ಕುಮಟಾ: ಸ್ಥಳೀಯ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದಲ್ಲಿ 2024-25ನೇ ಸಾಲಿನ ವಿದ್ಯಾರ್ಥಿ ಸಂಘದ ಉದ್ಘಾಟನಾ ಸಮಾರಂಭ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳು ಮತ್ತು ಉದ್ಘಾಟಕರಾಗಿ ಖ್ಯಾತ ಪ್ರಸೂತಿ ತಜ್ಞರು ಹಾಗೂ ಅಧ್ಯಕ್ಷರು ಕೆನರಾ ಎಕ್ಸಲೆನ್ಸ್ ಪದವಿಪೂರ್ವ ಮಹಾವಿದ್ಯಾಲಯದ ಸಂಸ್ಥಾಪಕ ಅಧ್ಯಕ್ಷರಾದ ಡಾ. ಜಿ.ಜಿ. ಹೆಗಡೆ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿ ಜೀವನದಲ್ಲಿ ಆನಂದ ಮತ್ತು ನೆಮ್ಮದಿ ಇದ್ದರೆ ಮಾನವನು ಸಾಧನೆ ಮಾಡಲು ಸಾಧ್ಯ. ಭವಿಷ್ಯದಲ್ಲಿ ಶಿಕ್ಷಕ ವೃತ್ತಿ ಸವಾಲಿನಿಂದ ಕೂಡಿದ್ದು, ವೃತ್ತಿ ಬದುಕಿನಲ್ಲಿ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಆದರ್ಶ ಶಿಕ್ಷಕರಾಗಿ ಎಂದು ಕರೆ ನೀಡಿದರು.
ಅಧ್ಯಕ್ಷರಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯರಾದ ಪ್ರೊ. ಪ್ರೀತಿ ಪಿ. ಭಂಡಾರಕರ ಮಾತನಾಡಿ ಶಿಕ್ಷಕ ವಿದ್ಯಾರ್ಥಿಗಳು ದೈನಂದಿನ ಜೀವನದಲ್ಲಿ ಶಿಸ್ತು, ಸಮಯ ಪಾಲನೆ, ತಾಳ್ಮೆ ಮುಂತಾದ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಕು. ಉಷಾ ಗೌಡ ಹಾಗೂ ಕು ರೋಹನ ಪ್ರಾರ್ಥಿಸಿದರು. ವಿದ್ಯಾರ್ಥಿ ಸಂಘದ ಕಾರ್ಯಾಧ್ಯಕ್ಷರಾದ ಜಿ.ಡಿ.ಭಟ್ ಸ್ವಾಗತಿಸಿ ಸಭೆಗೆ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕು. ಸಂದೀಪ ಮರಾಠೆ 2024-25ನೇ ಸಾಲಿನ ವಿಧ್ಯಾರ್ಥಿ ಸಂಘದ ವಾರ್ಷಿಕ ಕ್ರಿಯಾ ಯೋಜನೆಯನ್ನು ಮಂಡಿಸಿದರು. ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಕು. ಮಿಸ್ಬಾ ಶೇಖ ವಂದಿಸಿದರು. ಕು. ನಮೃತಾ ಮತ್ತು ಕು. ನಾಗಶ್ರೀ ಕಾರ್ಯಕ್ರಮ ನಿರೂಪಿಸಿದರು.