ನವದೆಹಲಿ: ಎಲ್ಲಾ ಧರ್ಮಗಳನ್ನು ದ್ವೇಷ ಭಾವದೊಂದಿಗೆ ಗುರಿಯಾಗಿಸಿಕೊಂಡು ಧಾರ್ಮಿಕ ಭೀತಿಯನ್ನು ಬಿತ್ತರಿಸುವ ಮತಾಂಧತೆಯ ವಿರುದ್ಧ ಹೆಚ್ಚು ಸಮಗ್ರ ರೀತಿಯಲ್ಲಿ ಹೋರಾಟ ನಡೆಸಬೇಕಾಗಿದೆ ಎಂದು ಭಾರತ ವಿಶ್ವಸಂಸ್ಥೆಯಲ್ಲಿ ಕರೆ ನೀಡಿದೆ.
ಪೂಜಾ ಸ್ಥಳಗಳು ಮತ್ತು ಧರ್ಮಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪಿ. ಹರೀಶ್, ಮತಾಂಧತೆಯು ನಮ್ಮ ವೈವಿಧ್ಯತೆ ಮತ್ತು ಜಾಗತಿಕ ಸಮಾಜಕ್ಕೆ ವಿವಿಧ ಸ್ವರೂಪಗಳಲ್ಲಿ ಅತಿದೊಡ್ಡ ಬೆದರಿಕೆಯಾಗಿರುವುದನ್ನು ನಮ್ಮ ಅರ್ಥಮಾಡಿಕೊಂಡಾಗ ಮಾತ್ರವೇ ಮಾತಂಧತೆಯ ವಿರುದ್ಧದ ನಮ್ಮ ಹೋರಾಟ ಅರ್ಥಪೂರ್ಣ ಪ್ರಗತಿಯ ಹಾದಿಯನ್ನು ಪಡೆಯುತ್ತದೆ ಎಂದು ಭಾರತ ಬಲವಾಗಿ ನಂಬುತ್ತದೆ ಎಂದಿದ್ದಾರೆ.
ಅಂತರರಾಷ್ಟ್ರೀಯ ಇಸ್ಲಾಮೋಫೋಬಿಯಾವನ್ನು ಎದುರಿಸುವ ದಿನದ ಸ್ಮರಣಾರ್ಥ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ. ವಾಸ್ತವಿಕವಾಗಿ ಪ್ರತಿಯೊಂದು ಪ್ರಮುಖ ನಂಬಿಕೆಗಳೂ ಭಾರತದಲ್ಲಿ ನೆಲೆಯಾಗಿದೆ, ಇದು ನಾಲ್ಕು ವಿಶ್ವ ಧರ್ಮಗಳಾದ ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮದ ಜನ್ಮಸ್ಥಳವಾಗಿದೆ ಎಂದು ಅವರು ಹೇಳಿದರು.
ಧಾರ್ಮಿಕ ತಾರತಮ್ಯ, ದ್ವೇಷ ಮತ್ತು ಹಿಂಸಾಚಾರದಿಂದ ಮುಕ್ತವಾದ ಜಗತ್ತನ್ನು ಬೆಳೆಸುವುದು ಭಾರತದ ಜೀವನ ವಿಧಾನವಾಗಿದೆ ಎಂದು ಹರೀಶ್ ಹೇಳಿದರು. ಎಲ್ಲಾ ದೇಶಗಳು ತಮ್ಮ ಎಲ್ಲಾ ನಾಗರಿಕರನ್ನು ಸಮಾನವಾಗಿ ನಡೆಸಿಕೊಳ್ಳಲು ಬದ್ಧವಾಗಿರಬೇಕು ಮತ್ತು ಧಾರ್ಮಿಕ ತಾರತಮ್ಯವನ್ನು ಉತ್ತೇಜಿಸುವ ನೀತಿಗಳನ್ನು ಅನುಸರಿಸಬಾರದು ಎಂದು ಅವರು ಒತ್ತಿ ಹೇಳಿದರು.