Slide
Slide
Slide
previous arrow
next arrow

ಆಸ್ಪತ್ರೆಗೆ ಅನುದಾನ ಕಡಿತಗೊಂಡಿರುವ ವಿಷಯ ತಿಳಿದಿಲ್ಲ ಎಂದ ಶಾಸಕರ ಹೇಳಿಕೆ ಸುಳ್ಳು: ಅನಂತಮೂರ್ತಿ ಹೆಗಡೆ

300x250 AD

ಶಿರಸಿ: ಸರಕಾರಿ ಆಸ್ಪತ್ರೆ ವೈದ್ಯಕೀಯ ಉಪಕರಣಗಳ ವಿಚಾರದಲ್ಲಿ ಹಣ ಕಡಿತಗೊಂಡಿರುವ ವಿಷಯವೇ ತಮಗೆ ಗೊತ್ತಿಲ್ಲ ಎಂದು ಶಾಸಕರು ಹೇಳಿದ್ದು ಶುದ್ಧ ಸುಳ್ಳಾಗಿದೆ. ಈ ಕುರಿತು ಈಗಾಗಲೇ ಸಾಕಷ್ಟು ಪತ್ರಿಕಾ‌ ವರದಿಗಳು, ಹೋರಾಟ, ಪ್ರತಿಭಟನೆ, ಉಪವಾಸ ಸತ್ಯಾಗ್ರಹವನ್ನೂ ಸಹ ನಡೆಸಲಾಗಿದ್ದು, ಆದರೂ ಶಾಸಕರಿಗೆ ತಿಳಿದಿಲ್ಲ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯಾಗಿದೆ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಹೇಳಿದರು.

ಅವರು ಮಂಗಳವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿ, ಇತ್ತಿಚೆಗೆ ಶಾಸಕರು ಸುದ್ದಿಗೋಷ್ಟಿಯಲ್ಲಿ ಮಾತನಾಡಿ, ಆಸ್ಪತ್ರೆಗೆ ಉಪಕರಣಗಳಿಗೆ ಅನುದಾನ ಕಡಿತಗೊಂಡಿದ್ದರ ಬಗ್ಗೆ ತಮಗೆ ಮಾಹಿತಿಯೇ ಇಲ್ಲ ಎಂದು ಹೇಳಿರುವುದು ಸುಳ್ಳಾಗಿದೆ. ಆದರೂ ಸಹ ಆಸ್ಪತ್ರೆಗೆ ಅಗತ್ಯವಿರುವ ಸೂಕ್ತ ಅನುದಾನವನ್ನು ತರುವುದಾಗಿಯೇ ಭರವಸೆ ನೀಡಿರುವ ಶಾಸಕರ ಮಾತನ್ನು ಸ್ವಾಗತಿಸುತ್ತೇವೆ. ಮತ್ತು ಶಾಸಕರು ತಮ್ಮ ಈ ಮಾತಿಗೆ ಬದ್ಧರಾಗಿ, ಆಸ್ಪತ್ರೆಗೆ ಮತ್ತು ಉಪಕರಣಕ್ಕೆ ಅಗತ್ಯವಿರುವ ಅನುದಾನವನ್ನು ಸರಕಾರದಿಂದ ಕೇಳಿ, ತರಬೇಕಿದೆ ಎಂದು ಅವರು ಆಗ್ರಹಿಸಿದರು.

ಪ್ರಸ್ತುತ ಸಾಲಿನ ಬಜೆಟ್ ನಲ್ಲಿ ಬೆಂಗಳೂರು ಉತ್ತರ ತಾಲೂಕಿನ ವ್ಯಾಪ್ತಿಯಲ್ಲಿ 200 ಹಾಸಿಗೆಯ ಅತ್ಯಾಧುನಿಕ ಮತ್ತು ಸುಸಜ್ಜಿತ ಆಸ್ಪತ್ರೆಯನ್ನು, ಪುತ್ತೂರಿನಲ್ಲಿ ಹೊಸ ಮೆಡಿಕಲ್ ಕಾಲೇಜ್, ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ 400 ಹಾಸಿಗೆ ಆಸ್ಪತ್ರೆ, ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿ 200 ಹಾಸಿಗೆಗಳ ಆಸ್ಪತ್ರೆ ಸ್ಥಾಪನೆ, ಹೀಗೆ ಪಟ್ಟಿ ಮಾಡಿದರೆ ಸಾಕಷ್ಟು ಉದಾಹರಣೆಗಳನ್ನು ಕೊಡಬಹುದು. ನಮ್ಮ ರಾಜ್ಯದಲ್ಲಿ ಸೌಲಭ್ಯ ಹೊಂದಿರುವ ಸ್ಥಳಗಳಿಗೆ ಹೆಚ್ಚಿನ‌ ಸೌಲಭ್ಯ ಕಲ್ಪಿಸುತ್ತಿದ್ದೀರಿ. ಆದರೆ ಅತೀ ಅವಶ್ಯವಿರುವ ಉತ್ತರ ಕನ್ನಡ ಜಿಲ್ಲೆಯ ಜನತೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟವನ್ನು ನಡೆಸುತ್ತಿದ್ದಾರೆ. ಹಾಗಾಗಿ ಮಾನ್ಯ ಶಾಸಕರು ಈ ಕೂಡಲೇ ಸರಕಾರವನ್ನು ಮತ್ತೊಮ್ಮೆ ಆಗ್ರಹಿಸಿ ಶಿರಸಿ ಆಸ್ಪತ್ರೆಗೆ ಹೆಚ್ಚಿನ‌ ಅನುದಾನ ತರಬೇಕಿದೆ. ಅದೇ ರೀತಿಯಲ್ಲಿ ಅವರೇ ಹೇಳಿದಂತೆ ಇನ್ನು ನಾಲ್ಕಾರು ತಿಂಗಳಲ್ಲಿ ಎಲ್ಲ ಅತ್ಯಾವಶ್ಯಕ ಸಾಮಗ್ರಿ, ವೈದ್ಯಕೀಯ ಉಪಕರಣಗಳೊಂದಿಗೆ ಈಗಿನ ಸರಕಾರಿ ಆಸ್ಪತ್ರೆಯ ಸೇವೆ ಕ್ಷೇತ್ರದ ಜನರಿಗೆ ದೊರೆಯುವಂತೆ ಶಾಸಕರು ಮಾಡಲಿ ಎಂದರು.

ಶಿರಸಿ ಬಸ್ಟ್ಯಾಂಡ್ ಗೆ ಸಂಬಂಧಿಸಿ ನಾವು ಸಾರ್ವಜನಿಕರು, ರೈತರು, ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆಯನ್ನು ಹಮ್ಮಿಕೊಂಡ ನಂತರದಲ್ಲಿ ಶಾಸಕರು ಬಸ್ಟ್ಯಾಂಡ್ ಉದ್ಘಾಟನಾ ದಿನಾಂಕವನ್ನು ಪ್ರಕಟಿಸಿದ್ದಾರೆ. ಅದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಈ ಹಿಂದೆಯೂ ಎರಡು ಬಾರಿ ಬಸ್ಟ್ಯಾಂಡ್ ಉದ್ಘಾಟನೆ ಆಗುತ್ತದೆ ಎಂದು ಹೇಳಿದ್ದರೂ ಸಹ ಅದು ಆಗಿರಲಿಲ್ಲ. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು. ಇಲ್ಲವಾದಲ್ಲಿ ಎಪ್ರಿಲ್ ಮೊದಲ ವಾರದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಅವರು ಎಚ್ಚರಿಸಿದರು.

ಮಾಜಿ ಜಿಪಂ ಸದಸ್ಯ ಹಾಲಪ್ಪ ಜಕ್ಕಣ್ಣನವರ್ ಮಾತನಾಡಿ, ರಾಜ್ಯದ ಎಲ್ಲೆಡೆ ಆಸ್ಪತ್ರೆ ಸೌಲಭ್ಯಗಳು ಸಿಗುತ್ತಿದೆ. ಹೆಚ್ಚಿನ ಆಸ್ಪತ್ರೆಹಳು ಇರುವಲ್ಲಿಯೇ ಮತ್ತೆ ಆಸ್ಪತ್ರೆಗೆ ಅನುದಾನ ಘೋಷಣೆ ಮಾಡುವುದು ಎಷ್ಟು ಸರಿ ? ಶಿರಸಿಗೂ ಆಸ್ಪತ್ರೆ ಸೌಲಭ್ಯ ಬೇಕಾಗಿದ್ದು, ಇಲ್ಲಿಯ ಶಾಸಕರೂ ಸಹ ಈ ನಿಟ್ಟಿನಲ್ಲಿ ಯೋಚಿಸಿ, ಆಸ್ಪತ್ರೆಗೆ ಅನುದಾನ ತರಬೇಕು. ನಾವೇನು ಎರಡನೇ ದರ್ಜೆಯ ನಾಗರೀಕರಾ ? ಎಂಬ ಅನುಮಾನ ಉತ್ತರ ಕನ್ನಡದ ಜನತೆಯಲ್ಲಿ ಮೂಡುತ್ತಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷೆ ಉಷಾ ಹೆಗಡೆ, ನಂದನ ಸಾಗರ, ಜಯಶೀಲ ಗೌಡ ಬಾಶಿ, ನಾರಾಯಣ ಹೆಗಡೆ, ಚಿದಾನಂದ ಹರಿಜನ ಸೇರಿದಂತೆ ಇನ್ನಿತರರು ಇದ್ದರು.

300x250 AD

ಬಾಕ್ಸ್ :

ಪೋಲೀಸರ ನೋಟೀಸ್; ಅಧಿಕಾರ ದುರ್ಬಳಕೆ :
ಸಾರ್ವಜನಿಕ ಸಮಸ್ಯೆಯಾಗಿರುವ ಬಸ್ಟ್ಯಾಂಡ್ ಉದ್ಘಾಟನೆ ವಿಳಂಬ ಮಾಡುತ್ತಿರುವುದಕ್ಕೆ ಬಸ್ಟ್ಯಾಂಡ್ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡರೆ ಪೋಲೀಸರು ಪ್ರತಿಭಟನೆ ಮಾಡದಂತೆ ನೋಟೀಸ್ ಕೊಡುತ್ತಾರೆ. ಬಸ್ಟ್ಯಾಂಡ್ ಸಂಬಂಧಿಸಿ ಪ್ರತಿಭಟನೆ ನಡೆಸಲು ಕೆಎಸ್ಸ್ಅರ್ಟಿಸಿ ಮತ್ತು ಸಹಾಯಕ ಆಯುಕ್ತರ ಪರವಾನಿಗೆ ಪಡೆಯುವಂತೆ ನೋಟೀಸ್ ನೀಡುತ್ತಾರೆ. ಈ ಪದ್ಧತಿ ಯಾವಾಗಿಂದ ಆರಂಭವಾಗಿದೆ. ಈ ಹಿಂದೆ ಕ್ಷೇತ್ರದಲ್ಲಿ ಬೇಕಾದಷ್ಟು ಹೋರಾಟ, ಪ್ರತಿಭಟನೆಗಳು ಬಸ್ಟ್ಯಾಂಡ್ ವೃತ್ತದಲ್ಲಿ ನಡೆದಿದೆ. ಯಾರ ವಿರುದ್ಧ ಪ್ರತಿಭಟನೆ ಮಾಡುತ್ತೇವೆಯೋ, ಅವರಿಂದಲೇ ಪರವಾನಿಗೆ ಪಡೆಯುವುದು ಹೇಗೆ ಸಾಧ್ಯ. ಈ ಹಿಂದೆ ಪ್ರತಿಭಟನೆ ಮಾಡಿದವರೂ ಸಹ ಈ ರೀತಿಯಾಗಿ ಪರವಾನಿಗೆ ಪಡೆದಿದ್ದಾರಾ ? ತಮ್ಮ ವಿರುದ್ಧದ ಪ್ರತಿಭಟನೆಗೆ ಕೆಎಸ್ಸಾರ್ಟಿಸಿಯವರು ಹೇಗೆ ಅನುಮತಿ ನೀಡುತ್ತಾರೆ ? ಇದು ಹಾಸ್ಯಾಸ್ಪದ ನಡೆಯಲ್ಲವೆ ? ಅಧಿಕಾರದಲ್ಲಿರುವವರು ಈ ರೀತಿ ಪೋಲೀಸ್ ಇಲಾಖೆಯ ಮೇಲೆ ಒತ್ತಡ ಹಾಕುವುದು ಸರಿಯಲ್ಲ ಎಂದು ಅವರು ಹೇಳಿದರು.

ಖೋಟ್ :

ಈಗಾಗಲೇ ಕಾಮಗಾರಿ ಮುಗಿದಿದ್ದರೂ ಸಹ ಬಸ್ಟ್ಯಾಂಡ್ ಉದ್ಘಾಟನೆಯ ದಿನಾಂಕ‌ ಎರಡು ಬಾರಿ ಮುಂದೂಡಲ್ಪಟ್ಟಿದೆ. ಈ ಬಾರಿ‌ ಶಾಸಕರೇ ಹೇಳಿದ್ದರಿಂದ, ಅವರ ಮಾತಿಗೆ ವಿಶ್ವಾಸವಿಟ್ಟು ಪ್ರತಿಭಟನೆಯನ್ನು ಕೈಬಿಡಲಾಗಿದೆ. ಒಂದು ವೇಳೆ ಈ ಬಾರಿ ಬಸ್ಟ್ಯಾಂಡ್ ಉದ್ಘಾಟನೆಯಾಗದಿದ್ದರೆ ಎಪ್ರಿಲ್ ಮೊದಲ ವಾರದಲ್ಲಿ ಮತ್ತೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ಜನರ ಹಿತದ ವಿಚಾರದಲ್ಲಿ ರಾಜಿಯಾಗುವ ಪ್ರಶ್ನೆಯಿಲ್ಲ.

— ಅನಂತಮೂರ್ತಿ ಹೆಗಡೆ, ಬಿಜೆಪಿ ಮುಖಂಡರು

Share This
300x250 AD
300x250 AD
300x250 AD
Back to top