ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಶುಕ್ರವಾರ ತಾಲೂಕಿನ ಕಾನಗೋಡಿನ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು.
ಫೆ. 11ರಿಂದ ಕಾನಗೋಡು ಮಾರಿಕಾಂಬಾ ಜಾತ್ರೆ ಪ್ರಾರಂಭಗೊಂಡಿದ್ದು, ವಿಶೇಷ ದಿನವಾದ ಶುಕ್ರವಾರ ಶಾಸಕ ಭೀಮಣ್ಣ ನಾಯ್ಕ ಕುಟುಂಬ ಸಮೇತ ಜಾತ್ರಾ ಗದ್ದುಗೆಗೆ ಆಗಮಿಸಿ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ದರ್ಶನ ಪಡೆದರು. ನಂತರ ನಡೆದ ಧರ್ಮಸಭೆಯಲ್ಲಿ ಪಾಲ್ಗೊಂಡು ಊರಿನ ಸಾಧಕರು ಹಾಗೂ ಜಾತ್ರೆಯ ಯಶಸ್ಸಿಗೆ ಶ್ರಮಿಸಿದವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ.ಜಿ.ನಾಗರಾಜ, ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ, ತಾಪಂ ಇಓ ದೇವರಾಜ ಹಿತ್ತಲಕೊಪ್ಪ, ಸಿಪಿಐ ಜೆ.ಬಿ.ಸೀತಾರಾಮ, ಭೂ ನ್ಯಾಯ ಮಂಡಳಿ ಸದಸ್ಯ ಎಚ್.ಕೆ.ಶಿವಾನಂದ, ಕಾನಗೋಡ ಗ್ರಾಪಂ ಅಧ್ಯಕ್ಷ ಕೃಷ್ಣಮೂರ್ತಿ ನಾಯ್ಕ, ಜಾತ್ರಾ ಸಮಿತಿ ಅಧ್ಯಕ್ಷ ಕೆರಿಯಾ ನಾಯ್ಕ ಸಣ್ಣಟ್ಟಿ, ಪ್ರಧಾನ ಕಾರ್ಯದರ್ಶಿ ಶಂಕರ ನಾಯ್ಕ, ಕಾನಗೋಡ ಸೊಸೈಟಿ ಅಧ್ಯಕ್ಷ ಕೇಶವ ದೊಡ್ಮನೆ ಮತ್ತಿತರರು ಉಪಸ್ಥಿತರಿದ್ದರು.