ದಾಂಡೇಲಿ : ಶ್ರೀ ಕ್ಷೇತ್ರ ಉಳವಿ ಜಾತ್ರೆಗೆ ಆಗಮಿಸುವ ಯಾತ್ರಾರ್ಥಿ ಮತ್ತು ಜಾತ್ರೆ ಮುಗಿಸಿ ಬರುವ ಯಾತ್ರಾರ್ಥಿಗಳಿಗೆ ಕೋಗಿಲಬನದಲ್ಲಿರುವ ಶ್ರೀ ಮೃತ್ಯುಂಜಯ ಮಠವು ಪ್ರತಿವರ್ಷದಂತೆ ಈ ವರ್ಷವೂ ಯಾತ್ರಾರ್ಥಿಗಳಿಗೆ ತಮ್ಮ ಎತ್ತುಗಳ ಸಹಿತ ಉಳಿದುಕೊಳ್ಳಲು ಸಕಲ ವ್ಯವಸ್ಥೆಯನ್ನು ಮಾಡುವ ಮೂಲಕ ಗಮನ ಸೆಳೆದಿದೆ.
ಫೆ.13ರಂದು ಉಳವಿ ಚನ್ನಬಸವಣ್ಣನ ಮಹಾ ರಥೋತ್ಸವ ನಡೆದ ಬಳಿಕ ಶ್ರೀ ಸ್ವಾಮಿ ಸನ್ನಿಧಿಗೆ ತೆರಳಿರುವ ಭಕ್ತರು ಹಿಂದಿರುಗಿ ಬರುತ್ತಿದ್ದಾರೆ. ಹೀಗೆ ಬರುವ ಭಕ್ತರಿಗೆ ಹಾಗೂ ಅವರ ಎತ್ತುಗಳು ಮತ್ತು ಚಕ್ಕಡಿಗಾಡಿಗಳಿಗೆ ವಿಶ್ರಾಂತಿಯನ್ನು ಪಡೆದುಕೊಳ್ಳಲು ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ಅವಕಾಶವನ್ನು ಕಲ್ಪಿಸಲಾಗಿದೆ. ಸುಮಾರು ಐದಾರು ಎಕರೆ ವಿಸ್ತೀರ್ಣದಲ್ಲಿರುವ ಶ್ರೀ ಮೃತ್ಯುಂಜಯ ಮಠದ ಆವರಣದಲ್ಲಿ ಎಲ್ಲಿ ನೋಡಿದರೂ ಶ್ರೀ ಉಳವಿಯ ಯಾತ್ರಾರ್ಥಿಗಳ ಜೊತೆ ಚಕ್ಕಡಿ ಗಾಡಿಗಳು ಹಾಗೂ ಎತ್ತುಗಳು ಹೆಚ್ಚಿನ ಸಂಖ್ಯೆಯಲ್ಲಿ ಬಿಡಾರ ಹೂಡಿವೆ.