ಸಂದೇಶ್ ಎಸ್.ಜೈನ್, ದಾಂಡೇಲಿ
ದಾಂಡೇಲಿ : ನಗರಸಭೆಯ ಮಾಜಿ ಉಪಾಧ್ಯಕ್ಷರು ಹಾಗೂ ಹಾಲಿ ಸದಸ್ಯರಾದ ಸಂಜಯ ನಂದ್ಯಾಳ್ಕರ ಅವರು ಪ್ರತಿನಿಧಿಸುತ್ತಿರುವ ಅಂಬೇವಾಡಿಯಲ್ಲಿರುವ ನಗರ ಸಭೆಯ ಅಧೀನದ ಉದ್ಯಾನವನದಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದ್ದು, ಇದು ಸ್ಥಳೀಯರ ಮೆಚ್ಚುಗೆಗೆ ಕಾರಣವಾಗಿದೆ.
ವೆಸ್ಟ್ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ಅಂದಾಜು ರೂ.5.50 ಲಕ್ಷ ರೂಪಾಯಿ ವೆಚ್ಚದಲ್ಲಿ ವಿವಿಧ ರೀತಿಯ ವ್ಯಾಯಾಮ ಸಲಕರಣೆಗಳನ್ನು ಇಲ್ಲಿ ಅಳವಡಿಸಲಾಗಿದೆ. ಮಕ್ಕಳಿಂದ ಹಿಡಿದು ವಯೋವೃದ್ಧರವರವರೆಗೆ ವ್ಯಾಯಾಮವನ್ನು ಮಾಡಲು ಅವಶ್ಯ ಬೇಕಾದ ವ್ಯಾಯಾಮ ಸಲಕರಣೆಗಳನ್ನು ಅಳವಡಿಸಲಾಗಿದೆ.
ನಗರಸಭೆಯ ಸದಸ್ಯರಾದ ಸಂಜಯ ನಂದ್ಯಾಳ್ಕರ್ ಅವರ ಮನವಿಯ ಮೇರೆಗೆ ಮತ್ತು ಶಾಸಕರಾದ ಆರ್.ವಿ. ದೇಶಪಾಂಡೆಯವರ ಸೂಚನೆಯಂತೆ ವೆಸ್ ಕೋಸ್ಟ್ ಕಾಗದ ಕಾರ್ಖಾನೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ರಾಜೇಂದ್ರ ಜೈನ್ ಅವರು ಅಂಬೇವಾಡಿಯ ಉದ್ಯಾನವನಕ್ಕೆ ಜಿಮ್ ಸಲಕರಣೆಗಳನ್ನು ಅಳವಡಿಸಲು ಅನುಮತಿಯನ್ನು ನೀಡಿ, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಾರ್ವಜನಿಕ ಸಂಪರ್ಕಾಧಿಕಾರಿಗಳಾದ ರಾಘವೇಂದ್ರ ಜೆ.ಆರ್ ಮತ್ತು ರಾಜೇಶ್ ತಿವಾರಿ ಅವರ ನೇತೃತ್ವದಲ್ಲಿ ಇತ್ತೀಚಿನ ಕೆಲ ದಿನಗಳ ಹಿಂದೆ ಅತ್ಯುತ್ತಮವಾದ ಜಿಮ್ ಸಲಕರಣೆಗಳನ್ನು ಅಳವಡಿಸಲಾಗಿದೆ.
ಉದ್ಯಾನವನವನ್ನು ಕೂಡ ಅಭಿವೃದ್ಧಿಪಡಿಸಲಾಗಿದ್ದು, ಮಕ್ಕಳು, ಹಿರಿಯರು, ಮಹಿಳೆಯರೆನ್ನದೆ ಸ್ಥಳೀಯ ನಿವಾಸಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಉದ್ಯಾನವನಕ್ಕೆ ಬಂದು ವಾಯು ವಿಹಾರ ಸೇರಿದಂತೆ ದೈಹಿಕ ಕಸರತ್ತುಗಳನ್ನು ಮಾಡುತ್ತಿದ್ದಾರೆ.
ಕಾಗದ ಕಾರ್ಖಾನೆಗೆ ಧನ್ಯವಾದ ಸಲ್ಲಿಸಿದ ಸಂಜಯ ನಂದ್ಯಾಳ್ಕರ್ :
ನಮ್ಮ ಮನವಿಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ಸಕಾಲದಲ್ಲಿ ಸ್ಪಂದಿಸಿ, ಜಿಮ್ ಸಲಕರಣೆಗಳನ್ನು ಅಳವಡಿಸಿಕೊಟ್ಟಿದ್ದಾರೆ. ಕಾಗದ ಕಾರ್ಖಾನೆಯು ಅತ್ಯಂತ ಬದ್ಧತೆಯಿಂದ ಸಾಮಾಜಿಕ ಸೇವಾ ಕಾರ್ಯಗಳನ್ನು ಮಾಡುತ್ತಿದೆ. ವಾರ್ಡಿನ ಜನತೆಯ ಪರವಾಗಿ ಕಾಗದ ಕಾರ್ಖಾನೆಗೆ ನಗರ ಸಭಾ ಸದಸ್ಯರಾದ ಸಂಜಯ ನಂದ್ಯಾಳ್ಕರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.