ದಾಂಡೇಲಿ : ಕೌಶಲ್ಯ ಅಭಿವೃದ್ಧಿ ಉದ್ಯಮಶೀಲ ಮತ್ತು ಜೀವನೋಪಾಯ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಕರ್ನಾಟಕ ರಾಜ್ಯ ಜೀವನೋಪಾಯ ಅಭಿಯಾನ, ಎನ್.ಆರ್.ಎಲ್.ಎಂ, ಜಿಟಿಟಿಸಿ ಕಾಲೇಜು, ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ನಲ್ -ಜಲ್ ಯೋಜನೆಯಡಿಯಲ್ಲಿ ಆಯ್ಕೆಯಾಗಿರುವ ನೀರು ವಿತರಣಾ ನಿರ್ವಾಹಕರಿಗೆ ನಗರದ ಅಂಬೇಬಾಡಿಯ ಜಿಟಿಟಿಸಿ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಲಾಗಿದ್ದ 15 ದಿನಗಳ ತರಬೇತಿ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆಯನ್ನು ನೀಡಲಾಯಿತು.
ತರಬೇತಿ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಭಿವೃದ್ಧಿ ವಿಭಾಗದ ಉಪ ಕಾರ್ಯದರ್ಶಿ ಪ್ರಕಾಶ ಹಾಲಮನ್ನವರ ಅವರು ಈಗಾಗಲೇ ಗ್ರಾ.ಪಂಚಾಯ್ತುವಾರು ಇಬ್ಬರಂತೆ ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಆಯ್ದ ಮಹಿಳೆಯರನ್ನು ಅಯ್ಕೆ ಮಾಡಲಾಗಿದ್ದು, ಮುಂದಿನ ದಿನಗಳಲ್ಲಿ ನಲ್ ಯೋಜನೆಯಡಿ ನೀರು ವಿತರಣಾ ನಿರ್ವಹಣೆಯ ಕುರಿತಂತೆ ಸಮಗ್ರ ಅರಿವನ್ನು ಮೂಡಿಸಲು ಈ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕೌಶಲ್ಯ ಅಭಿವೃದ್ಧಿ ಇಲಾಖೆಯ ಸಹಾಯಕ ನಿರ್ದೇಶಕರಾದ ರಜತ್ ಹಬ್ಬು, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಟಿ.ಸಿ ಹಾದಿಮನಿ, ಜೋಯಿಡಾ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಎನ್.ಭಾರತಿ, ಎನ್.ಆರ್.ಎಲ್.ಎಂ ಜಿಲ್ಲಾ ಯೋಜನಾ ವ್ಯವಸ್ಥಾಪಕರಾದ ನಾಗರಾಜ ಅವರು ಭಾಗವಹಿಸಿ ಸಂದರ್ಭೋಚಿತವಾಗಿ ಮಾತನಾಡಿ ಶಿಬಿರಾರ್ಥಿಗಳು ಈ ತರಬೇತಿಯ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅಧ್ಯಕ್ಷತೆಯನ್ನು ಜಿಟಿಟಿಸಿ ಕಾಲೇಜಿನ ಪ್ರಾಚಾರ್ಯರಾದ ದತ್ತಾತ್ರಿ ಅವರು ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿಯನ್ನು ನೀಡಲಾಗುತ್ತಿದ್ದು, ಈ ತರಬೇತಿಯಲ್ಲಿ ಸಕ್ರಿಯರಾಗಿ ಭಾಗವಹಿಸುವಂತೆ ಕರೆ ನೀಡಿದರು. ಜಿಟಿಟಿಸಿ ಕಾಲೇಜಿನ ಉಪನ್ಯಾಸಕಿ ಜ್ಯೋತಿ ಸಜ್ಜನ್ ಸ್ವಾಗತಿಸಿ ವಂದಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ತರಬೇತಿಯಲ್ಲಿ ದಾಂಡೇಲಿ ಮತ್ತು ಜೋಯಿಡಾ ತಾಲೂಕು ವ್ಯಾಪ್ತಿಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಿಂದ ನೀರು ವಿತರಣಾ ನಿರ್ವಾಹಕರಾಗಿ ಆಯ್ಕೆಗೊಂಡ ತಲಾ ಇಬ್ಬರಂತೆ ಮಹಿಳಾ ಸದಸ್ಯರು ಭಾಗವಹಿಸಿದ್ದರು.