ದಾಂಡೇಲಿ : ಇತಿಹಾಸ ಪ್ರಸಿದ್ಧ ಶ್ರೀ ಕ್ಷೇತ್ರ ಉಳವಿ ಶ್ರೀ ಚನ್ನಬಸವೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸಿರುವ ಯಾತ್ರಾರ್ಥಿಗಳಿಗೆ ದಾಂಡೇಲಿಯ ಮುರಗೋಡ ಗೆಳೆಯರ ಬಳಗದ ವತಿಯಿಂದ ಐದನೇ ವರ್ಷದ ಅನ್ನದಾಸೋಹ ಸೇವೆಯು ಅತ್ಯಂತ ಪ್ರೀತಿ, ಮಮತೆಯಿಂದ ನಡೆಯುತ್ತಿದೆ.
ನಗರದ ಶ್ರೀ ವೀರಶೈವ ಸೇವಾ ಸಂಘ ಕಮೀಟಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಮತ್ತು ಕೋಗಿಲಬನ- ಬಡಕಾನಶಿರಡಾ ಗ್ರಾಮ ಪಂಚಾಯಿತಿಯ ಸಹಕಾರದಲ್ಲಿ ಶ್ರೀ ಕ್ಷೇತ್ರ ಉಳವಿಗೆ ಬರುವ ಯಾತ್ರಾರ್ಥಿಗಳ ಹಸಿವನ್ನು ನೀಗಿಸಲು ಮುರಗೋಡ ಗೆಳೆಯರ ಬಳಗದ ವತಿಯಿಂದ ಬೆಳಿಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಪಾಯಸದ ಜೊತೆಗೆ ಊಟವನ್ನು ನೀಡಲಾಗುತ್ತದೆ. ಉಪಹಾರ ಮತ್ತು ಊಟವನ್ನು ಮುರಗೋಡ ಗೆಳೆಯರ ಬಳಗವೇ ಸಿದ್ಧಪಡಿಸುತ್ತಿರುವುದು ಇಲ್ಲಿಯ ಅನ್ನ ದಾಸೋಹದ ವಿಶೇಷವಾಗಿದೆ.
ಈ ಕಾರ್ಯವನ್ನು ಮುರಗೋಡ ಗೆಳೆಯರ ಬಳಗವು ಅತ್ಯಂತ ಶ್ರದ್ಧಾಭಕ್ತಿಯಿಂದ ಮಾಡುತ್ತಾ ಬರುತ್ತಿದ್ದು, ಈ ಕಾರ್ಯಕ್ಕೆ ಉಳವಿ ಭಕ್ತರು ಹಾಗೂ ನಗರದ ಜನತೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ವರ್ಷದಿಂದ ನಿರಂತರ 10 ದಿನಗಳವರೆಗೆ ಈ ಪುಣ್ಯಕಾರ್ಯ ಮುರಗೋಡ ಗೆಳೆಯರ ಬಳಗದಿಂದ ನಡೆಯುವಂತಾಗಲಿ ಎನ್ನುವ ಹಾರೈಕೆ ಉಳವಿ ಭಕ್ತರದ್ದಾಗಿದೆ.