ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದಲ್ಲಿ ಮೃತಪಟ್ಟ ಆಕಳಿನ ಮೃತದೇಹವನ್ನು ಟ್ರ್ಯಾಕ್ಟರ್ ಗೆ ಕಟ್ಟಿ ಎಳೆದೊಯ್ದಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರ ಮೇಲೆ ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸೋಮವಾರ ದೂರು ದಾಖಲಾಗಿದೆ.
ಕೋಗಿಲಬನ ಗ್ರಾಮದಲ್ಲಿ ಟ್ರ್ಯಾಕ್ಟರಿನ ಹಿಂಬದಿಗೆ ಮೃತ ಆಕಳಿನ ಮೃತ ದೇಹವನ್ನು ಹಗ್ಗದಲ್ಲಿ ಕಟ್ಟಿ ಎಳೆದೊಯ್ಯಲಾಗಿರುವ ಬಗ್ಗೆ ಸುದ್ದಿ ಪ್ರಸಾರವಾಗಿತ್ತು. ಈ ಘಟನೆಯ ಬಗ್ಗೆ ಸೋಮವಾರ ಬಡಕಾನಶಿರಡಾ ಗ್ರಾಮ ಪಂಚಾಯಿತಿಯ ಪಿಡಿಓ ಸುರೇಶ ಮಡಿವಾಳ ಅವರು ದಾಂಡೇಲಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಕೋಗಿಲಬನ ಗ್ರಾಮದ ನಿವಾಸಿಗಳಾದ ಅಷ್ಪಾಕ್ ರಹೀಂ ಮುಲ್ಲಾ ಶೇಖ, ಸಾಧಿಕ ದಸ್ತಗೀರ ಮುಲ್ಲಾ ಮತ್ತು ಇಬ್ರಾಹಿಂ ಕೋಳೋರು ಅವರ ಮೇಲೆ ದೂರನ್ನು ದಾಖಲಿಸಿದ್ದಾರೆ. ಸುರೇಶ್ ಮಡಿವಾಳ ಅವರು ನೀಡಿದ ದೂರಿನಲ್ಲಿ ಅನಾರೋಗ್ಯದಿಂದ ಮೃತಪಟ್ಟ ಆಕಳನ್ನು ಕೆಎ: 30, ಟಿ: 0296 ನೋಂದಣಿ ಸಂಖ್ಯೆಯ ಟ್ತ್ರಾಕ್ಟರಿನ ಇಂಜಿನಿಗೆ ಕಟ್ಟಿ ಟ್ರ್ಯಾಕ್ಟರನ್ನು ಅತಿ ವೇಗವಾಗಿ ನಿರ್ಲಕ್ಷತನದಿಂದ ಚಲಾಯಿಸಿ, ಯಾವುದೇ ಮುಂಜಾಗ್ರತೆ ಕ್ರಮ ವಹಿಸದೆ, ವಾತಾವರಣ ಹಾನಿಕಾರಕವಾಗುವಂತೆ ಕೋಗಿಲಬನ ಗ್ರಾಮದ ಸಮೀಪ ಇರುವ ಅರಣ್ಯ ಪ್ರದೇಶದಲ್ಲಿ ಬಿಟ್ಟಿದ್ದಾರೆ ಎಂದು ವಿವರಿಸಿದ್ದಾರೆ.
ದಾಂಡೇಲಿ ಗ್ರಾಮೀಣ ಠಾಣೆಯ ಪೊಲೀಸರು ದೂರನ್ನು ಸ್ವೀಕರಿಸಿ ಪ್ರಕರಣವನ್ನು ದಾಖಲಿಸಿಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ. ಸೋಮವಾರ ರಾತ್ರಿ 10.00 ಗಂಟೆಯ ನಂತರವೂ ಆಕಳಿನ ಮೃತ ದೇಹವು ಕೋಗಿಲಬನ ಗ್ರಾಮದ ಸಮೀಪದ ಅರಣ್ಯ ಪ್ರದೇಶದಲ್ಲಿ ಇರುವುದು ಕಂಡುಬಂದಿದೆ.