ದಾಂಡೇಲಿ : ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆ ಇಲಾಖೆಯ ಆಶ್ರಯದಡಿ ಅಂಬೇವಾಡಿಯಲ್ಲಿ ನಿರ್ಮಾಣವಾಗಲಿರುವ ನೂತನ ಅಗ್ನಿಶಾಮಕ ಠಾಣೆಯ ಕಟ್ಟಡಕ್ಕೆ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಮುದಾಯ ಭವನಕ್ಕೆ ಶಂಕು ಸ್ಥಾಪನೆಯನ್ನು ಶನಿವಾರ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಆರ್.ವಿ.ದೇಶಪಾಂಡೆ ದಾಂಡೇಲಿ ಹಾಗೂ ದಾಂಡೇಲಿಯ ಸುತ್ತಮುತ್ತಲ ಪ್ರದೇಶಕ್ಕೆ ಅಗ್ನಿಶಾಮಕ ಠಾಣೆ ಅತೀ ಅವಶ್ಯವಾಗಿ ಬೇಕಿತ್ತು. ಈ ಭಾಗದಲ್ಲಿ ಅಗ್ನಿ ಅವಘಡಗಳಾದಂತ ಸಂದರ್ಭದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯವರು ತಡವರಿಯದೆ ಸ್ಪಂದಿಸುತ್ತಿದ್ದಾರೆ. ಕಾಗದ ಕಾರ್ಖಾನೆಯ ಈ ಸಹಕಾರಕ್ಕೆ ಅನಂತ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಇಲ್ಲಿ ಅಗ್ನಿಶಾಮಕ ಠಾಣೆ ಅತಿ ಅವಶ್ಯವಾಗಿ ಬೇಕಾಗಿರುವುದನ್ನು ಮನಗಂಡು ಮಂಜೂರಾತಿಯನ್ನು ಪಡೆದು 3 ಕೋಟಿ ರೂಪಾಯಿ ವೆಚ್ಚದಲ್ಲಿ ಇಲ್ಲಿ ನೂತನವಾಗಿ ಅಗ್ನಿಶಾಮಕ ಠಾಣೆ ಕಟ್ಟಡ ನಿರ್ಮಾಣವಾಗಲಿದೆ ಎಂದರು.
ಮಂಗಳೂರು ಪ್ರಾಂತ್ಯದ ಮುಖ್ಯ ಅಗ್ನಿಶಾಮಕ ಅಧಿಕಾರಿ ಬಿ.ಎಂ ತಿರುಮಲೇಶ್ ಅವರು ಮಾತನಾಡಿ 11 ತಿಂಗಳ ಒಳಗಡೆ ಇಲ್ಲಿ ಅಗ್ನಿಶಾಮಕ ಠಾಣೆಯ ಕಟ್ಟಡ ನಿರ್ಮಾಣಗೊಂಡು ಕಾರ್ಯ ನಿರ್ವಹಿಸಲಿದೆ. ಇಲ್ಲಿ ಅಗ್ನಿಶಾಮಕ ಠಾಣೆ ಮಂಜೂರು ಗೊಳಿಸಿ, ಅನುದಾನ ಬಿಡುಗಡೆಗೊಳಿಸಿದ ಆರ್.ವಿ.ದೇಶಪಾಂಡೆ ಸಹಕಾರವನ್ನು ಅಗ್ನಿಶಾಮಕ ಇಲಾಖೆ ಸದಾ ಸ್ಮರಿಸಿಕೊಳ್ಳುತ್ತದೆ ಎಂದರು.
ಹಿಂದುಳಿದ ವರ್ಗಗಳ ಜಿಲ್ಲಾ ಕಲ್ಯಾಣ ಅಧಿಕಾರಿ ಜಿ.ಸತೀಶ್ ಅವರು ಇಡೀ ರಾಜ್ಯದಲ್ಲೆ ಒಂದು ಕೋಟಿಗಿಂತ ಹೆಚ್ಚಿನ ಮೊತ್ತದ ಅಂದರೆ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ಹಿಂದುಳಿದ ವರ್ಗಗಳ ಇಲಾಖೆಯ ವತಿಯಿಂದ ಸಮುದಾಯ ಭವನ ನಿರ್ಮಾಣವಾಗುತ್ತಿರುವುದು ದಾಂಡೇಲಿಯಲ್ಲಿ ಮಾತ್ರ. ಇದನ್ನು ಸಾಧ್ಯವಾಗಿಸಿದ ಹಿರಿಮೆ ಆರ್ ವಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ ಎಂದರು.
ವೇದಿಕೆಯಲ್ಲಿ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಹೆಚ್.ರಾಜು, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಸುನಿಲ್ ಕುಮಾರ್, ಕೆ.ಆರ್.ಡಿ.ಎಲ್ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ನವೀನ್, ನಗರಸಭೆಯ ಅಧ್ಯಕ್ಷರಾದ ಅಷ್ಪಾಕ್ ಶೇಖ, ಉಪಾಧ್ಯಕ್ಷೆ ಶಿಲ್ಪಾ ಕೋಡೆ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಸುಧಾ ರಾಮಲಿಂಗ ಜಾಧವ, ಪೌರಾಯುಕ್ತರಾದ ವಿವೇಕ್ ಬನ್ನೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮೋಹನ ಹಲವಾಯಿ ಮೊದಲಾದವರು ಉಪಸ್ಥಿತರಿದ್ದರು.
ಹಾಸ್ಟೆಲ್ ವಾರ್ಡನ್ ಚಿದಾನಂದ ಚಿಕ್ಕೊಪ್ಪ ಅವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು.