Slide
Slide
Slide
previous arrow
next arrow

ಶಾಂತಕವಿ ಕನ್ನಡ ಕುಲಕೋಟಿಗೆ ಸ್ಫೂರ್ತಿ: ವಿ||ಉಮಾಕಾಂತ ಭಟ್ಟ

300x250 AD

 ಶಿರಸಿಯ ರಂಗಧಾಮದಲ್ಲಿ ನಡೆದ ಶಾಂತಕವಿಯ 169ನೇ ಜನ್ಮದಿನೋತ್ಸವ

ಶಿರಸಿ: ಸಕ್ಕರಿ ಬಾಳಾಚಾರ್ಯ(ಶಾಂತಕವಿ) ಕನ್ನಡ ಕುಲಕೋಟಿಗೆ ಒಂದು ಸ್ಪೂರ್ತಿ, ಸಾಧನಾ ಪಂಚಕದ ಕವಿ, ಅವರಲ್ಲಿ ಕವಿತ್ವವಿತ್ತು, ಶಾಂತತೆಯಿತ್ತು. ಆದ್ದರಿಂದ ಶಾಂತಕವಿ ಅಂದಿನ ಕಾಲದಲ್ಲಿ ಕನ್ನಡ ಭಾಷೆಯ ಬಗೆಗೆ ಜಾಗೃತಿ ಮೂಡಿಸಿ, ನಾಟಕ ರಚನೆ, ನಟನೆ, ನಿರ್ದೇಶನ, ಅನುವಾದ,  ಕೀರ್ತನೆಗಳ ಮೂಲಕ ನೆಲ, ಸಂಸ್ಕಾರಗಳ ಬಗೆಗೆ ಅನೇಕ ಕೊಡುಗೆಗಳನ್ನು ನೀಡಿ ಕನ್ನಡಮ್ಮನ ಮುಡಿಯನ್ನು ಶೃಂಗರಿಸಿದ ಕವಿ ಶಾಂತಕವಿ. ಸಂಸ್ಕೃತ ಇವರಿಗೆ ಅಜ್ಜಿಯಾಗಿದ್ದರೆ, ಕನ್ನಡ ತಾಯಿಯಾಗಿತ್ತು. ಜಯದೇವನ ಸಂಸ್ಕೃತದ ‘ಗೀತ ಗೋವಿಂದ’ವನ್ನು ಕನ್ನಡಕ್ಕೆ ಅನುವಾದ ಮಾಡಿದ್ದಾರೆ ಎಂದು ವಿದ್ಯಾವಾಚಸ್ಪತಿ ವಿ||ಉಮಾಕಾಂತ ಭಟ್ಟ ಕೆರೆಕೈ ಅವರು ಶಾಂತಕವಿಯ 169ನೇ ಜನ್ಮದಿನೋತ್ಸವದ ಅಂಗವಾಗಿ ಕರ್ನಾಟಕ ಜಾನಪದ ಪರಿಷತ್ತು ಶಿರಸಿ ತಾಲ್ಲೂಕು ಹಾಗೂ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್(ರಿ) ಧಾರವಾಡ ಇವರ ಸಂಯುಕ್ತಾಶ್ರಯದಲ್ಲಿ ಶಿರಸಿಯ ರಂಗಧಾಮದಲ್ಲಿ ಏರ್ಪಡಿಸಿದ್ದ ದಿನದರ್ಶಿಕೆ ಬಿಡುಗಡೆ ಮತ್ತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.

 ಮುಂದುವರಿದ ಅವರು ‘ಶೃಂಗಾರವೇ ಜೀವನದ ಶೃಂಗಾರ,  ವಿರಹ ವೈರಾಗ್ಯದ ಪೂರ್ವ ಸಿದ್ಧತೆ, ಜೀವನದ ಬಂಗಾರವೇ ಶೃಂಗಾರ,  ಜೀವನವೇ ಬೇಡವೆನಿಸಿದಾಗ ಅದು ವೈರಾಗ್ಯ.  ನಾಟಕಕ್ಕೆ ಸಂಸ್ಕಾರವಿದೆ ಅದು ವಿಶ್ವವಿದ್ಯಾನಿಲಯದ ಪದವಿಯಲ್ಲ. ನಾನು ಬೆಂಬಲವಾಗಿ ಹಂಬಲಿಸಿದ್ದು ರಂಗಭೂಮಿಯನ್ನು’ ಎಂದು ಮನೋಜ್ಞವಾಗಿ ಮಾತನಾಡಿದರು.

 ಡಾ.ಪ್ರಕಾಶ ಗರುಡರವರು ‘ಶಾಂತ ಕವಿಗಳು ಕನ್ನಡದ ಪರಿಚಾರಕರಾಗಿದ್ದರು. ಅವರ ಅಂದಿನ ಕಾಲವೆಂದರೆ ಕನ್ನಡದ ಅರುಣೋದಯದ ಕಾಲ. ‘ಗೀತಗೋವಿಂದ’, ‘ಮೇಘದೂತ’ ದಂಥ ಹಲವು ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ದಾಸಯ್ಯನಾಗಿ ಮನೆಮನೆಗೆ ತೆರಳಿ ಕನ್ನಡದ ಭಿಕ್ಷೆ ಬೇಡಿದ ಮಹಾಮಹಿಮರು’  ಎಂದು ಹೇಳಿ 2025ರ ದಿನದರ್ಶಿಕೆಯ ಬಗೆಗೆ ವಿಸ್ತಾರವಾದ ಮಾಹಿತಿಯನ್ನು ನೀಡಿ ‘ಇದೊಂದು ಐತಿಹಾಸಿಕ ದಾಖಲೆ’ ಎಂದರು.

ಡಾ.ಶಶಿಧರ ನರೇಂದ್ರ ಅವರು 2025ರ  ದಿನದರ್ಶಿಕೆಯ ಕುರಿತು ಮಾತನಾಡಿದರು. ವಿ.ಪಿ.ಹೆಗಡೆ ವೈಶಾಲಿ ಅವರು ಇದೊಂದು ‘ಶಾಂತಕವಿಯ ಚಾರಿತ್ರಿಕ ದಾಖಲೆ’ ಎಂದು ದಿನದರ್ಶಿಕೆಯನ್ನು ವರ್ಣಿಸಿದರು. 

300x250 AD

ಪ್ರೊ. ಎಚ್.ಆರ್ ಅಮರನಾಥ ಅವರು ಶಾಂತಕವಿಯ ಕುರಿತು ಮಾತನಾಡಿ,  ‘ಗೀತ ಗೋವಿಂದ’ದ ಅನುವಾದ ‘ವಿರಹ ತರಂಗ’ದ  ಬಗ್ಗೆ ಹೇಳಿ ತಾವೇ ರಚಿಸಿದ ಕೆಲವು ಸಾಲುಗಳನ್ನು ಪ್ರಸ್ತುತಪಡಿಸಿದರು.

 ಕಾರ್ಯಕ್ರಮದ ಪ್ರಾರಂಭದಲ್ಲಿ ಜಗದೀಶ ಭಂಡಾರಿ ಅವರು ಪ್ರಾರ್ಥಿಸಿದರು. ಜಾನಪದ ಪರಿಷತ್ತಿನ ಅಧ್ಯಕ್ಷ ಕೃಷ್ಣ ಪದಕಿ ಎಲ್ಲರನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.  ವಿಶ್ವನಾಥ ಹಿರೇಮಠರವರು ಶಾಂತಕವಿ ಅವರ ಕೆಲವು ಕವನಗಳನ್ನು ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದರು. ಚಂದ್ರಕಾಂತ ಮಂಗಳೂರು ತಬಲಾ ಸಾಥ್ ನೀಡಿದರು. ಶಾಂತಕವಿ ವಂಶಸ್ಥರು ಹಾಗೂ ಶಾಂತಕವಿ ಟ್ರಸ್ಟ್ ನ ಕಾರ್ಯದರ್ಶಿಯೂ ಆದ ಹನುಮೇಶ ಸಕ್ಕರಿ ಅವರನ್ನು ಈ ಸಂದರ್ಭದಲ್ಲಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಕಾರ್ಯದರ್ಶಿ ಜಗದೀಶ ಭಂಡಾರಿ ಅವರು  ವಂದಿಸಿದರು. ಪರಿಷತ್ ಸದಸ್ಯೆ ದಾಕ್ಷಾಯಿಣಿ ಪಿ.ಸಿ. ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನು ನಿರೂಪಿಸಿದರು. ಪರಿಷತ್ತಿನ ಸದಸ್ಯರಾದ ಗಣಪತಿ ಭಟ್ಟ, ಡಾ.ಆರ್.ಎನ್.ಹೆಗಡೆ, ಹನುಮಂತ ಸಾಲಿ, ಚಂದ್ರಶೇಖರ ಉಡುಪಿ ಸಹಕರಿಸಿದರು. ಸಾಹಿತ್ಯ ಬಳಗದ ಭವ್ಯ ಹಳೆಯೂರು, ಅಪರ್ಣಾ ಹೆಗಡೆ, ಲೀಲಾ ಭಟ್ಟ, ಮಂಜುಳಾ ಅಮರನಾಥ, ಉಮೇಶ ದೈವಜ್ಞ, ಅನಂತ ಹೆಗಡೆ, ರೋಹಿಣಿ ಹೆಗಡೆ, ಶಾಂತಾರಾಮ ಬಂಡೀಮನೆ, ಡಿ.ಎಮ್.ಭಟ್ಟ, ಕೆ.ಎನ್.ಹೊಸಮನಿ ಮುಂತಾದವರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top