ಶಿರಸಿ: ಆಸ್ಪತ್ರೆ ಹೋರಾಟ, ಅಭಿವೃದ್ಧಿ ವಿಷಯದಲ್ಲಿ ಜಾತಿ ತರುವುದು ಅಕ್ಷಮ್ಯ ಅಪರಾಧವಾಗಿದ್ದು, ಬಿಜೆಪಿ ರೈತಮೋರ್ಚಾ ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಅನಂತಮೂರ್ತಿ ಹೆಗಡೆ ಶಿರಸಿ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಹೋರಾಟದಲ್ಲಿ ಶಾಸಕರನ್ನು ಟೀಕೆ ಮಾಡಿದ್ದಾಯೇ ಹೊರತು ಜಾತಿಯನ್ನು ಟೀಕಿಸಿಲ್ಲ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ ಹೇಳಿದ್ದಾರೆ.
ಅವರು ಮಂಗಳವಾರ ನಗರದ ಪಂಡಿತ ದೀನ ದಯಾಳ ಸಭಾಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಮುಖಂಡರು ಜಾತಿ ವಿಷಯವನ್ನು ತಂದು ದ್ವೇಷದ ರಾಜಕಾರಣಕ್ಕೆ ಕೈ ಹಾಕಿದ್ದಾರೆ. ಅನಂತಮೂರ್ತಿ ಹೆಗಡೆ ಹೋರಾಟಕ್ಕೆ ಕೆಲವರು ಜಾತಿ ಬಣ್ಣ ಬಳಿಯಲು ಪ್ರಯತ್ನಿಸುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ. ಎಲ್ಲ ರಾಜಕೀಯ ಪಕ್ಷದಲ್ಲಿ ಎಲ್ಲ ಜಾತಿಯವರು ಇದ್ದಾರೆ. ಎಲ್ಲ ಜಾತಿಯವರೂ ಸ್ಥಾನಮಾನ ಹೊಂದಿದ್ದಾರೆ. ಸಾರ್ವಜನಿಕ ಹೋರಾಟವನ್ನು ಜಾತಿ ಸ್ವರೂಪಕ್ಕೆ ತಿರುಗಿಸಿ, ಜನರ ನಡುವೆ ಗೊಂದಲ ಸೃಷ್ಟಿಸುವುದು ಕಾಂಗ್ರೆಸ್ ತಂತ್ರಗಾರಿಕೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅನಂತಮೂರ್ತಿ ಹೆಗಡೆ ಪಂಡಿತ ಸಾರ್ವಜನಿಕ ಆಸ್ಪತ್ರೆಯ ಅನುದಾನ ಕುರಿತಾಗಿ ಶಾಸಕ ಭೀಮಣ್ಣ ನಾಯ್ಕ ವಿರುದ್ಧ ಟೀಕೆ ಮಾಡಿದ್ದಾರೆ. ಆಸ್ಪತ್ರೆ ಹೋರಾಟ ಸಾರ್ವಜನಿಕ ಸಮಸ್ಯೆ, ಇದು ಬ್ರಾಹ್ಮಣ, ನಾಮಧಾರಿ, ಈಡಿಗ, ಕ್ರಿಶ್ಚಿಯನ್, ಮುಸ್ಲಿಂ ಅಥವಾ ಇನ್ಯಾವುದೋ ಒಂದು ಜಾತಿಗೆ, ಸಮುದಾಯಕ್ಕೆ ಸೀಮಿತವಾದ ಹೋರಾಟವಲ್ಲ. ಆಸ್ಪತ್ರೆ ಎಂದಾಕ್ಷಣ ಎಲ್ಲ ಜಾತಿ-ಧರ್ಮದವರೂ ಬಂದು ಚಿಕಿತ್ಸೆ ಪಡೆಯುತ್ತಾರೆ. ಎಲ್ಲರ ಪರವಾಗಿ ಅನಂತಮೂರ್ತಿ ಹೆಗಡೆ ಆಸ್ಪತ್ರೆಯ ಕುರಿತಾದ ಎಲ್ಲ ದಾಖಲೆಗಳನ್ನು ಆರ್ಟಿಐ ಮೂಲಕ ಸಂಗ್ರಹಿಸಿ, ಅನುದಾನದ ಬಗ್ಗೆ ಪ್ರಶ್ನೆ ಮಾಡಿದ್ದಾರೆ ಹೊರತು ಇನ್ಯಾವುದೋ ಜಾತಿ ಅಥವಾ ವೈಯಕ್ತಿಕ ದ್ವೇಷದಿಂದಲ್ಲ. ಜಾತಿ ನಿಂದನೆ ಎನ್ನುವ ಸ್ವರೂಪ ಪಡೆದುಕೊಳ್ಳುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.
ರಾಜಕೀಯ ಎಂದರೆ ಟೀಕೆ, ವ್ಯಂಗ್ಯ ಎಲ್ಲವೂ ಸಾಮಾನ್ಯ ಸಂಗತಿ. ಅದನ್ನು ಸ್ಪೋರ್ಟಿವ್ ಆಗಿ ಸ್ವೀಕರಿಸಬೇಕೆ ವಿನಃ, ಜಾತಿ ನಿಂದನೆ ಎಂದೋ, ವೈಯಕ್ತಿಕವಾಗಿ ಸ್ವೀಕರಿಸಲಾರದು. ಇದೇ ಕಾಂಗ್ರೆಸ್ಸಿಗರು ಮೋದಿಯವರನ್ನು ಚೌಕಿದಾರ್ ಚೋರ್, ಖೂನ್ ಕಾ ದಲಾಲ್, ಮಾನಸಿಕ ಅಸ್ವಸ್ತ, ನೀಚ ಎಂದೆಲ್ಲ ಜರಿದರಲ್ಲ. ಮೊನ್ನೆಯೂ ಕೆಲ ಕಾಂಗ್ರೆಸ್ಸಿಗರು ಬಿಜೆಪಿಯವರು ಸುಳ್ಳುಗಾರರು ಎಂದರು. ಅದೇ ರೀತಿ ಅನಂತಮೂರ್ತಿ ಹೆಗಡೆ ಶಾಸಕರನ್ನು ಟೀಕಿಸಿದ್ದರೇ ಹೊರತು, ಅವರು ಯಾವ ಜಾತಿ, ಧರ್ಮ ಎಂದಲ್ಲ. ಕಾಂಗ್ರೆಸ್ ಮಾಡಿದ ಟೀಕೆಗಳನ್ನು ಬಿಜೆಪಿ ಸ್ಪೋರ್ಟಿವ್ ಆಗಿ ಸ್ವೀಕರಿಸಿದೆಯೇ ಹೊರತು ನಿಂದನೆ ಎಂದಲ್ಲ.
ಆಸ್ಪತ್ರೆ, ಇಂದಿರಾ ಕ್ಯಾಂಟಿನ್, ಬಸ್ ನಿಲ್ದಾಣಗಳಿಗೆ ಯಾವುದೇ ಒಂದು ಜಾತಿಯವರು ಹೋಗುವುದಿಲ್ಲ. ಎಲ್ಲರೂ ಹೋಗುತ್ತಾರೆ. ಆಸ್ಪತ್ರೆ, ಬಸ್ನಿಲ್ದಾಣ, ಇಂದಿರಾ ಕ್ಯಾಂಟಿನ್ ಎಲ್ಲವೂ ಸಾರ್ವಜನಿಕ ಸ್ವತ್ತು. ಆಸ್ಪತ್ರೆ, ಬಸ್ ನಿಲ್ದಾಣಕ್ಕೆಲ್ಲ ಜಾತಿ ಇದೆಯೇ? ನಾವೂ ಕೂಡ ಹಿಂದುಳಿದ ವರ್ಗಕ್ಕೆ ಸೇರಿದವರೇ ಆಗಿದ್ದೇವೆ. ಎಲ್ಲ ಜಾತಿ ಧರ್ಮದವರು ಎಲ್ಲ ಪಕ್ಷದಲ್ಲಿಯೂ ಇದ್ದಾರೆ. ಅವರ ವೈಯಕ್ತಿಕ ಆಸಕ್ತಿ ಸಿದ್ದಾಂತಕ್ಕೆ ಅನುಗುಣವಾಗಿ ಪಕ್ಷದಲ್ಲಿ ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ ಬಿಜೆಪಿಯಲ್ಲೂ ಹಿಂದುಳಿದ ಮೋರ್ಚಾ, ಎಸ್ಸಿ, ಎಸ್ಟಿ ಮೋರ್ಚಾ, ಅಲ್ಪ ಸಂಖ್ಯಾತ ಮೋರ್ಚಾ ಸೇರಿ ಎಲ್ಲ ವರ್ಗಗಳಿಗೆ ಪ್ರಾತಿನಿಧ್ಯ ಸಿಗುವಂತೆ ಇದೆ. ಬಿಜೆಪಿ, ಕಾಂಗ್ರೆಸ್ ಎರಡೂ ಪಕ್ಷದಲ್ಲಿ ಎಲ್ಲ ಜಾತಿಯವರು ಇದ್ದಾರೆ. ದಾಖಲೆಗಳಿಗೆ ಉತ್ತರ ನೀಡಲಾಗದೇ, ಸಾರ್ವಜನಿಕ ಹೋರಾಟವನ್ನು ಜಾತಿ ಸ್ವರೂಪಕ್ಕೆ ತಿರುಗಿಸಿ, ಜನರ ನಡುವೆ ಗೊಂದಲ ಹುಟ್ಟಿಸುವುದು ಕಾಂಗ್ರೆಸ್ ನಾಯಕರ ತಂತ್ರಗಾರಿಕೆ ಎನ್ನುವುದು ತಿಳಿದು ಬಂದಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಮಂಜುನಾಥ ಭಂಡಾರಿ, ಶ್ರೀರಾಮ ನಾಯ್ಕ, ರಾಘವೇಂದ್ರ ನಾಯ್ಕ, ರವಿಚಂದ್ರ ಶೆಟ್ಟಿ ಮತ್ತಿತರರು ಇದ್ದರು.
ಅನಂತಮೂರ್ತಿ ಹೆಗಡೆ ಅವರು ಆಸ್ಪತ್ರೆ ವಿಚಾರವಾಗಿ ಮಾಡುತ್ತಿರುವ ಹೋರಾಟದ ಉದ್ದೇಶ ಬಡವರಿಗೆ ಸಹಾಯವಾಗಲಿ ಎಂದೇ ಹೊರತು, ಬೇರೆ ಯಾವುದೇ ಉದ್ದೇಶ ಇಲ್ಲ. ಅದರಲ್ಲೂ ಜಾತಿ ವಿಚಾರವಾಗಿ ಅವರು ಎಲ್ಲಿಯೂ ಮಾತನಾಡಿಲ್ಲ. ಆದರೆ ಕಾಂಗ್ರೆಸ್ ಕೆಲ ಮುಖಂಡರು, ಇದನ್ನು ತಮ್ಮ ಬೇಳೆ ಬೇಯಿಸಿಕೊಳ್ಳಲು ಈ ಹೋರಾಟಕ್ಕೆ ಜಾತಿಯ ಬಣ್ಣ ಬಳಿಯುತ್ತಿದ್ದಾರೆ. — ರಮೇಶ ನಾಯ್ಕ ಕುಪ್ಪಳ್ಳಿ, ಬಿಜೆಪಿ ಜಿಲ್ಲಾ ರೈತಮೋರ್ಚಾ ಅಧ್ಯಕ್ಷ