ಹೊನ್ನಾವರ: ತಾಲೂಕಿನ ಕವಲಕ್ಕಿಯ ಸುಬ್ರಹ್ಮಣ್ಯ ಪದವಿ ಪೂರ್ವ ಕಾಲೇಜಿನ ಆವಾರದಲ್ಲಿ ಶ್ರೀಕುಮಾರ ಸಾರಿಗೆ ಸಂಸ್ಥೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ಜ್ಯೋತಿ ಕೆಎಮ್‌ಸಿ ಮಂಗಳೂರು ಇವರಿಂದ ಫೆ. 2 ರಂದು ವೈದ್ಯಕೀಯ ತಪಾಸಣಾ ಶಿಬಿರ ನಡೆಯಲಿದೆ ಎಂದು ಸಂಸ್ಥೆಯ ಮುಖ್ಯಸ್ಥ ವೆಂಕಟರಮಣ ಹೆಗಡೆ ಹೇಳಿದರು.
ಈ ಕುರಿತು ಕೋಣಕಾರದ ಎಸ್ಆರ್‌ಎಲ್ ಸಂಸ್ಥೆಯ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ತಮ್ಮ ಜನ್ಮದಿನದ ನಿಮಿತ್ತ ಈ ಶಿಬಿರ ಆಯೋಜಿಸಿರುವುದಾಗಿ ತಿಳಿಸಿದರು. ಪತ್ರಕರ್ತರ ಸಂಘ ಹೊನ್ನಾವರ,ಹವ್ಯಕ ವಿಕಾಸ ವೇದಿಕೆ,ನುಡಿಸಿರಿ ವಾಹಿನಿ,ಶರಾವತಿ ಸಾಂಸ್ಕೃತಿಕ ವೇದಿಕೆ ಹೊನ್ನಾವರ ಶಿಬಿರಕ್ಕೆ ಸಹಕಾರ ನೀಡಲಿದ್ದಾರೆ. ಸಾರ್ವಜನಿಕರು ಉಚಿತ ತಪಾಸಣೆಯ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿಸಿದರು. ಕಾರ್ಯಕ್ರಮಕ್ಕೆಆಗಮಿಸುವ ಗಣ್ಯರ ವಿವರ ನೀಡಿದರು.
ಹಿರಿಯ ಪತ್ರಕರ್ತರಾದ ಜಿ.ಯು.ಭಟ್ ಮಾತನಾಡಿ ಈ ತಪಾಸಣೆ ಶಿಬಿರದಲ್ಲಿ ಕೆ.ಎಂ.ಸಿ ಆಸ್ಪತ್ರೆ, ಮಂಗಳೂರಿನ ಹಿರಿಯ ವೈದ್ಯಾಧಿಕಾರಿಗಳು ತಪಾಸಣೆಯನ್ನು ನಡೆಸುವರು. ಹೃದಯ ಕಾಯಿಲೆ, ಮೂತ್ರಪಿಂಡ ಕಾಯಿಲೆ, ಬಾಯಿ, ಗಂಟಲು ಹಾಗೂ ಕ್ಯಾನ್ಸರ್ ಕಾಯಿಲೆ, ಸ್ತ್ರೀಯರ ಸಂಬಂಧಪಟ್ಟ ಕಾಯಿಲೆ ಹಾಗೂ ಸಾಮಾನ್ಯ ರೋಗಗಳ ಬಗ್ಗೆ ತಪಾಸಣೆಯನ್ನು ನಡೆಸಲಾಗುವುದು ಎಂದರು. ಈಗಾಗಲೇ ಕಾಯಿಲೆಗೆ ತುತ್ತಾಗಿ ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆಗೊಳಪಟ್ಟವರು ದಾಖಲಾತಿ ಇದ್ದರೆ ತರಬಹುದು ಎಂದರು.