ಬೆಂಗಳೂರು: ಅಖಿಲ ಭಾರತೀಯ ಪ್ರತಿನಿಧಿ ಸಭೆಯು ಬೆಂಗಳೂರಿನ ಚನ್ನೇನಹಳ್ಳಿ ಜನಸೇವಾ ವಿದ್ಯಾಕೇಂದ್ರದಲ್ಲಿ ಮಾ.21,22,23ರಂದು ನಡೆಯಲಿದೆ ಎಂದು ಆರ್‌ಎಸ್‌ಎಸ್ ಅಖಿಲ ಭಾರತೀಯ ಪ್ರಚಾರ ಪ್ರಮುಖ್ ಸುನಿಲ್ ಅಂಬೇಕರ್ ತಿಳಿಸಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ, ಈ ಸಭೆಯಲ್ಲಿ ದೇಶದೆಲ್ಲೆಡೆಯಿಂದ ಅಪಾರ ಪ್ರತಿನಿಧಿಗಳು ಉಪಸ್ಥಿತರಿರಲಿದ್ದು, ಸಂಘದ ವಿವಿಧ ಸ್ತರಗಳ ಪದಾಧಿಕಾರಿಗಳು, ಕಾರ್ಯಕರ್ತರು ಕೂಡ ಉಪಸ್ಥಿತರಿರಲಿದ್ದಾರೆ. ಮಾರ್ಚ್ 21 ರಂದು ಬೆಳಿಗ್ಗೆ 9 ಗಂಟೆಗೆ ಸಭೆ ಪ್ರಾರಂಭಗೊಳ್ಳಲಿದೆ. ಅಖಿಲ ಭಾರತೀಯ ಪ್ರತಿನಿಧಿ ಸಭೆಗೆ ಸಂಘದ ನಿರ್ಣಯಗಳ ವಿಷಯದಲ್ಲಿ ಉನ್ನತ ಸ್ಥಾನವಿದೆ. ಸಂಘದ ರಚನೆಯಲ್ಲಿ ಅತ್ಯಂತ ಮಹತ್ವಪೂರ್ಣ ಸಭೆಯಾಗಿದ್ದು ಸಭೆಯ ಪ್ರಾರಂಭದಲ್ಲಿ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು ಸಂಘದ ಹಿಂದಿನ ವರ್ಷದ 2024-25 ರ ವರದಿ ಮಂಡಿಸಲಿದ್ದಾರೆ. ವಿಶೇಷವಾಗಿ ಹಿಂದಿನ ವರ್ಷದ ಶಾಖಾ ಕಾರ್ಯಕ್ರಮ, ಇತರ ಕಾರ್ಯಕ್ರಮ, ಸಂಘದ ವಹಿಸಿದ ಪಾತ್ರ ಎಲ್ಲದರ ಬಗ್ಗೆಯೂ ಮಾಹಿತಿ ಇರುವ ವರದಿ ಮಂಡಿಸಲಿದ್ದಾರೆ. ಇದರ ಜೊತೆಗೆ ದೇಶದಾದ್ಯಂತ ವಿವಿಧ ಪ್ರಾಂತಗಳ ಕಾರ್ಯಗಳ, ವಿಶೇಷ ಕೆಲಸಗಳ, ಕಾರ್ಯಕರ್ತರ ಸೇವೆ ಮುಂತಾದವುಗಳ ಬಗ್ಗೆಯೂ ಮಾಹಿತಿ, ವಿಶ್ಲೇಷಣೆಗಳೂ ನಡೆಯಲಿವೆ ಎಂದರು.
2025ಕ್ಕೆ ಸಂಘ 100 ವರ್ಷ ಪೂರ್ಣಗೊಳಿಸಲಿದೆ. 1925 ಸಂಘದ ಚಟುವಟಿಕೆ ನಾಗಪುರದಲ್ಲಿ ಆರಂಭಗೊಡಿತು. ಬಳಿಕ ದೇಶವ್ಯಾಪಿ ವಿಸ್ತಾರಗೊಂಡಿತು. ಈಗ ಅದು 100 ವರ್ಷಗಳನ್ನು ಪೂರೈಸುತ್ತಿದೆ. ಹೀಗಾಗಿ ವಿಜಯದಶಮಿ 2025 ಮತ್ತು ವಿಜಯದಶಮಿ 2026ರ ನಡುವಿನ ಒಂದು ವರ್ಷವನ್ನು ಶತಾಬ್ಧಿ ವರ್ಷವಾಗಿ ಆಚರಿಸಲಾಗುವುದು. ಈ ಒಂದು ವರ್ಷದಲ್ಲಿ ಕೈಗೊಳ್ಳಲಾಗುವ ಕಾರ್ಯಕ್ರಮಗಳ ಬಗ್ಗೆ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ನಿರ್ಣಯ ತೆಗೆದುಕೊಳ್ಳಲಾಗುವುದು. ಸಭೆಯ ಅಂತ್ಯದಲ್ಲಿ ಇದನ್ನು ಸಾರ್ವಜನಿಕಗೊಳಿಸಲಾಗುವುದು ಎಂದರು.
ಎಲ್ಲಾ ವರ್ಗದ ಜನರನ್ನು ತಲುಪುವುದು, ನಮ್ಮ ವಿಚಾರಧಾರೆ,ಕಾರ್ಯಗಳನ್ನು ತಲುಪಿಸುವುದು, ವಿಚಾರಗಳನ್ನು ಸ್ಪಷ್ಟಪಡಿಸುವಂತಹ ವ್ಯಾಪಕವಾದ ಔಟ್‌ರೀಚ್ ಕಾರ್ಯಗಳನ್ನು ಶತಾಬ್ದಿ ವರ್ಷದಲ್ಲಿ ಪ್ರಮುಖವಾಗಿ ನಡೆಸಲಾಗುವುದು. ಸಂಘಕಾರ್ಯಗಳಲ್ಲಿ ಜನರ ಭಾಗಿದಾರಿಯನ್ನು ವೃದ್ಧಿಸುವ ಬಗ್ಗೆಯೂ ಹೆಚ್ಚಿನ ಗಮನ ನೀಡಲಾಗುವುದು. ಸಾಮಾಜಿಕ ಸಾಮರಸ್ಯ, ಕುಟುಂಬ ಪ್ರಬೋಧನ್, ಪ್ರಕೃತಿ ಸಂರಕ್ಷಣೆ, ಸ್ವದೇಶಿ ಜೀವನಶೈಲಿ, ನಾಗರಿಕ ಕರ್ತವ್ಯ ವಿಷಯಗಳ ಪಂಚ ಪರಿವರ್ತನೆಯ ಮೇಲೆ ವಿಶೇಷ ಯೋಜನೆ ರೂಪಿಸಲಾಗುವುದು ಎಂದರು.
ವಿಶೇಷವಾಗಿ ಎರಡು ನಿರ್ಣಯಗಳನ್ನು ಸಭೆಯಲ್ಲಿ ಮಂಡಿಸಲಾಗುವುದು. ಅದೇದಂದರೆ ಬಾಂಗ್ಲಾದೇಶದಲ್ಲಿನ ಘಟನೆ ಮತ್ತು ಭವಿಷ್ಯದಲ್ಲಿ ಯಾವ ಪಾತ್ರ ವಹಿಸಬೇಕು ಎಂಬುದು, ಎರಡನೇಯದು ಸಂಘಕಾರ್ಯದ 100 ವರ್ಷಗಳ ಪಯಣ, ಮುಂಬರುವ ಕಾರ್ಯಗಳ ಬಗ್ಗೆ ಪ್ರಸ್ತಾಪ ಮಂಡಿಸಲಾಗುವುದು. ದೇಶದ ಅಖಂಡತೆಗೆ ಕೊಡುಗೆ ನೀಡಿದ ವೀರರಲ್ಲಿ ಒಬ್ಬಳಾದ ಈ ನೆಲದ ರಾಣಿ ಅಬ್ಬಕ್ಕ 1525ರಲ್ಲಿ ಜನಿಸಿದ್ದು, ಆಕೆಯ 500 ಜನ್ಮ ವಾರ್ಷಿಕೋತ್ಸವದ ಸಂದರ್ಭ ಆಕೆಯ ವಿಶೇಷ ಕೊಡುಗೆಯನ್ನು ಗೌರವಿಸಲು ರೂಪುರೇಷೆಗಳನ್ನೂ ಅಂತಿಮಗೊಳಿಸಲಾಗುವುದು ಎಂದರು.