ಕಾರವಾರ: ಜಿಲ್ಲೆಯಲ್ಲಿನ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ಯುವಜನತೆಗೆ ನೇವಿ, ಸೀಬರ್ಡ್, ವಜ್ರಕೋಶದಲ್ಲಿ ಉದ್ಯೋಗವಕಾಶಗಳನ್ನು ಒದಗಿಸುವ ನಿಟ್ಟಿನಲ್ಲಿ ನೌಕಾಪಡೆ ಅಧಿಕಾರಿಗಳು ಮತ್ತು ಜಿಲ್ಲೆಯಲ್ಲಿ ಉದ್ಯೋಗ ಮತ್ತು ಕೌಶಲ್ಯಾಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಕೈಗಾರಿಕಾ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಜಿಲ್ಲೆಯಲ್ಲಿನ ಐಟಿಐ ಮತ್ತು ಡಿಪ್ಲೋಮಾ ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ.
ಭೇಟಿಯ ಸಮಯದಲ್ಲಿ ನೇವಿ, ಸೀಬರ್ಡ್, ವಜ್ರಕೋಶದಲ್ಲಿ ಐಟಿಐ ಮತ್ತು ಡಿಪ್ಲೋಮಾ ವಿದ್ಯಾರ್ಹತೆ ಇರುವ ವಿದ್ಯಾರ್ಥಿಗಳಿಗೆ ಇರುವ ಉದ್ಯೋಗವಕಾಶಗಳ ಜೊತೆಗೆ, ಈ ಸಂಸ್ಥೆಗಳಲ್ಲಿ ಅಗತ್ಯವಿರುವ ವಿವಿಧ ರೀತಿಯ ಉದ್ಯೋಗ ಬೇಡಿಕೆ ಮತ್ತು ಅದಕ್ಕೆ ಅಗತ್ಯವಿರುವ ತಾಂತ್ರಿಕ ವಿದ್ಯಾರ್ಹತೆಯ ಬಗ್ಗೆ ಸದ್ರಿ ವಿದ್ಯಾಸಂಸ್ಥೆಗಳ ಪ್ರಾಂಶುಪಾಲರು ಮತ್ತು ವಿದ್ಯಾರ್ಥಿಗಳಿಗೆ ಅಧಿಕಾರಿಗಳು ಸಂಪೂರ್ಣ ಮಾಹಿತಿ ನೀಡಲಿದ್ದಾರೆ, ಈ ಅಧ್ಯಯನ ಪ್ರವಾಸಕ್ಕಾಗಿ ಇದಕ್ಕಾಗಿ ಈಗಾಗಲೇ ದಿನಾಂಕವನ್ನು ಕೂಡಾ ನಿಗಧಿಪಡಿಸಲಾಗಿದೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಇತ್ತೀಚೆಗೆ ನಡೆದ ಸೀಬರ್ಡ್ ಅಧಿಕಾರಿಗಳ ಸಭೆಯಲ್ಲಿ, ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಅಂಡ್ ಅಡ್ವರ್ಟೈಸಿಂಗ್ ಏಜೆನ್ಸಿ ಲಿಮಿಟೆಡ್ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಕೆ. ಸೈಲ್, ಸ್ಥಳೀಯರು ತಮ್ಮ ಜಮೀನು ಆಸ್ತಿ ಪಾಸ್ತಿಗಳನ್ನು ದೇಶದ ರಕ್ಷಣೆಯ ಉದ್ದೇಶಕ್ಕೆ ಬಿಟ್ಟುಕೊಟ್ಟು ಈಗ ನಿರಾಶ್ರಿತರಾಗಿದ್ದಾರೆ, ಇಲ್ಲಿನ ಯುವಜನತೆ ಸೂಕ್ತ ಉದ್ಯೋಗವಕಾಶಗಳಿಲ್ಲದೆ ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಉದ್ಯೋಗಗಳಿಗೆ ತೆರಳುತ್ತಿದ್ದಾರೆ. ಜಿಲ್ಲೆಯಲ್ಲಿರುವ ನೇವಿ ಮತ್ತು ಸೀಬರ್ಡ್ನಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವಕುರಿತಂತೆ ಜಿಲ್ಲಾಡಳಿತ ಮತ್ತು ಸೀಬರ್ಡ್ ಅಧಿಕಾರಿಗಳು ವಿಶೇಷ ಪ್ರಯತ್ನ ವಹಿಸುವಂತೆ ನಿರ್ದೇಶನ ನೀಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.