Slide
Slide
Slide
previous arrow
next arrow

ಅರಣ್ಯ ಇಲಾಖೆಯ 40 ವರ್ಷಗಳ ಹೋರಾಟಕ್ಕೆ ಸಂದ ಜಯ

300x250 AD

ಅರಣ್ಯ ಇಲಾಖೆಗೆ ಹಸ್ತಾಂತರದ ಪ್ರಕ್ರಿಯೆಯಲ್ಲಿ ಐಪಿಎಂ ಕಾರ್ಖಾನೆಯ ಜಾಗ

ಸಂದೇಶ್ ಎಸ್.ಜೈನ್, ದಾಂಡೇಲಿ

ದಾಂಡೇಲಿ : ಒಂದು ಕಾಲದಲ್ಲಿ ನಗರದ ಜನತೆಯ ಜೀವನಾಡಿಯಾಗಿದ್ದ ಹಾಗೂ ಸಾವಿರಾರು ಕಾರ್ಮಿಕರಿಗೆ ಉದ್ಯೋಗದ ಆಸರೆಯನ್ನು ನೀಡಿದ್ದ ನಗರದ ಐಪಿಎಂ ಕಾರ್ಖಾನೆ 1995-96ರಲ್ಲಿ ಸ್ಥಗಿತಗೊಂಡಿತು.

ಸ್ವಾತಂತ್ರ್ಯ ಪೂರ್ವದಲ್ಲಿ ಅಂದರೆ 1942ರಲ್ಲಿ ಆರಂಭಗೊಂಡ ಐಪಿಎಂ ಕಾರ್ಖಾನೆ 76.05 (ಎಪ್ಪತ್ತಾರು ಎಕ್ರೆ ಐದು ಗುಂಟೆ) ಜಾಗವನ್ನು ಹೊಂದಿಕೊಂಡಿದೆ. 1943ರಲ್ಲಿ ಬಾಂಬೆ ಸರಕಾರದಿಂದ 61.05 ಗುಂಟೆ (ಅರ್ವತ್ತೊಂದು ಎಕರೆ ಐದು ಗುಂಟೆ) ಜಾಗವನ್ನು ಐಪಿಎಂ‌ ಕಾರ್ಖಾನೆಗೆ ಲೀಸ್ ಮೂಲಕ ನೀಡಿತ್ತು. 1968 ರಲ್ಲಿ ಮೈಸೂರು ಸರಕಾರದಿಂದ 15 ಎಕರೆ ಜಾಗವನ್ನು ಐಪಿಎಂ ಕಾರ್ಖಾನೆಗೆ ಲೀಸ್ ಮೂಲಕ ನೀಡಲಾಗಿತ್ತು.

1983 ರಲ್ಲಿ ಲೀಸ್ ಅವಧಿ ಮುಗಿಯಿತು. ಆ ಸಂದರ್ಭದಲ್ಲಿ ಕರ್ನಾಟಕ ಸರಕಾರ 1984 ರ ಜೂನ್ ತಿಂಗಳವರೆಗೆ ಲೀಸ್ ಅವಧಿಯನ್ನು ವಿಸ್ತರಿಸಿತು. ಅರಣ್ಯ ಇಲಾಖೆಗೆ ಸಂಬಂಧಿಸಿದ ಜಾಗವಾಗಿದ್ದ ಹಿನ್ನಲೆಯಲ್ಲಿ ಐಪಿಎಂ ಕಾರ್ಖಾನೆ ಸ್ಥಗಿತಗೊಂಡ ನಂತರ ಅರಣ್ಯ ಇಲಾಖೆ ಈ ಜಾಗವನ್ನು ತನ್ನ ತೆಕ್ಕೆಗೆ ಪಡೆದುಕೊಳ್ಳಲು ನೋಟಿಸು ನೀಡುವುದು ಸೇರಿದಂತೆ ಸಾಕಷ್ಟು ಕಾನೂನು ರೀತಿಯ ಹೋರಾಟವನ್ನು ಮಾಡಿತ್ತು. ರಾಜ್ಯ ಉಚ್ಚ ನ್ಯಾಯಾಲಯದಲ್ಲಿಯೂ ಅರಣ್ಯ ಇಲಾಖೆಯ ಪರವಾಗಿ ತೀರ್ಪು ಬಂದಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಆದಾಗ್ಯೂ ಕಾರ್ಖಾನೆಯವರು ಜಾಗವನ್ನು ಬಿಟ್ಟು ಕೊಟ್ಟಿರುವುದಿಲ್ಲ. ಲೀಸ್ ಅವಧಿ ಮುಗಿದ ನಂತರ ಅದೇ ಅರಣ್ಯ ಜಾಗವು, ಅರಣ್ಯ ಅತಿಕ್ರಮಣ ಜಾಗವೆಂದಾಗುವುದರಿಂದ 2011ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರು ಐಪಿಎಂ ಕಾರ್ಖಾನೆಯವರಿಗೆ 64ಎ ಸೆಕ್ಷನ್ ಅಡಿ ನೋಟಿಸ್ ನೀಡಿದ್ದರು. ಈ ನೋಟಿಸ್ ವಿರುದ್ಧ ಐಪಿಎಮ್ ಕಾರ್ಖಾನೆಯವರು ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದ್ದರು. 2019ರಲ್ಲಿ ಧಾರವಾಡದ ಉಚ್ಚ ನ್ಯಾಯಾಲಯವು ಐಪಿಎಮ್ ಕಾರ್ಖಾನೆ ಅವರ ಮೇಲ್ಮನವಿಯನ್ನು ತಿರಸ್ಕರಿಸಿ ಅರಣ್ಯ ಇಲಾಖೆಯ ಪರವಾಗಿ ತೀರ್ಪನ್ನು ನೀಡಿತ್ತು.

300x250 AD

2020 ರ ಫೆಬ್ರವರಿ ತಿಂಗಳಲ್ಲಿ ಅರಣ್ಯ ಸಂರಕ್ಷಣಾಧಿಕಾರಿಯವರು ಐಪಿಎಂ ಕಾರ್ಖಾನೆಯವರಿಗೆ ಜಾಗ ಹಸ್ತಾಂತರಕ್ಕೆ ಸಂಬಂಧಿಸಿದಂತೆ ಅಂತಿಮ ಆದೇಶವನ್ನು ನೀಡಿದ್ದರು. ಈ ಆದೇಶದ ವಿರುದ್ಧ ಐಪಿಎಮ್ ಕಾರ್ಖಾನೆಯವರು ಮೇಲ್ಮನವಿ ಸಲ್ಲಿಸಿದ್ದರು. 2024ರಲ್ಲಿ ಮೇಲ್ಮನವಿ ಪ್ರಾಧಿಕಾರವು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅವರ ಆದೇಶವನ್ನು ಎತ್ತಿ ಹಿಡಿಯಿತು. 2024ರ ನವೆಂಬರ್ ತಿಂಗಳಲ್ಲಿ ಶಿರಸಿಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಐಪಿಎಮ್ ಕಾರ್ಖಾನೆಯ ಜಾಗವನ್ನು ಅರಣ್ಯ ಇಲಾಖೆಯ ಸ್ವಾಧೀನತೆ ಪಡೆದುಕೊಳ್ಳಲು ಆದೇಶವನ್ನು ನೀಡಿದ್ದರು. ಈ ಆದೇಶದಲ್ಲಿ ಐಪಿಎಮ್ ಕಾರ್ಖಾನೆಯ ವ್ಯಾಪ್ತಿಯಲ್ಲಿರುವ ಖಾಲಿ ಜಾಗವನ್ನು ತಕ್ಷಣವೇ ವಶಕ್ಕೆ ಪಡೆದು ಉಳಿದಂತೆ ಕಟ್ಟಡ ಇರುವ ಪ್ರದೇಶವನ್ನು ಕೂಡಲೇ ನೆಲಸಮಗೊಳಿಸಿ ಇಲಾಖೆಯ ವಶಕ್ಕೆ ಪಡೆಯಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನೋಟಿಸ್ ಅನ್ನು ನೀಡಲಾಯಿತು.

ಈ ಆದೇಶದ ನಂತರದಲ್ಲಿ ನವೆಂಬರ್ 2024ರಲ್ಲಿ ಸುಮಾರು 30 ರಿಂದ 35 ಎಕರೆ ಐಪಿಎಮ್ ಜಾಗವನ್ನು ಅರಣ್ಯ ಇಲಾಖೆ ತನ್ನ ವಶಕ್ಕೆ ಪಡೆದುಕೊಂಡಿದೆ. ಉಳಿದಂತೆ ಕಟ್ಟಡಗಳಿರುವ ಪ್ರದೇಶದಲ್ಲಿ ಕಟ್ಟಡವನ್ನು ನೆಲಸಮಗೊಳಿಸಿ ಕಾಲಮಿತಿಯೊಳಗಡೆ ಅರಣ್ಯ ಇಲಾಖೆಯ ವಶಕ್ಕೆ ಒಪ್ಪಿಸುವಂತೆ ಐಪಿಎಂ ಕಾರ್ಖಾನೆಯವರಿಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯವರು ಆದೇಶವನ್ನು ನೀಡಿದ್ದಾರೆ.

ಅರಣ್ಯ ಇಲಾಖೆಯ ಅದೇಶದ ಪ್ರಕಾರ ಐಪಿಎಂ ಕಾರ್ಖಾನೆಯವರು ಇದೀಗ ಕಾರ್ಖಾನೆಯ ಕಟ್ಟಡವನ್ನು ನೆಲಸಮಗೊಳಿಸುವ ಕಾರ್ಯಕ್ಕೆ ಮುಂದಾಗಿದ್ದು, ನೆಲಸಮಗೊಳಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಒಟ್ಟಿನಲ್ಲಿ ಅರಣ್ಯ ಇಲಾಖೆಯ 40 ವರ್ಷಗಳ ಸುದೀರ್ಘ ಹೋರಾಟಕ್ಕೆ ಅಂತಿಮವಾಗಿ ಜಯ ದೊರೆತಂತಾಗಿದೆ. ಇದೀಗ ಐಪಿಎಂ ಕಾರ್ಖಾನೆಯ ಪ್ರದೇಶ ವ್ಯಾಪ್ತಿ ಅರಣ್ಯ ಇಲಾಖೆಯ ಅಮೂಲ್ಯ ಆಸ್ತಿಯಾಗುತ್ತಿದೆ.

Share This
300x250 AD
300x250 AD
300x250 AD
Back to top