ಶಿರಸಿ: ವಿದ್ಯಾರ್ಥಿಗಳಲ್ಲಿ ಕನಸು ಮತ್ತು ಶಿಸ್ತು ಜೀವನದ ಅವಿಭಾಜ್ಯ ಅಂಗವಾಗಬೇಕು. ವೈಯಕ್ತಿಕ ಶಿಸ್ತು ವಿದ್ಯಾರ್ಥಿಗಳ ಪರೀಕ್ಷಾ ತಯಾರಿಗೆ ಪೂರಕವಾಗಿದೆ. ಜೀವನದಲ್ಲಿ ಬದ್ಧತೆ,ಇಚ್ಛಾಶಕ್ತಿ,ಶ್ರದ್ಧೆ ಇವುಗಳ ಮೂಲಕ ವಿದ್ಯಾರ್ಥಿಗಳು ಗುರಿಗಳ ಕಡೆಗೆ ಗಮನ ಹರಿಸಬೇಕು ಎಂದು ಮಾಜಿ ಸೈನಿಕ, ನಿವೃತ್ತ ಅಂಚೆ ಇಲಾಖೆಯ ಅಧಿಕಾರಿಗಳೂ ಆದಂತಹ ಸುಬೇದಾರ್ ರಾಮು ಅಭಿಪ್ರಾಯಪಟ್ಟರು.
ಅವರು ತಾಲೂಕಿನ ಇಸಳೂರಿನ ಡಾ.ಬಿ. ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ಆರೋಗ್ಯ ಭಾರತಿ ಸಂಸ್ಥೆಯ ಆಶ್ರಯದಲ್ಲಿ ನಡೆದ ಪರೀಕ್ಷಾ ತಯಾರಿಯಲ್ಲಿ ವಿದ್ಯಾರ್ಥಿಗಳು ಅನುಸರಿಸಬೇಕಾದ ಮಾರ್ಗಗಳ ಕುರಿತು ನಡೆದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಅಲ್ಲದೆ ಅವರು ದೇಶ ಸೇವೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಕುರಿತು ಸವಿಸ್ತಾರವಾಗಿ ಮಾಹಿತಿ ನೀಡಿದರು.
ಆರೋಗ್ಯ ಭಾರತಿ ವಿಭಾಗ ಸಂಯೋಜಕ ನಾಗೇಶ ಹಾಗೂ ಇನ್ನೊಬ್ಬ ಮಾಜಿ ಸೈನಿಕರಾದಂತಹ ಮಹಮ್ಮದ್ ಗೌಸ್ ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಆರೋಗ್ಯದ ಜೊತೆಗೆ ಹೆಚ್ಚಿನ ಅಂಕ ಗಳಿಕೆಯ ಕಡೆಗೆ ಗಮನಹರಿಸಿ, ಜೀವನದ ಮೌಲ್ಯಗಳನ್ನು ಅಳವಡಿಸಿಕೊಂಡು ಕಲಿತ ಶಾಲೆಗೆ ಗೌರವ ತಂದಾಗ ಮಾತ್ರ ಜೀವನದಲ್ಲಿ ಸಾರ್ಥಕತೆ ಉಂಟಾಗುತ್ತದೆ.ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ಪ್ರವರ್ತಕರಾಗ ಬೇಕು ಎಂದು ಕರೆ ನೀಡಿದರು.
ಅಂಬೇಡ್ಕರ್ ವಸತಿ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಗಿರಿಜಾ ಪೂಜಾರಿ ಮಾತನಾಡಿ ದೇಶದ ಸೈನಿಕರು ನಮಗೆಲ್ಲ ಸ್ಪೂರ್ತಿ ಅವರ ತ್ಯಾಗ ಸದಾ ಸ್ಮರಣೀಯವಾಗಿದ್ದು. ವಿದ್ಯಾರ್ಥಿಗಳ ಗುಣಾತ್ಮಕ ಮೌಲ್ಯಗಳನ್ನು ಬೆಳೆಸುವತ್ತ ಆರೋಗ್ಯ ಭಾರತಿ ಶ್ರಮಿಸುವದು ಶ್ಲಾಘನೀಯ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕಿ ರೇವತಿ ಭಟ್ ಸ್ವಾಗತಿಸಿ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಭಾರತಿ ಸಿಬ್ಬಂದಿಗಳು, ಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.