ಕಾರವಾರ: ರಾಜ್ಯದಲ್ಲಿ ಪ್ರಸ್ತುತ ಬೇಸಿಗೆ ಸಮಯದಲ್ಲಿ ವಾಡಿಕೆಗಿಂತ ಅಧಿಕ ಉಷ್ಣಾಂಶ ದಾಖಲಾಗುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲೂ ಬಿಸಿಯಾದ ಗಾಳಿ, ಶಾಖ ತರಂಗ, ತಾಪಾಘಾತದಿಂದ ಆರೋಗ್ಯದ ಮೇಲೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ.
ಅತಿಯಾದ ಉಷ್ಣತೆಯಿಂದ ಸಾಧಾರಣದಿಂದ ತೀವ್ರ ಜ್ವರ, ಗಂಧೆಗಳು, ಕೈ-ಕಾಲು ಹಾಗೂ ಮೊಣಕಾಲು ಊತಗಳು, ಸ್ನಾಯುಗಳ ಸೆಳೆತ, ಪ್ರಜ್ಞೆ ತಪ್ಪುವುದು, ಸುಸ್ತಾಗುವುದು ಮುಂತಾದ ಆರೋಗ್ಯ ಸಮಸ್ಯೆಗಳು ಉಂಟಾಗುವ ಸಾಧ್ಯತೆಯಿದೆ. ಕೆಲವೊಂದು ವ್ಯಕ್ತಿಗಳಲ್ಲಿ ಹೃದ್ರೋಗ ಸಮಸ್ಯೆಗಳು, ಉಸಿರಾಟದ ಸಮಸ್ಯೆಗಳು ಹಾಗೂ ಕಿಡ್ನಿ ಸಮಸ್ಯೆಗಳು, ಪಾರ್ಶ್ವವಾಯು ಕೂಡ ಉಂಟಾಗಬಹುದಾಗಿದೆ. ಇದಲ್ಲದೇ, ತಲೆ ಸುತ್ತುವುದು, ವಾಂತಿಯಾಗುವುದು, ತಲೆನೋವು, ಅತಿಯಾದ ಬಾಯಾರಿಕೆ, ಮೂತ್ರ ವಿಸರ್ಜನೆ ಪ್ರಮಾಣದಲ್ಲಿ ಕಡಿಮೆಯಾಗುವುದು ಹಾಗೂ ಹಳದಿ ಬಣ್ಣದ ಮೂತ್ರ, ಏರು ಗತಿಯ ಹೃದಯದ ಬಡಿತ ಉಂಟಾಗುವ ಅಪಾಯಗಳಿವೆ.
ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು, ಆರೋಗ್ಯ ಸಮಸ್ಯೆಗಳಿರುವವರು, ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು, ತಂಪಾದ ವಾತಾವರಣವಿರುವ ಪ್ರದೇಶದಿಂದ ಬಿಸಿಯಾದ ವಾತಾವರಣದ ಪ್ರದೇಶಕ್ಕೆ ಭೇಟಿ ನೀಡುವ ಜನರು ತಾಪಾಘಾತಕ್ಕೆ ಹೆಚ್ಚು ತುತ್ತಾಗುವರು.
ಸಾರ್ವಜನಿಕರು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಯ ಕ್ರಮಗಳು:
ಸಾರ್ವಜನಿಕರು ರೇಡಿಯೋ, ದೂರದರ್ಶನ ಹಾಗೂ ದಿನಪತ್ರಿಕೆಗಳಲ್ಲಿ ಬರುವ ಅತಿಯಾದ ಬಿಸಿಲಿನ ಕುರಿತು ಮುನ್ಸೂಚನೆಗಳನ್ನು ಪಡೆದುಕೊಳ್ಳುವುದು. ಬಾಯಾರಿಕೆಯಿಲ್ಲದಿದ್ದರೂ ಸಾಕಷ್ಟು ಮತ್ತು ಸಾಧ್ಯವಾದಷ್ಟು ಹೆಚ್ಚಾಗಿ ನೀರನ್ನು ಕುಡಿಯುವುದು.ಹಗುರವಾದ, ತಿಳಿ ಬಣ್ಣದ, ಸಡಿಲವಾದ ಮತ್ತು ರಂಧ್ರವುಳ್ಳ ಹತ್ತಿ ಬಟ್ಟೆಗಳನ್ನು ಧರಿಸಿ. ಬಿಸಿಲಿನಲ್ಲಿ ಹೊರಗೆ ಹೋಗುವಾಗ ರಕ್ಷಣಾತ್ಮಕ ಕನ್ನಡಕಗಳು, ಟೋಪಿ, ಬೂಟ್ಗಳು, ಟವೆಲ್ ಅಥವಾ ಚಪ್ಪಲಿಗಳನ್ನು ಬಳಸಿ.
ಬಸ್ಸಿನಲ್ಲಿ ದೂರದ ಪ್ರಯಾಣವನ್ನು ರಾತ್ರಿ ವೇಳೆ ಮಾಡುವುದು ಉತ್ತಮ. ಒಂದು ವೇಳೆ ಪ್ರಯಾಣ ಮಾಡುವ ಸಂದರ್ಭ ಬಂದರೆ, ಪ್ರಯಾಣ ಮಾಡುವಾ ನಿಮ್ಮೊಂದಿಗೆ ನೀರನ್ನು ಒಯ್ಯಿರಿ. ನೀವು ಹೊರಗೆ ಕೆಲಸ ಮಾಡುತ್ತಿದ್ದರೆ ಟೋಪಿ ಅಥವಾ ಛತ್ರಿಯನ್ನು ಬಳಸಿ ಮತ್ತು ನಿಮ್ಮ ತಲೆ, ಕುತ್ತಿಗೆ, ಮುಖ ಮತ್ತು ಕೈಕಾಲುಗಳ ಮೇಲೆ ಒದ್ದೆಯಾದ ಬಟ್ಟೆಯನ್ನು ಸಹ ಬಳಸಿ.
ಮನೆಯಲ್ಲಿ ತಯಾರಿಸಿದ ಪಾನೀಯಗಳಾದ ಲಸ್ಸಿ, ಶರಬತ್ತು, ನಿಂಬೆ ನೀರು, ಮಜ್ಜಿಗೆ ಇತ್ಯಾದಿಗಳನ್ನು ಬಳಸಿ ಅದು ದೇಹವನ್ನು ಪುನಃ ತಂಪಾಗಿಡಲು ಸಹಾಯ ಮಾಡುತ್ತದೆ. ಪ್ರಾಣಿ/ಪಕ್ಷಿಗಳನ್ನು ನೆರಳಿನಲ್ಲಿ ಇರಿಸಿ ಮತ್ತು ಅವುಗಳಿಗೆ ಕುಡಿಯಲು ಸಾಕಷ್ಟು ನೀರು ನೀಡಿ. ಆದಷ್ಟು ಫ್ಯಾನ್ಗಳನ್ನು ಬಳಸಿ, ಒದ್ದೆಯಾದ ಬಟ್ಟೆಗಳನ್ನು ಮತ್ತು ಆಗಾಗ್ಗೆ ತಣ್ಣೀರಿನಲ್ಲಿ ಸ್ನಾನ ಮಾಡಿ. ಕೆಲಸಗಳನ್ನು ಆದಷ್ಟು ತಂಪಾದ ಸಮಯದಲ್ಲಿ ಮಾಡುವುದು ಹಾಗೂ ಕೆಲಸದ ಸ್ಥಳದ ಬಳಿ ತಂಪಾದ ಕುಡಿಯುವ ನೀರನ್ನು ಒದಗಿಸುವುದು.
ಕೆಲಸ ನಿರ್ವಹಿಸುವ ಗರ್ಭಿಣಿ ಮಹಿಳೆಯರು ಮತ್ತು ಅನಾರೋಗ್ಯದಲ್ಲಿರುವ ಕಾರ್ಮಿಕರಿಗೆ ಹೆಚ್ಚಿನ ಗಮನ ನೀಡಬೇಕು. ಕಲ್ಲಂಗಡಿ, ಕರಬೂಜ, ಕಿತ್ತಳೆ, ದ್ರಾಕ್ಷಿ, ಅನಾನಸ್, ಸೌತೆಕಾಯಿ, ಎಳೆನೀರುಗಳನ್ನು ಹೆಚ್ಚಾಗಿ ಸೇವಿಸಬೇಕು. ನವಜಾತ ಶಿಶುಗಳು, ಚಿಕ್ಕ ಮಕ್ಕಳು, ಗರ್ಭಿಣಿಯರು, ಹೊರಾಂಗಣದಲ್ಲಿ ಕೆಲಸ ನಿರ್ವಹಿಸುವವರು, ಮಾನಸಿಕ ಸಮಸ್ಯೆಗಳಿಂದ ಬಳಲುತ್ತಿರುವವರು ಹಾಗೂ ಆರೋಗ್ಯ ಸಮಸ್ಯೆಗಳಿರುವವರು ಅದರಲ್ಲೂ ವಿಶೇಷವಾಗಿ ಹೃದ್ರೋಗ ಹಾಗೂ ರಕ್ತದ ಒತ್ತಡದಿಂದ ಬಳಲುತ್ತಿರುವವರು ಹೆಚ್ಚು
ವಹಿಸಬೇಕು.
ಬೇಸಿಗೆ ಸಮಯದಲ್ಲಿ ಏನನ್ನು ಮಾಡಬಾರದು :
ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ಬಿಸಿಲಿನಲ್ಲಿ ನಿಲ್ಲಿಸಿದ ವಾಹನಗಳ ಹತ್ತಿರ ಬಿಡಬೇಡಿ. ಕಪ್ಪು ಬಟ್ಟೆ ಅಥವಾ ಬಿಗಿಯಾದ ಬಟ್ಟೆಗಳನ್ನು ಧರಿಸುವುದು ತಪ್ಪಿಸಿ. ಹೊರಗಿನ ತಾಪಮಾನ ಹೆಚ್ಚಾದಾಗ ಶ್ರಮದಾಯಕ ಚಟುವಟಿಕೆಗಳನ್ನು ತಪ್ಪಿಸಿ. ಮಧ್ಯಾಹ್ನ 12 ರಿಂದ ಮಧ್ಯಾಹ್ನ 3 ವರೆಗೆ ಹೊರಗೆ ಕೆಲಸ ಮಾಡುವುದನ್ನು ತಪ್ಪಿಸಿ. ಬಿಸಿಲಿನ ಸಮಯದಲ್ಲಿ ಅಡುಗೆ ಮಾಡುವುದು ತಪ್ಪಿಸಿ. ಅಡುಗೆ ಪ್ರದೇಶವನ್ನು ಸಮರ್ಪಕವಾಗಿ ಗಾಳಿಯಾಡಲು ಕಿಟಕಿ ಹಾಗೂ ಬಾಗಿಲುಗಳನ್ನು ತೆರೆಯಿರಿ.
ದೇಹವನ್ನು ನಿರ್ಜಲೀಕರಣಗೊಳಿಸುವ ಆಲ್ಕೋಹಾಲ್, ಚಹಾ, ಕಾಫಿ ಮತ್ತು ಹಾನಿಕಾರಕ ತಂಪು ಪಾನೀಯಗಳನ್ನು ಸೇವಿಸಬೇಡಿ. ಹಾನಿಕಾರಕವಾದ ಆಹಾರ ಮತ್ತು ಹಳಸಿದ ಆಹಾರವನ್ನು ಸೇವಿಸಬೇಡಿ. ಬಿಸಿಲಿನಲ್ಲಿ, ಅಂದರೆ ಮಧ್ಯಾಹ್ನ 12 ಗಂಟೆಯಿಂದ 3 ಗಂಟೆಯವರೆಗೆ ಹೊರಹೋಗುವುದನ್ನು ತಪ್ಪಿಸಬೇಕು. ಈ ಸಂದರ್ಭದಲ್ಲಿ ಹೊರಾಂಗಣ ಚಟುವಟಿಕೆಗಳನ್ನು ಮಾಡಬಾರದು.ಚಪ್ಪಲಿ ಧರಿಸದೆ ಹೊರಹೋಗುವ ಅಭ್ಯಾಸವನ್ನು ತಪ್ಪಿಸಿ. ಮಧ್ಯಪಾನ, ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ ಪಾನೀಯಗಳು ಅಥವಾ ಹೆಚ್ಚು ಸಕ್ಕರೆ ಅಂಶವನ್ನು ಹೊಂದಿದ ಪಾನೀಯಗಳಿಂದ ದೂರವಿರಿ. ಇಂತಹ ಪಾನೀಯಗಳು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ ಅಥವಾ ಹೊಟ್ಟೆ ನೋವನ್ನು ಉಂಟುಮಾಡುತ್ತವೆ.
ಹೆಚ್ಚು ಪ್ರೊಟೀನ್ ಭರಿತವಾದ ಹಾಗೂ ಹಳೆಯದಾದ ಆಹಾರ ಪದಾರ್ಥಗಳನ್ನು ಸೇವಿಸಬೇಡಿ. ಮಕ್ಕಳು ಅಥವಾ ಸಾಕು ಪ್ರಾಣಿಗಳನ್ನು ನಿಲುಗಡೆ ಮಾಡಿರುವ ವಾಹನಗಳಲ್ಲಿ ಬಿಡಬೇಡಿ. ವಾಹನಗಳ ಒಳಾಂಗಣದಲ್ಲಿನ ಹೆಚ್ಚಿನ ತಾಪಮಾನವು ಅವರು/ಅವುಗಳಿಗೆ ಅಪಾಯಕಾರಿಯಾಗಬಹುದು.
ಇಷ್ಟೆ ಅಲ್ಲದೆ ಕೆಲಸದ ಸ್ಥಳಗಳಲ್ಲಿ ಮಾಡಬೇಕಾದ ವ್ಯವಸ್ಥೆಗಳೂ ಸೇರಿದಂತೆ ಇನ್ನೂ ಅನೇಕ ಸಲಹೆ ಸೂಚನೆಗಳನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಆರೋಗ್ಯ ಇಲಾಖೆಯಿಂದ ನೀಡಲಾಗುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕು.ಕ. ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.