ಹೊನ್ನಾವರ: ಗೋವನ್ನು ಸಾಕಿದವನಿಗೆ ದರಿದ್ರ ಇಲ್ಲ. ಗೋವನ್ನು ಪ್ರೀತಿಯಿಂದ ಸಾಕಿ. ಗೋವು ಮತ್ತು ರೈತರ ಪರವಾಗಿ ನಾನಿದ್ದೇನೆ ಎಂದು ಮೀನುಗಾರಿಕೆ,ಬಂದರು, ಒಳನಾಡು ಸಾರಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ತಾಲೂಕಿನ ಹೈಗುಂದದಲ್ಲಿ ಬುಧವಾರ ತಾಲೂಕಾ ಪಶು ಸಂಗೋಪನಾ ಇಲಾಖೆಯ ವತಿಯಿಂದ ನಡೆದ ಮಿಶ್ರತಳಿ ಕರು ಹಾಗೂ ದೇಶೀತಳಿ ಕರುಗಳ ಪ್ರದರ್ಶನ ಮತ್ತು ಉಚಿತ ಬರಡು ಜಾನುವಾರು ಚಿಕಿತ್ಸಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಗೋವನ್ನು ಸಾಕುವುದಕ್ಕೆ ಇತಿಹಾಸವಿದೆ. ಮನುಷ್ಯ ಭೂಮಿಮೇಲೆ ಜೀವಿಸಿದಾಗಿನಿಂದ ಜೊತೆಯಲ್ಲಿ ಗೋವಿದೆ. ಹಾಲು, ಮೊಸರು, ಬೆಣ್ಣೆ, ತುಪ್ಪ, ಸಗಣಿ ಗೋವಿನ ಯಾವ ಉತ್ಪನ್ನವೂ ಅಪ್ರಯೋಜಕವಿಲ್ಲ. ಚಿಕ್ಕವರಿರುವಾಗ ಅಮ್ಮನ ಹಾಲು, ನಂತರ ಜೀವನಪೂರ್ಣ ಆಕಳ ಹಾಲು ಬೇಕು ಎಂದರು.
ನಾನು ಯಾವುದಕ್ಕೂ ವ್ಯತ್ಯಾಸವಾಗಿ ಮಾತನಾಡುವುದಿಲ್ಲ. ಎಷ್ಟುಬೇಕೋ ಅಷ್ಟನ್ನೇ ಮಾತನಾಡುವುದು. ವಾಟ್ಸಪ್, ಫೇಸ್ಬುಕ್ಗಳಲ್ಲೆಲ್ಲ ಕೆಲವರು ಟೀಕೆ ಮಾಡಿಬರೆದಾಗಿದೆ. ಅಧಿಕಾರಕ್ಕೋಸ್ಕರ ನಾನು ರಾಜಕಾರಣ ಮಾಡುವವನಲ್ಲ. ಕ್ಷೇತ್ರದ ಜನ ನನ್ನನ್ನು ಮನುಷ್ಯ ಎಂದು ಆಯ್ಕೆ ಮಾಡಿದ್ದಾರೆ. ನಾನು ಮನುಷ್ಯತ್ವದಿಂದ ನೋಡುತ್ತೇನೆ ಎಂದರು.
ನಾನೂ ಹಾಲು ಕರೆದಿದ್ದೇನೆ. ನನ್ನ ತಂದೆಯವರ ಕಾಲದಲ್ಲಿ ಆಕಳು, ಎಮ್ಮೆ, ಕೋಣ, ಎತ್ತು ಎಲ್ಲ ನಮ್ಮನೆಯಲ್ಲಿದ್ದವು. ನಾನು ಆಕಳ ಹಾಲು ಕುಡಿದು ಆರೋಗ್ಯವಾಗಿದ್ದೇನೆ. ಅಲ್ಕೋಹಾಲ್ ಕುಡಿಯುವುದಿಲ್ಲ ಎಂದರು.
ಪಶುಪಾಲನೆ ಮತ್ತು ಪಶುವೈದ್ಯಕೀಯ ಉಪನಿರ್ದೇಶಕ ಡಾ.ಕೆ.ಎಂ.ಮೋಹನಕುಮಾರ ಮಾತನಾಡಿ ಸಚಿವ ಮಂಕಾಳ ವೈದ್ಯರ ಪ್ರಯತ್ನದಿಂದ ರಾಜ್ಯದಲ್ಲಿ ಗುತ್ತಿಗೆಯಾಧಾರದಲ್ಲಿ ೪೦೦ ಪಶುವೈದ್ಯರನ್ನು ನೇಮಿಸಿಕೊಳ್ಳಲಾಗಿದೆ. ಇವರಲ್ಲಿ ಉತ್ತರ ಕನ್ನಡದಲ್ಲಿ ೧೬ ಪಶುವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಮಂಕಿಯಲ್ಲಿ ಹೊಸದಾಗಿ ಪಾಲಿಕ್ಲಿನಿಕ್ ಆರಂಭಿಸಲಾಗುತ್ತದೆ.
೧೯೬೨ ನಂಬರಿಗೆ ಕರೆ ಮಾಡಿದರೆ ಮನೆಬಾಗಿಲಿಗೆ ಸೇವೆ ವಾಹನಬರುತ್ತಿದೆ. ಜಿಲ್ಲೆಯಲ್ಲಿ ೧೩ ಅಂಬುಲೆನ್ಸ್ಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.
ರೋಟರಿಕ್ಲಬ್ನ ಮಹೇಶ ಕಲ್ಯಾಣಪುರ ಮಾತನಾಡಿ ಮುಂದಿನಪೀಳಿಗೆಗೆ ಸಂಸ್ಕಾರ ಕೊಡಲು ಆಕಳನ್ನು ಸಾಕುವುದಕ್ಕೆ ರೂಢಿ ಮಾಡಿಸಬೇಕು. ಆಕಳು ಸಾಕಿದವನಿಗೆ ತೊಂದರೆಯಾಗುವುದಿಲ್ಲ ಎಂದು ಇತಿಹಾಸ ಹೇಳಿದೆ ಎಂದರು.
ಹಾಲುಕರೆಯುವ ಸ್ಪರ್ಧೆ:
ಹಾಲು ಕರೆಯುವ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪಶುವೈದ್ಯಾಧಿಕಾರಿ ಡಾ.ಪ್ರಕಾಶ ತೀರ್ಪುಗಾರರಾಗಿ ಪಾಲ್ಗೊಂಡಿದ್ದರು.
ಸಚಿವ ಮಂಕಾಳು ವೈದ್ಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಗ್ರಾ.ಪಂ. ಸದಸ್ಯರಾದ ಪ್ರಮೋದ ನಾಯ್ಕ, ಗಣಪು ಗಣೇಶ ಹಳ್ಳೇರ, ಮಂಗಲಾ ಹಳ್ಳೇರ, ವಿನಾಯಕ ನಾಯ್ಕ ಮೂಡ್ಕಣಿ, ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಚೇತನಕುಮಾರ ಉಪಸ್ಥಿತರಿದ್ದರು.
ಹೊನ್ನಾವರ ತಾಲೂಕಾ ಪಶುಸಂಗೋಪನಾ ಇಲಾಖೆಯ ಮುಖ್ಯಪಶುವೈದ್ಯಾಧಿಕಾರಿ ಡಾ.ಬಸವರಾಜ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪಶುವೈದ್ಯಕೀಯ ಸಹಾಯಕ ರಾಜೇಶ ನಾಯ್ಕ ಸ್ವಾಗತಿಸಿದರು. ಡಾ.ಪ್ರಕಾಶ ಹೆಗಡೆ ವಂದಿಸಿದರು. ಪ್ರಶಾಂತ ಹೆಗಡೆ ವಂದೂರು ಕಾರ್ಯಕ್ರಮ ನಿರ್ವಹಿಸಿದರು. ಐವತ್ತಕ್ಕೂ ಹೆಚ್ಚು ಆಕಳು ಹಾಗೂ ಕರುಗಳನ್ನು ಪ್ರದರ್ಶನದಲ್ಲಿ ಭಾಗವಹಿಸಲಾಗಿತ್ತು.