ಶಿರಸಿ: ಕದ್ದ ಗೋವಿನ ಮಾಂಸವನ್ನು ತಿನ್ನುವುದಿಲ್ಲ ಆದರೆ ಗೋಮಾಂಸ ಭಕ್ಷಣೆ ಮಾಡುತ್ತೇವೆ ಎಂಬ ತಂಜಿಮ್ ಅಧ್ಯಕ್ಷ ಇನಾಯತುಲ್ಲಾ ಶಾಬಂದ್ರಿ ಹೇಳಿಕೆಯನ್ನು ತೀವ್ರವಾಗಿ ವಿರೋಧಿಸುತ್ತೇವೆ ಎಂದು ಹಿಂದೂ ಜಾಗರಣ ವೇದಿಕೆಯ ಶಿರಸಿ ಜಿಲ್ಲಾ ಸಂಚಾಲಕ ಹರೀಶ್ ಕರ್ಕಿ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರತಿಕ್ರಿಯೆ ನೀಡಿರುವ ಅವರು ಸನಾತನ ಹಿಂದೂ ಧರ್ಮದಲ್ಲಿ ಗೋವಿಗೆ ಪೂಜ್ಯ ಸ್ಥಾನವಿದೆ, ಮುಕ್ಕೋಟಿ ದೇವತೆಗಳನ್ನು ಗೋವಿನಲ್ಲಿ ಕಾಣುವ ಸಂಸ್ಕೃತಿ ಸಂಪ್ರದಾಯ ಭಾರತೀಯರದ್ದು ಎಂದು ಹೇಳಿದ್ದಾರೆ.
ಹೊನ್ನಾವರದ ಸಾಲ್ಕೋಡಿನ ಗೋ ಹತ್ಯೆಯ ಘಟನೆಯನ್ನೇ ತೆಗೆದುಕೊಂಡರೆ, ಅಲ್ಲಿ ಬಂಧಿಸಲ್ಪಟ್ಟವರು ದೊಡ್ಡ ಗೋಮಾಂಸ ಮಾರಾಟ ಜಾಲವನ್ನು ಹೆಣೆದುಕೊಂಡಿದ್ದರು ಎಂಬುದು ಸ್ಪಷ್ಟವಾಗುತ್ತದೆ. ವಾಟ್ಸಾಪ್ ಗ್ರೂಪ್ಗಳನ್ನು ರಚಿಸಿಕೊಂಡು, ಮೊದಲು ಗಿರಾಕಿಗಳಿಗೆ ಗೋವಿನ ಫೋಟೋ ಕಳಿಸಿ, ನಂತರ ಗೋ ವಧೆ ಮಾಡಿ ಮಾಂಸ ಪೂರೈಸುತ್ತಿದ್ದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಇಂತಹ ದುರುಳರಿಗೆ ಕಾನೂನಿನಡಿ ಅತಿ ಹೆಚ್ಚು ಪ್ರಮಾಣದ ಶಿಕ್ಷೆ ವಿಧಿಸಬೇಕು, ಅಪರಾಧಿಗಳ ರಕ್ಷಣೆಗೆ ಯಾರೂ ಕೂಡ ನಿಲ್ಲುವ ಭಂಡತನ ತೋರಬಾರದು ಎಂದು ಅಗ್ರಹಿಸಿದ್ದಾರೆ.
ಗೋ ಹತ್ಯೆ ಎಂಬುದು ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡುವ ಹೇಯಕೃತ್ಯ, ಯಾರೇ ಆಗಲಿ ಈ ಬಗ್ಗೆ ಅತ್ಯಂತ ಎಚ್ಚರಿಕೆ ವಹಿಸಿ ಮಾತನಾಡುವುದು ಅಗತ್ಯ ಎಂದು ತಿಳಿಸಿದ್ದಾರೆ. ಆಹಾರ ಪದ್ಧತಿಯ ಹೆಸರಿನಲ್ಲಿ ಹಿಂದೂ ಧಾರ್ಮಿಕ ಭಾವನೆಗೆ ಧಕ್ಕೆ ತರುವ ಕೆಲಸ ಮಾಡುತ್ತಿರುವವರು ಹಂದಿ ಮಾಂಸವನ್ನು ಸೇವಿಸುತ್ತಾರಾ ಎಂದು ಹರೀಶ ಕರ್ಕಿ ಸವಾಲು ಹಾಕಿದ್ದಾರೆ.
ಈ ನೆಲದಲ್ಲಿ ಹುಟ್ಟಿ ಬೆಳೆದು, ಜೀವಿಸುತ್ತಿರುವವರು ಇಲ್ಲಿನ ನಂಬಿಕೆಗಳಿಗೆ, ರೀತಿ ರಿವಾಜುಗಳಿಗೆ ಗೌರವ ನೀಡಬೇಕಾದದ್ದು ಅತಿ ಅವಶ್ಯಕವಾಗಿದೆ ಎಂದು ಹರೀಶ್ ಕರ್ಕಿ ಅವರು ಅಭಿಪ್ರಾಯ ಪಟ್ಟಿದ್ದಾರೆ. ಸಾರ್ವಜನಿಕವಾಗಿ ಹೇಳಿಕೆ ಕೊಡುವವರು, ಮೊದಲು ತಮ್ಮ ಸಮಾಜಕ್ಕೆ ಹಿಂದೂ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟುಮಾಡದಂತೆ ಸಲಹೆ ನೀಡಿ ಎಂದು ಅಗ್ರಹಿಸಿದ್ದಾರೆ.
ತಕ್ಷಣದಲ್ಲಿ ಪ್ರಕರಣದ ತನಿಖೆ ನಡೆಸಿ, ವಿಕೃತ ಗೋ ಕಳ್ಳರನ್ನು ಬಂಧಿಸಿರುವ ಪೊಲೀಸ್ ಇಲಾಖೆಯ ಕಾರ್ಯ ಮೆಚ್ಚುವಂಥದ್ದು, ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಆರೋಪಿಯು ಪೊಲೀಸ್ ಮೇಲೆಯೇ ದಾಳಿ ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ನಡೆಸಿದ್ದ ಎಂದರೆ ಅದು ಎಂತಹ ಮಾನಸಿಕತೆ ಎಂಬುದು ಯೋಚಿಸಬೇಕಾದ ವಿಷಯ ಎಂದೂ ಸಹ ಅವರು ತಿಳಿಸಿದ್ದಾರೆ. ಅನೇಕ ವಿಷಯಗಳಿಗೆ ಸಂಬಂಧಿಸಿದಂತೆ ಫತ್ವಾ ಹೊರಡಿಸುವವರು, ಗೋ ಕಳ್ಳತನ, ಗೋ ಹತ್ಯೆ ನಿಲ್ಲಿಸುವಂತೆಯೂ ನಿರ್ಣಯ (ಫತ್ವಾ) ಹೊರಡಿಸಿ ಎಂದೂ ಹರೀಶ ಕರ್ಕಿ ಒತ್ತಾಯಿಸಿದ್ದಾರೆ.