ಶಿರಸಿ: ಇಲ್ಲಿನ ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿಯ ಪ್ರಧಾನ ಕಛೇರಿಯಲ್ಲಿ ಮಾ.19 ಬುಧವಾರದಂದು ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳ ಪ್ರಾಥಮಿಕ ಮತ್ತು ಮಾರಾಟ ಸಹಕಾರ ಸಂಘಗಳ ಪದಾಧಿಕಾರಿಗಳಿಗೆ ಒಂದು ದಿನದ ಜಿಲ್ಲಾ ಮಟ್ಟದ ವಿಶೇಷ ತರಬೇತಿ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿಯಮಿತ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ., ಕುಮಟ, ಟಿ.ಎಸ್.ಎಸ್. ಲಿ., ಶಿರಸಿ, ಟಿ.ಎಂ.ಎಸ್. ಲಿ., ಶಿರಸಿ, ಟಿ.ಎಂ.ಎಸ್. ಲಿ., ಸಿದ್ದಾಪುರ, ಟಿ.ಎಂ.ಎಸ್. ಲಿ., ಯಲ್ಲಾಪುರ ಹಾಗೂ ಶಿರಸಿ, ಸಿದ್ದಾಪುರ, ಯಲ್ಲಾಪುರ ಮುಂಡಗೋಡ ತಾಲೂಕುಗಳ ಪ್ರಾಥಮಿಕ ಮತ್ತು ಮಾರಾಟ ಸಹಕಾರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಚಾರ್ಟರ್ಡ್ ಅಕೌಂಟಂಟ್ ಬಿ.ವಿ. ರವೀಂದ್ರನಾಥ ಸಾಗರ ಇವರು ಸಹಕಾರ ಸಂಘಗಳ ನಿರ್ವಹಣೆಯಲ್ಲಿ ಆಡಳಿತ ಮಂಡಳಿಯ ಪಾತ್ರ ಎಂಬ ವಿಷಯವಾಗಿ ತರಬೇತಿ ನೀಡಿದರು.
ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷರಾದ ಶಂಭುಲಿಂಗ ಹೆಗಡೆ ನಡಗೋಡ ದೀಪ ಬೆಳಗಿಸುವುದರ ಮೂಲಕ ಎರಡನೇ ಆವೃತ್ತಿಯ ತರಬೇತಿ ಕಾರ‍್ಯಕ್ರಮ ಉದ್ಟಾಟಿಸಿ ಮಾತನಾಡಿ ಸಹಕಾರ ಸಂಘಗಳು ಸಾವಿರಾರು ಸದಸ್ಯರು ಹಣ ತೊಡಗಿಸುವ ರೈತ ಮಂದಿರ. ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆತ್ಮಾವಲೋಕನೆ ಮಾಡಿಕೊಂಡು ಗಂಭೀರ ಚಿಂತನೆ ನಡೆಸಿ ದಕ್ಷ ಆಡಳಿತ ನೀಡುವುದು ಅತ್ಯಗತ್ಯ ಎಂದರು.
ಮುಖ್ಯ ಅತಿಥಿಗಳಾದ ಟಿ.ಎಂ.ಎಸ್.ಲಿ. ಶಿರಸಿ ಅಧ್ಯಕ್ಷರಾದ ಜಿ.ಟಿ.ಹೆಗಡೆ ತಟ್ಟೀಸರ ಮಾತನಾಡಿ ಇತ್ತೀಚಿನ ದಿನಗಳಲ್ಲಿ ಸಹಕಾರ ರಂಗದಲ್ಲಿ ಸರಕಾರದ ಹಸ್ತಕ್ಷೇಪ ಮತ್ತು ಪದೇ ಪದೇ ಬದಲಾಗುತ್ತಿರುವ ಕಾಯಿದೆ ಕಾನೂನುಗಳಿಂದ ಸಹಕಾರಿಗಳ ಚುನಾವಣೆ ಮತ್ತು ಆಡಳಿತ ನಿರ್ವಹಣೆಯಲ್ಲಿ ಗೊಂದಲಗಳಿಂದಾಗಿ ಹೆಚ್ಚಿನ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರುವಂತಾಗಿದೆ ಎಂದರು.
ಟಿ.ಎಸ್.ಎಸ್. ಪರಿಣತ ನಿರ್ದೇಶಕರಾದ ನರಸಿಂಹ ಜಿ. ಹೆಗಡೆ ಬಾಳೇಗದ್ದೆ ಇವರು ಸಹಕಾರ ಸಂಘಗಳ ಪದಾಧಿಕಾರಿಗಳು ತಮ್ಮ ಪಾತ್ರ, ಹಕ್ಕು ಜವಾಬ್ದಾರಿಗಳನ್ನು ಸೂಕ್ತವಾಗಿ ನಿರ್ವಹಿಸಬೇಕು. ಏಳು-ಬೀಳುಗಳನ್ನು ಸರಿದೂಗಿಸಿಕೊಂಡು ಸದಸ್ಯರಿಗೆ ತಿಳುವಳಿಕೆ ನೀಡಿ ಮುಂದಿನ ಪೀಳಿಗೆಗೆ ಮಾದರಿಯಾಗುವಂತೆ ಕರ್ತವ್ಯ ನಿರ್ವಹಿಸಬೇಕು. ಮನೆಯ ಪ್ರತೀ ಸದಸ್ಯರಿಗೂ ಆರ್ಥಿಕ ಅರಿವು ತುಂಬಾ ಮುಖ್ಯ ಎಂದು ಅಭಿಪ್ರಾಯಟ್ಟರು. ಉತ್ತರ ಕನ್ನಡ ಜಿಲ್ಲಾ ಸಹಕಾರಿ ಯುನಿಯನ್ ಉಪಾಧ್ಯಕ್ಷರಾದ ಶ್ರೀಪಾದ ನಾರಾಯಣ ರಾಯ್ಸದ್, ಮಾತನಾಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಕರ್ನಾಟಕದಲ್ಲೇ ಅತೀ ಹೆಚ್ಚು ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತರಿದ್ದಾರೆ. ಅವರ ಸಮರ್ಥ ನಾಯಕತ್ವದಲ್ಲಿ ಎಲ್ಲ ಸದಸ್ಯರಿಗೂ ಸಾಕಷ್ಟು ಅನುಕೂಲವಾಗಿದೆ ಎಂದು ತಿಳಿಸಿದರು. ಉ.ಕ. ಜಿಲ್ಲಾ ಯೂನಿಯನ್ ನಿರ್ದೇಶಕರಾದ
ಮಹೇಂದ್ರ ಎಸ್ ಭಟ್ಟ, ಎಂ.ವಿ.ಹೆಗಡೆ ಉಪಸ್ಥಿತರಿದ್ದರು. ಕರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉ.ಕ. ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷರಾದ ವಿ.ಎನ್.ಭಟ್ಟ ಅಳ್ಳಂಕಿ ಮಾತನಾಡಿ ಪ್ರೌಢಶಾಲೆ, ಪದವಿ ಪೂರ್ವ ವಿದ್ಯಾಲಯ ಮತ್ತು ಮಹಾ ವಿದ್ಯಾಲಯಗಳಲ್ಲೂ ಸಹಕಾರ ತರಬೇತಿ ನಡೆಸುತ್ತಿದ್ದೇವೆ. ಸುಮಾರು 25 ತರಬೇತಿ ಕರ‍್ಯಾಗಾರಗಳು ಜಿಲ್ಲೆಯ ವಿವಿಧ ಕಡೆ ಜರುಗಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಹಕಾರ ಸಂಘಗಳಿಂದ ರೈತ ವರ್ಗಕ್ಕೆ ಸಾಕಷ್ಟು ಅನುಕೂಲವಾಗಿದೆ. ಇದನ್ನು ಇನ್ನಷ್ಟು ಬಲಪಡಿಸುವುದು ನಮ್ಮ ಕರ್ತವ್ಯ ಎಂದು ಆಶಿಸಿದರು.
ಶಿರಸಿ ಸಿದ್ದಾಪುರ ಯಲ್ಲಾಪುರ ಮುಂಡಗೋಡ ತಾಲೂಕುಗಳ ಪ್ರಾಥಮಿಕ ಮತ್ತು ಮಾರಾಟ ಸಹಕಾರ ಸಂಘಗಳ ಅಧ್ಯಕ್ಷರು, ಉಪಾಧ್ಯಕ್ಷರು, ನಿರ್ದೇಶಕರು, ಮುಖ್ಯಕಾರ್ಯನಿರ್ವಾಹಕರು ಭಾಗವಹಿಸಿ ತರಬೇತಿ ಕರ‍್ಯಕ್ರಮದ ಪ್ರಯೋಜನ ಪಡೆದುಕೊಳ್ಳುವುದರೊಂದಿಗೆ ಯಶಸ್ವಿಗೊಳಿಸಿದರು. ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ಸಿಬ್ಬಂದಿ ಶ್ರೀಮತಿ ಶ್ವೇತಾ ಹೆಗಡೆ ಪ್ರಾರ್ಥಿಸಿದರು. ಉ.ಕ. ಜಿಲ್ಲಾ ಸಹಕಾರಿ ಯೂನಿಯನ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋಪಾಲ ನಾಯಕ ಸ್ವಾಗತಿಸಿದರು. ಟಿ.ಎಸ್.ಎಸ್. ನೌಕರ ಗೋಪಾಲ ಹೆಗಡೆ ಕಾರ‍್ಯಕ್ರಮ ನಿರೂಪಿಸಿದರು. ಕದಂಬ ಮಾರ್ಕೇಟಿಂಗ್ ಸೌಹಾರ್ದ ಸಹಕಾರಿ ನಿಯಮಿತ ವ್ಯಾಪಾರ ಅಭಿವೃದ್ದಿ ಅಧಿಕಾರಿ ವಿಶ್ವೇಶ್ವರ ಭಟ್ಟ ವಂದಿಸಿದರು.