ದಾಂಡೇಲಿ : ಶ್ರೀ ಸಂಸ್ಥಾನ ಗೋಕರ್ಣ ಪರ್ತಗಾಳಿ ಮಠದ ಪರಮಪೂಜ್ಯ ಶ್ರೀಮದ್ ವಿದ್ಯಾಧೀಶ ತೀರ್ಥ ಶ್ರೀಪಾದ ಸ್ವಾಮೀಜಿಯವರು ಬುಧವಾರ ನಗರದ ಕುಳಗಿ ರಸ್ತೆಯಲ್ಲಿರುವ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನಕ್ಕೆ ಭೇಟಿ ನೀಡಿದರು.
ದೇವಸ್ಥಾನಕ್ಕೆ ಭೇಟಿ ನೀಡಿದ ಪೂಜ್ಯರನ್ನು ದೇವಸ್ಥಾನದ ಆಡಳಿತ ಸಮಿತಿಯ ಪದಾಧಿಕಾರಿಗಳು ಹಾಗೂ ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಪದಾಧಿಕಾರಿಗಳು ಮತ್ತು ಸಮಾಜ ಬಾಂಧವರು ಭಕ್ತಿಪೂರ್ವಕವಾಗಿ ಸ್ವಾಗತಿಸಿದರು. ಆನಂತರ ಪೂಜ್ಯರು ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಭಾಗವಹಿಸಿದರು.
ನಂತರ ನಡೆದ ಶ್ರೀ ರಾಮ ನಾಮ ಜಪ ಅಭಿಯಾನದ ಸಾನಿಧ್ಯವನ್ನು ವಹಿಸಿ ಆಶೀರ್ವಚನವನ್ನು ನೀಡಿದರು. ಈ ಸಂದರ್ಭದಲ್ಲಿ ಶ್ರೀ ರಾಮ ನಾಮ ಜಪ ಅಭಿಯಾನವು ಅತ್ಯಂತ ಶ್ರದ್ದಾಭಕ್ತಿಯಿಂದ ನಡೆಯುತ್ತಿರುವುದನ್ನು ಶ್ಲಾಘಿಸಿದರು. ಪರಿಶುದ್ಧ ಮನಸ್ಸಿನಿಂದ ಮಾಡುವ ದೇವರ ಆರಾಧನೆ, ಜಪ, ಪ್ರಾರ್ಥನೆಯಿಂದ ಮಾನಸಿಕವಾದ ನೆಮ್ಮದಿಯ ಜೊತೆಗೆ ಸ್ವಾಸ್ಥ್ಯ ಸಮಾಜ ನಿರ್ಮಾಣ ಸಾಧ್ಯ ಎಂದು ಹೇಳಿ, ದಾಂಡೇಲಿಯಲ್ಲಿ ರಾಮ ನಾಮ ಜಪ ಅಭಿಯಾನವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
2024ರ ಏಪ್ರಿಲ್ 17 ಆರಂಭಗೊಂಡಿರುವ ರಾಮ ನಾಮ ಜಪ ಅಭಿಯಾನವು ಇದೇ ವರ್ಷ ಅಕ್ಟೋಬರ್ 18 ರಂದು ಸಂಪನ್ನಗೊಳ್ಳಲಿದೆ.
ವೇದಿಕೆಯಲ್ಲಿ ವೈದಿಕರಾದ ಹೃಷಿಕೇಶ ಭಟ್ ಮತ್ತು ಪ್ರಶಾಂತ ಭಟ್, ಜಿ.ಎಸ್.ಬಿ ಸಮಾಜದ ಅಧ್ಯಕ್ಷರಾದ ರಾಧಾಕೃಷ್ಣ ಹೆಗಡೆ, ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಜನಾರ್ಧನ ಪ್ರಭು, ಜಿ.ಎಸ್.ಬಿ ಯುವ ವಾಹಿನಿಯ ಅಧ್ಯಕ್ಷರಾದ ಪುರುಷೋತ್ತಮ ಮಲ್ಯ, ಜಿ.ಎಸ್.ಬಿ.ಸಮಾಜದ ಕಾರ್ಯದರ್ಶಿ ಸುರೇಶ ಕಾಮತ್, ಪ್ರಮುಖರಾದ ನಿತೀನ್ ಕಾಮತ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಜಿ.ಎಸ್.ಬಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.