನ್ನು ಎಚ್ಚರಿಸಿದಾಗ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.
ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ನಾವು ಇಂದು ಪಾಶ್ಚಿಮಾತ್ಯ ಜೀವನ ಶೈಯತ್ತ ವಾಲುತ್ತಿದ್ದೇವೆ. ಅದು ಸರಿಯಾದ ಕ್ರಮವಲ್ಲ. ನಮ್ಮ ಗುರು ಹಿರಿಯರು ತೋರಿಸಿದ ಮಾರ್ಗವೇ ಧರ್ಮ. ಆದ್ದರಿಂದ ನಮ್ಮ ಸಂಸ್ಕೃತಿಯನ್ನು ನಾವು ಪಾಲಿಸುವಂತಾಗಬೇಕು ಎಂದರು.
ಸಭೆಯ ಸಾನಿಧ್ಯ ವಹಿಸಿದ್ದ ಶಿರಳಗಿ ರಾಜಾರಾಮ ಕ್ಷೇತ್ರದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಆಶೀರ್ವಚನ ನೀಡಿ ಮಾತನಾಡಿ ಹಿಂದೂಗಳು ಧರ್ಮ ಗ್ರಂಥವನ್ನು ಅಭ್ಯಾಸಮಾಡುವ ಪರಿಪಾಠ ರೂಢಿಸಿಕೊಳ್ಳಬೇಕು. ಇಂತಹ ಸತ್ಕಾರ್ಯದ ಸಂಕಲ್ಪವನ್ನು ಯುಗಾದಿಯಂದೇ ಮಾಡೋಣ. ಭಗವಂತನಿಂದ ಸ್ಥಾಪಿತವಾದ ಸನಾತನ ಧರ್ಮ ಯಾವಾಗಲೂ ಶಾಶ್ವತ ಎಂದರು.
ಸಭೆಯಲ್ಲಿ ಯುಗಾದಿ ಉತ್ಸವ ಸಮಿತಿಯ ಆನಂದ ಈರಾ ನಾಯ್ಕ, ಸುದರ್ಶನ ಪಿಳ್ಳೆ ಇದ್ದರು.
ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಶ್ರೀಧರ ವೈದ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಉತ್ಸವ ಸಮಿತಿಯ ಅಧ್ಯಕ್ಷ ಕೆ.ಜಿ. ನಾಯ್ಕ ಹಣಜೀಬೈಲ್ ವಂದಿಸಿದರು. ಸುಧಾರಾಣಿ ನಾಯ್ಕ ನಿರೂಪಿಸಿದರು.