ದಾಂಡೇಲಿ : ಬೀದಿ ನಾಯಿಗಳ ನಿಯಂತ್ರಣದ ಕುರಿತಂತೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗುವುದು ಎಂದು ನಗರ ಸಭೆಯ ಪೌರಾಯುಕ್ತರಾದ ವಿವೇಕ್ ಬನ್ನೆ ಹೇಳಿದರು.
ಅವರು ಗುರುವಾರ ನಗರಸಭೆಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ ಮಾತನಾಡಿದರು. ಈಗಾಗಲೇ ನಗರಸಭೆಯ ನೇತೃತ್ವದಲ್ಲಿ ಪಶುವೈದ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಲಾಗಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಅನುಮತಿಯನ್ನು ನೀಡುವಂತೆ ಭಾರತೀಯ ಪ್ರಾಣಿಗಳ ಕಲ್ಯಾಣ ಮಂಡಳಿಗೆ ಈಗಾಗಲೇ ಪತ್ರವನ್ನು ಬರೆಯಲಾಗಿದೆ. ಅಲ್ಲಿಂದ ಅನುಮತಿ ದೊರೆತ ನಂತರ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಟೆಂಡರ್ ಕರೆಯಲಾಗುತ್ತದೆ. ಆನಂತರ ಬೀದಿ ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗುತ್ತದೆ. ಈ ಕಾರ್ಯ ಕಾನೂನಿನ ಚೌಕಟ್ಟಿನಡಿಯಲ್ಲಿ ಆಗಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸುವಂತೆ ವಿವೇಕ್ ಬನ್ನೆ ವಿನಂತಿಸಿದ್ದಾರೆ.