ದಾಂಡೇಲಿ : ತಾಲೂಕಿನ ಕ್ರಿಕೆಟ್ ಕ್ರೀಡಾ ಪ್ರತಿಭೆಗಳ ಉಜ್ವಲ ಭವಿಷ್ಯಕ್ಕಾಗಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ. ಬಹಳ ಮುಖ್ಯವಾಗಿ ಕ್ರಿಕೆಟ್ ಪ್ರತಿಭೆಗಳ ಕ್ರೀಡಾ ಉನ್ನತಿಗಾಗಿ ಲೆದರ್ ಬಾಲ್ ಕ್ರಿಕೆಟ್ ತರಬೇತಿಯು ಅತೀ ಅವಶ್ಯವಿದ್ದು, ನಿಟ್ಟಿನಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಂಪೂರ್ಣ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ ಲೆದರ್ ಬಾಲ್ ಕ್ರಿಕೆಟ್ ತರಬೇತಿ ಶಿಬಿರವನ್ನು ಆಯೋಜಿಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಮಂಡಳಿಯ ಸದಸ್ಯರು ಹಾಗೂ ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾದ ಅನಿಲ್ ಪಾಟ್ನೇಕರ ಹೇಳಿದರು.
ಅವರು ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸ್ಪೋರ್ಟ್ಸ್ & ವೆಲ್ಫೇರ್ ವಿಭಾಗದ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನಗರದಲ್ಲಿ ಈ ಹಿಂದೆ ಲೆದರ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಹೆಚ್ಚಿನ ಪ್ರಮಾಣದಲ್ಲಿ ನಡೆಯುತ್ತಿತ್ತು. ಕಾಲೇಜ್ ಮಟ್ಟದಲ್ಲಿ, ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹಾಗೂ ಬೇರೆ ಬೇರೆ ವಿಭಾಗಿಯ ಪಂದ್ಯಾವಳಿಯಲ್ಲಿ ದಾಂಡೇಲಿಯ ಕ್ರಿಕೆಟಿಗರು ಭಾಗವಹಿಸುತ್ತಿದ್ದರು. ಆದರೆ ಕಾಲಕ್ರಮೇಣ ಲೆದರ್ ಬಾಲ್ ಕ್ರಿಕೆಟ್ ಆಟ ಮಾಯವಾಗಿದೆ. ಈ ನಿಟ್ಟಿನಲ್ಲಿ ಕಳೆದ 15 – 20 ವರ್ಷಗಳ ಹಿಂದೆ ಲೆದರ್ ಬಾಲ್ ಕ್ರಿಕೆಟ್ ಆಟವಾಡುತ್ತಿದ್ದ ಆಟಗಾರರನ್ನೊಳಗೊಂಡು ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ದಾಂಡೇಲಿ ತಾಲೂಕಿನ ಕ್ರೀಡಾ ಪ್ರತಿಭೆಗಳ ಭವಿಷ್ಯದ ಉನ್ನತಿಗಾಗಿ ಪ್ರಾರಂಭಿಸಲಾಗಿದೆ ಎಂದರು.
ದಾಂಡೇಲಿ ಕ್ರಿಕೆಟ್ ಅಕಾಡೆಮಿ ಉಪಾಧ್ಯಕ್ಷರಾದ ರಾಜೇಶ ತಿವಾರಿ ಅವರು ಮಾತನಾಡಿ ಲೆದರ್ ಬಾಲ್ ಕ್ರಿಕೆಟ್ ಆಟ ತನ್ನದೇ ಆದ ವಿಶಿಷ್ಟತೆಯನ್ನು ಪಡೆದಿದೆ. ಸತತ ಅಭ್ಯಾಸ ಮತ್ತು ಸೂಕ್ತ ತರಬೇತಿ ಇದ್ದಾಗ ಸುಲಲಿತವಾಗಿ ಲೆದರ್ ಬಾಲ್ ಕ್ರಿಕೆಟ್ ಆಟವನ್ನು ಆಡಲು ಸಾಧ್ಯ. ದಾಂಡೇಲಿಯ ಕ್ರಿಕೆಟ್ ಪ್ರತಿಭೆಗಳಿಗೆ ಸೂಕ್ತ ರೀತಿಯಲ್ಲಿ ತರಬೇತಿಯನ್ನು ನೀಡಿ, ಅತ್ಯುತ್ತಮ ಕ್ರಿಕೆಟರನ್ನಾಗಿ ರೂಪಿಸುವ ಗುರುತರ ಜವಾಬ್ದಾರಿಯೊಂದಿಗೆ ಕಾಲಕಾಲಕ್ಕೆ ತರಬೇತಿ ಶಿಬಿರಗಳನ್ನು ಆಯೋಜಿಸಲಿದ್ದೇವೆ. ಈ ಕಾರ್ಯಕ್ಕೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆ ಸಂಪೂರ್ಣ ಸಹಕಾರವನ್ನು ನೀಡಲಿದೆ ಎಂದರು.
ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಕಾರ್ಯದರ್ಶಿ ಎಸ್.ಸೋಮ ಕುಮಾರ್ ಅವರು ದಾಂಡೇಲಿಯಲ್ಲಿ ಕ್ರಿಕೆಟ್ ಬಗ್ಗೆ ಹೆಚ್ಚಿನ ಒಲವಿದೆ. ಟೆನ್ನಿಸ್ ಬಾಲ್ ಪಂದ್ಯಾವಳಿ ನಿರಂತರವಾಗಿ ನಡೆಯುತ್ತಿದೆ. ಆದರೆ ಕ್ರಿಕೆಟ್ ಕ್ರೀಡಾ ಪ್ರತಿಭೆಗಳಿಗೆ ಅವರ ಕ್ರೀಡಾ ಭವಿಷ್ಯಕ್ಕೆ ಲೆದರ್ ಬಾಲ್ ಕ್ರಿಕೆಟರನ್ನಾಗಿ ರೂಪಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಯನ್ನು ಪ್ರಾರಂಭಿಸಲಾಗಿದೆ ಎಂದರು. ದಾಂಡೇಲಿ ಕ್ರಿಕೆಟ್ ಅಕಾಡೆಮಿಯಿಂದ ಲೆದರ್ ಬಾಲ್ ಕ್ರಿಕೆಟ್ ತರಬೇತಿಯ ಕುರಿತಂತೆ ಸದ್ಯದಲ್ಲೇ ಸಂಪೂರ್ಣ ಮಾಹಿತಿಯನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಸದಸ್ಯರುಗಳಾದ ಪ್ರಕಾಶ್ ಜೈನ್, ಪ್ರವೀಣ್ ಮಿಶ್ರಾ, ಸುಭಾಷ್ ಪ್ರಧಾನ್, ಹೇಮಂತ್ ವೈಷ್ಣವ್, ನಿರ್ಮಲ್ ಶರ್ಮಾ, ಯೋಗೇಶ್ ಅಂಕನವರ್, ಸಾಮುವೆಲ್ ಮೆಷಿಕ, ಹನುಮಾನ ಶರ್ಮಾ ಮೊದಲಾದವರು ಉಪಸ್ಥಿತರಿದ್ದರು.
ದಾಂಡೇಲಿ ಕ್ರಿಕೆಟ್ ಅಕಾಡೆಮಿಯ ಅಧ್ಯಕ್ಷರಾಗಿ ಅನಿಲ್ ಪಾಟ್ನೇಕರ್, ಉಪಾಧ್ಯಕ್ಷರಾಗಿ ರಾಜೇಶ ತಿವಾರಿ, ಕಾರ್ಯದರ್ಶಿಯಾಗಿ ಸೋಮಕುಮಾರ್.ಎಸ್, ಸಹ ಕಾರ್ಯದರ್ಶಿಯಾಗಿ ಇಮಾಮ್ ಸರ್ವರ್, ಖಜಾಂಚಿಯಾಗಿ ಸಚಿನ್ ಕಾಮತ್ ಅವರು ಸಮಿತಿಯ ಪ್ರಮುಖರಾಗಿದ್ದಾರೆ.