ಕಾರವಾರ: ಮೂರ್ಛೆರೋಗದ ಕುರಿತು ಯುವಜನರು ಅರಿತುಕೊಂಡು, ಮೌಢ್ಯ ಹಾಗೂ ಮಿಥ್ಯೆಗಳಿಂದ ಹೊರಬಂದು ಇದರ ಬಗ್ಗೆ ಸಾಮಾನ್ಯ ಜನರಲ್ಲಿ ಅರಿವು ಮೂಡಿಸಬೇಕು ಎಂದು ಕ್ರಿಮ್ಸ್ ಆಸ್ಪತ್ರೆಯ ವೈದ್ಯ ಡಾ. ಅಮಿತ್ ಕಾಮತ್ ಅಭಿಪ್ರಾಯಪಟ್ಟರು.
ಅವರು ಮಂಗಳವಾರ ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ಮೆದುಳು ಆರೋಗ್ಯ ಉಪಕ್ರಮ ಜಿಲ್ಲಾ ಆಸ್ಪತ್ರೆ ಕ್ರಿಮ್ಸ್ ಕಾರವಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ ಅಂತರಾಷ್ಟ್ರೀಯ ಅಪಸ್ಮಾರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮೂರ್ಛೆರೋಗವು ಚಿಕಿತ್ಸೆ ನೀಡಬಹುದಾದ ಖಾಯಿಲೆಯಾಗಿದ್ದು ಸರಿಯಾದ ಔಷದ ತೆಗೆದುಕೊಳ್ಳುವುದರಿಂದ ಇದನ್ನು ಗುಣಪಡಿಸಲು ಸಾಧ್ಯ. ಮೂರ್ಛೆ ಬಂದಾಗ ರೋಗಿಯ ಕೈಯಲ್ಲಿ ಬೀಗದ ಕೈ ಇರಿಸುವುದು, ಈರುಳ್ಳಿ ಇಲ್ಲವೇ ಕೊಳಕು ಚಪ್ಪಲಿ ಅಥವಾ ಶೂ ಮೂಸುವಂತೆ ಮಾಡಬಾರದು. ಸಾಮಾನ್ಯ ಜನರು ಈ ರೋಗದ ಕುರಿತು ಅರಿಯಬೇಕಿದೆ ಎಂದರು
ಜಿಲ್ಲಾ ಕುಷ್ಠರೋಗ ನಿವಾರಣಾಧಿಕಾರಿ ಡಾ.ಶಂಕರರಾವ್ ಮಾತನಾಡಿ, ಯುವಜನತೆ ಮೆದುಳಿನ ಕಾಯಿಲೆಯ ಬಗ್ಗೆ ತಾವು ಅರಿತುಕೊಂಡು, ಆ ಜ್ಞಾನವನ್ನು ಸಮುದಾಯಕ್ಕೆ ಹಂಚಿ ಮೆದುಳು ಕಾಯಿಲೆಯ ಬಗ್ಗೆ ಅರಿವು ಮೂಡಿಸಬೇಕು ಎಂದರು.
ಕರ್ನಾಟಕ ಬ್ರೈನ್ ಹೆಲ್ತ್ ಇನಿಷಿಯೇಟಿವ್ (ಕಭಿ) ಕಾರ್ಯಕ್ರಮದ ಜಿಲ್ಲಾ ಸಂಯೋಜಕ ಕಿರಣ್ ಕುಮಾರ್ ಮಹಾಲೆ ಮಾತನಾಡಿ, ಮನುಷ್ಯನ ಮೆದುಳು ಸಮಗ್ರ ಆರೋಗ್ಯದ ಕೀಲಿ ಕೈ ಆಗಿದ್ದು , ಮೆದುಳಿಗೆ ಸ್ವಲ್ಪಮಟ್ಟಿನ ಏರುಪೇರು ಆದರೂ ವ್ಯಕ್ತಿ ಅನೇಕ ಕಷ್ಟವನ್ನು ಅನುಭವಿಸಬೇಕಾಗುತ್ತದೆ ಆ ನಿಟ್ಟಿನಲ್ಲಿ ದೇಶದಲ್ಲೇ ಮೊದಲ ಬಾರಿಗೆ ಮೆದುಳು ಆರೋಗ್ಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಲು ಕಭಿ ಕಾರ್ಯಕ್ರಮದಡಿಯಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಲಭ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ರಸಪ್ರಶ್ನೆ ಆಯೋಜಿಸಿದ್ದು, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಭಿ ಕ್ಲಿನಿಕಲ್ ಮನಶಾಸ್ತ್ರಜ್ಞ ಮದನ್ ಕೆ ಗೌಡ್ ಗೌಡ, ಪಿಸಿಯೊಥೆರಪಿಸ್ಟ್ ವಾಕ್ ಭಾಷಾ ತಜ್ಞೆ ಸಹನಾ ಪ್ರಭು, ಮೆಡಿಶನ್ ವಿಭಾಗದ ಡಾ. ರಾಹುಲ್ ಜೋಶಿ, ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲ ವಾಸುದೇವ ಗೌಡ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಹಾಜರಿದ್ದರು. ಕಾಲೇಜಿನ ಶಿಕ್ಷಕಿ ವಾಸವಿ ನಾಯಕ್ ನಿರೂಪಿಸಿ, ವಂದಿಸಿದರು.