
ಸಿದ್ದಾಪುರ: ತಾಲೂಕಿನ ಕಲಗದ್ದೆಯ ಶ್ರೀ ನಾಟ್ಯ ವಿನಾಯಕ ದೇವಸ್ಥಾನದಲ್ಲಿ ಸಂಕಷ್ಟಿ ನಿಮಿತ್ತ ಲಕ್ಷ ಪುಷ್ಪಾರ್ಚನೆ, ನೂರೆಂಟು ಕುಂಭ ಕ್ಷೀರಾಭಿಷೇಕ, ಹವನ, ರಥೋತ್ಸವ, ಸಂತರ್ಪಣೆ ಹಾಗೂ ಸಮ್ಮಾನ ಸಮಾರಂಭ ರವಿವಾರ ನಡೆಯಿತು.
ಇದೇ ವೇಳೆ ಮಂಗಳೂರಿನ ಪ್ರಸಿದ್ಧ ಹೃದ್ರೋಗ ತಜ್ಞ ಡಾ.ಮುಕುಂದ ಕುಂಬ್ಳೆ ಅವರಿಗೆ ಹೃದ್ರೋಗ ಚಿಕಿತ್ಸಾ ಧುರಂಧರ ಬಿರುದು ಪ್ರದಾನ ನಡೆಸಿ ಸಮ್ಮಾನ ಮಾಡಲಾಯಿತು. ಬಳಿಕ ಮಾತನಾಡಿದ ವೈದ್ಯ ಕುಂಬ್ಳೆ ಅವರು, ಹೃದಯದ ಕಾಳಜಿ ಎಲ್ಲರೂ ಮಾಡಿಕೊಳ್ಳಬೇಕು. ಕೊಡುವ ಔಷಧದಷ್ಟೇ ರೋಗಿಯ ಆತ್ಮಸ್ಥೈರ್ಯ ಕೂಡ ಮುಖ್ಯ ಎಂದರು.
ಧಾರವಾಡ ಹಾಲು ಒಕ್ಕೂಟ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ, ದೇವರು ಮಾನಸಿಕ ನೆಮ್ಮದಿ ನೀಡಿದರೆ ವೈದ್ಯರು ಆರೋಗ್ಯ ನೆಮ್ನದಿ ಕೊಡುವರು ಎಂದರು. ತಿರುಪತಿ ತಿರುಮಲದಲ್ಲಿ ಕರ್ನಾಟಕದ ಪ್ರತಿನಿಧಿಯಾಗಿದ್ದ ಪುರಾಣಿಕ, ಪುರೋಹಿತರಾದ ಅಡವಿತೋಟ ಕೃಷ್ಣ ಭಟ್ಟ ಇತರರು ಇದ್ದರು.
ದೇವಸ್ಥಾನದ ವಿಶ್ವಸ್ಥ ವಿನಾಯಕ ಹೆಗಡೆ ಕಲಗದ್ದೆ ಅಧ್ಯಕ್ಷತೆವಹಿಸಿ, ಹೃದಯ ಖಾಯಿಲೆ ಉಳ್ಳವರ ಪಾಲಿನ ಹೃದಯವಂತ ವೈದ್ಯರು ಕುಂಬ್ಳೆ ಅವರು ಎಂದರು. ವಿ.ಎಂ.ಭಟ್ಟ ಶಿರಸಿ ನಿರ್ವಹಿಸಿದರು.