ಹೊನ್ನಾವರ: ತಾಲೂಕಿನ ಹಿರಿಯ ಪ್ರಾಥಮಿಕ ಶಾಲೆ ಕೆರೆಕೋಣನಲ್ಲಿ ಸಾಲ್ಕೋಡ ಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬ ಯಶಸ್ವಿಯಾಗಿ ನಡೆಯಿತು.
ಕಲಿಕಾ ಹಬ್ಬವನ್ನು ವಿನೂತನವಾಗಿ ತಯಾರಿಸಿದ ಸೆಲ್ಫಿ ಕಾರ್ನರ್ ನಿಂದ ಅಲಂಕಾರಿಕ ಮಡಿಕೆಯನ್ನು ತೆರೆದು ಅದರಲ್ಲಿ ಇರುವ ಗಿಡಕ್ಕೆ ನೀರು ಹಾಕುವುದರ ಮೂಲಕ ಉದ್ಘಾಟಿಸಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಂ. ಜಿ. ನಾಯ್ಕ ಮಾತನಾಡಿ, ಕಲಿಕೆ ಎಂದರೆ ಮಗು ಹಬ್ಬದಂತೆ ಸಂಭ್ರಮಿಸುವ ವಾತಾವರಣದಂತೆ ಆಗಲೇಬೇಕಿರುವ ತುರ್ತು, ನಮ್ಮ ಸಮಾಜದ ಮುಂದಿದೆ. ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಹುಡುಕುವ ಬಹು ಆಪ್ತವಾದ ಪ್ರಯತ್ನವೇ “ಕಲಿಕಾ ಹಬ್ಬ ಎಂದು ಹೇಳಿದರು.
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಗೌರವಾಧ್ಯಕ್ಷ ಮತ್ತು ತಾಲುಕಾ ಯುವಜನ ಸೇವಾ ಅಧಿಕಾರಿಗಳಾದ ಸುಧೀಶ ನಾಯ್ಕ ಮಾತನಾಡಿ ಸರ್ಕಾರಿ ಶಾಲೆಯಲ್ಲಿ ಮಾತ್ರ ಇಂತಹ ಕಲಿಕಾ ಹಬ್ಬ ನಡೆಯುತ್ತಿದೆ, ಮಕ್ಕಳ ನಿತ್ಯದ ಕಲಿಕೆಯ ಒತ್ತಡವನ್ನು ಕಡಿಮೆ ಮಾಡಿ ಸಂತಸದಿಂದ ಶಾಲೆಯ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ಮಾಡುವ ಸದುದ್ದೇಶದಿಂದ ಈ ಕಲಿಕಾ ಹಬ್ಬವನ್ನು ಹಮ್ಮಿಕೊಳ್ಳಲಾಗಿದೆ. ಇದನ್ನು ಸರ್ಕಾರಿ ಶಾಲೆಯಲ್ಲಿ ಮಾತ್ರ ನಿರೀಕ್ಷಿಸಲು ಸಾಧ್ಯ ಹಾಗಾಗಿ ಎಲ್ಲರೂ ಸರ್ಕಾರಿ ಶಾಲೆಗೆ ಕಳಿಸುವುದರ ಮೂಲಕ ಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಕಾರಣೀಕರ್ತರಾಗಬೇಕು ಎಂದರು.
ಮುಖ್ಯ ಅತಿಥಿ ಕೆರೆಕೋಣ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಮಹೇಶ ಭಂಡಾರಿ ಮಾತನಾಡಿ ಸರ್ಕಾರಿ ಶಾಲಾ ಮಕ್ಕಳನ್ನು ಹಲವು ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಅವರ ಕಲಿಕಾ ಆಸಕ್ತಿಯನ್ನು ಹೆಚ್ಚಿಸುವುದೇ ಕಲಿಕಾ ಹಬ್ಬದ ಉದ್ದೇಶ ಎಂದರು.
ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಶೆಟ್ಟಿ ಮಾತನಾಡಿ ಇಂದು ಎಲ್ಲರ ಮುಖದಲ್ಲೂ ಹಬ್ಬದ ವಾತಾವರಣ ಎದ್ದು ಕಾಣುತ್ತಿದೆ ಇದಕ್ಕೆ ಪೂರಕವಾದ ಕಲಿಕಾ ಹಬ್ಬಗಳು ಪ್ರತಿ ವರ್ಷವೂ ನಡೆಯಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಎಸ್ ಡಿ. ಎಂ. ಸಿ. ಅಧ್ಯಕ್ಷ ರಾಮ ಭಂಡಾರಿ ಮಾತನಾಡಿ ಶಿಕ್ಷಕರ, ಪಾಲಕರ, ಎಸ್ ಡಿ. ಎಂ. ಸಿ. ಸದಸ್ಯರ ಸಾಂಘಿಕ ಪ್ರಯತ್ನದಿಂದ ಇಷ್ಟೊಂದು ಸಂಭ್ರಮದ ಕಲಿಕಾ ಹಬ್ಬವನ್ನು ಮಾಡಲಿಕ್ಕೆ ಸಾಧ್ಯವಾಯಿತು. ಇಂತಹ ಕಾರ್ಯಕ್ರಮಗಳು ನಿಜಕ್ಕೂ ಒಂದು ಹೊಸ ಹುರುಪನ್ನು ನೀಡುತ್ತದೆ ಎಂದರು. ಬಿ.ಆರ್.ಪಿ.ಗಳಾದ ವಿ.ಜಿ ನಾಯ್ಕ್ ಮಾತನಾಡಿ ಕಲಿಕಾ ಹಬ್ಬಕ್ಕೆ ಶುಭಾಶಯಗಳನ್ನು ಕೋರಿದರು.
ಕಾರ್ಯಕ್ರಮ ಆರಂಭವಾಗುವುದಕ್ಕಿಂತ ಮೊದಲು ಸಿ.ಆರ್.ಪಿ. ವೀಣಾ ಭಂಡಾರಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಬೇಂಡ್ ವಾದ್ಯದ ಸಮೇತ ಆಗಮಿಸಿದ ಮಕ್ಕಳು ಶಿಕ್ಷಕರು ವಿದ್ಯಾರ್ಥಿಗಳು ಹಳೆ ವಿದ್ಯಾರ್ಥಿಗಳ, ಪಾಲಕರ ಮೆರವಣಿಗೆಯನ್ನು ಶಾಲೆಯ ಅಂಗಳಕ್ಕೆ ಕೆರೆಕೋಣ ಶಾಲಾ ಮಕ್ಕಳು ಪೂರ್ಣ ಕುಂಭದೊಂದಿಗೆ ಸ್ವಾಗತಿಸಿದರು.
ಪ್ರಾರಂಭದಲ್ಲಿ ಇಂದು ನಿಧನರಾದ ಪದ್ಮಶ್ರೀ ಪ್ರಶಸ್ತಿ ವಿಜೇತೆ ಸುಕ್ರಿ ಬೊಮ್ಮು ಗೌಡರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕೆರೆಕೋಣ ಶಾಲಾ ಮಕ್ಕಳು ಹಾಡಿದ, ಶಿಕ್ಷಕಿ ಗಾಯತ್ರಿ ನಾಯ್ಕರಿಂದ ರಚಿತವಾದ ಕಲಿಕಾ ಹಬ್ಬದ ಸಂಪೂರ್ಣ ಮಾಹಿತಿ ನೀಡುವ ಸ್ವಾಗತ ಗೀತೆ ಎಲ್ಲರ ಮನ ಗೆದ್ದಿತು. ಸಾಲ್ಕೋಡ ಕ್ಲಸ್ಟರಿನ ಎಲ್ಲಾ ಶಾಲೆಯ ನೂರು ಮಕ್ಕಳು, ಪಾಲಕರು ಮತ್ತು ಶಿಕ್ಷಕರು ಈ ಸಂದರ್ಭದಲ್ಲಿ ಹಾಜರಿದ್ದರು.
ಸಿ.ಆರ್.ಪಿ. ವೀಣಾ ಭಂಡಾರಿ ಕಲಿಕಾ ಹಬ್ಬದ ಉದ್ದೇಶವನ್ನು ವಿವರಿಸಿ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಿಕ್ಷಕ ಗಣೇಶ್ ಟಿ ಭಾಗವತ ವಂದಿಸಿದರು. ಶಿಕ್ಷಕಿ ಲಲಿತಾ ಹೆಗಡೆ ಕಾರ್ಯಕ್ರಮ ನಿರೂಪಿಸಿದರು.