ಸಿದ್ದಾಪುರ: ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮ್ಮೇಳನ ಬೆಂಗಳೂರಿನ ತ್ರಿಪುರವಾಸಿನಿ ಅರಮನೆ ಮೈದಾನದಲ್ಲಿ ನಡೆಯಿತು. ತುಂಬುರ ವೇದಿಕೆಯಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಜ.19, ಭಾನುವಾರದಂದು ತುಂಬುರ ವೇದಿಕೆಯಲ್ಲಿ ಪ್ರದರ್ಶನಗೊಂಡ ಪರಿವರ್ತನೆ ಹವ್ಯಕ ನಾಟಕ ಪ್ರೇಕ್ಷಕರ ಗಮನ ಸೆಳೆದದ್ದು ಹೆಮ್ಮೆಯ ಸಂಗತಿ. ಮುಖ್ಯವಾಗಿ ಉತ್ತರ ಕನ್ನಡ ಜಿಲ್ಲೆಯ ಮಾತೆಯರು ಪ್ರದರ್ಶಿಸಿದ ಹವ್ಯಕ ನಾಟಕ ಪರಿವರ್ತನೆ ಸಮಾಜಕ್ಕೆ ಒಂದು ಉತ್ತಮ ಸಂದೇಶ ನೀಡುವಂತಿತ್ತು. ಶ್ರೀಮತಿ ಸುಜಾತಾ ಎಸ್ ಹೆಗಡೆ ದಂಟಕಲ್ ಇವರ ಕಥೆ , ಸಂಭಾಷಣೆ, ನಿರ್ದೇಶನದಲ್ಲಿ, ಶ್ರೀಮತಿ ನಿರ್ಮಲಾ ಹೆಗಡೆ ಕರ್ಕಿ ಅವರ ಪರಿಕಲ್ಪನೆಯಲ್ಲಿ,ಹಾಗೂ ಶ್ರೀಮತಿ ಶುಭಾ ಭಟ್ ಗಿಳಿಗುಂಡಿ ಅವರ ಸಂಯೋಜನೆಯಲ್ಲಿ ಶ್ರೀಮತಿ ಶ್ರೀಲತಾ ಭಟ್ ಹೆಗ್ಗರ್ಸಿಮನೆ ಅವರ ಹಿನ್ನೆಲೆ ಗಾಯನದೊಂದಿಗೆ ಹವ್ಯಕ ನಾಟಕ ಪರಿವರ್ತನೆ ಅತ್ಯುತ್ತಮವಾಗಿ ಮೂಡಿ ಬಂತು.
ಮುಖ್ಯ ಭೂಮಿಕೆಯಲ್ಲಿ ಕವಿತಾ ಪಾತ್ರಧಾರಿಯಾಗಿ ಶ್ರೀಮತಿ ಶುಭಾ ಭಟ್ ಗಿಳಿಗುಂಡಿ , ಸವಿತಾಳ ಪಾತ್ರದಲ್ಲಿ ಶ್ರೀಮತಿ ಸುಜಾತಾ ಎಸ್. ಹೆಗಡೆ ದಂಟಕಲ್, ಸಂಜಯನ ಪಾತ್ರದಲ್ಲಿ ಶ್ರೀಮತಿ ಸುಮಂಗಲಾ ಹೆಗಡೆ ಮಂಡೇಮನೆ , ಪ್ರದೀಪನ ಪಾತ್ರದಲ್ಲಿ ಶ್ರೀಮತಿ ಹೇಮಾ ಹೆಗಡೆ ಶಿರಸಿ, ಕವಿತಾಳ ತಂದೆಯಾಗಿ ಶ್ರೀಮತಿ ಕವಿತಾ ಹೆಗಡೆ ಕೆರೇಕೈ, ಸವಿತಾಳ ತಂದೆಯಾಗಿ ಶ್ರೀಮತಿ ಕುಸುಮಾ ಹೆಗಡೆ ಆಡಳ್ಳಿ, ಹಾಸ್ಯ ಪಾತ್ರಗಳಲ್ಲಿ ಶ್ರೀಮತಿ ನಿರ್ಮಲಾ ಹೆಗಡೆ ಕರ್ಕಿ, ಶ್ರೀಮತಿ ಮಂಗಲಾ ಹೆಗಡೆ ಕರ್ಕಿ ಇವರುಗಳು ಭಾಗವಹಿಸಿ ಮನೋಜ್ಞವಾಗಿ ಅಭಿನಯಿಸಿ ಸಭಾಸದರ ಮೆಚ್ಚುಗೆಗೆ ಪಾತ್ರರಾದರು. ಇಲ್ಲಿ ಪಾತ್ರವಹಿಸಿದ ಪಾತ್ರಧಾರಿಗಳು ವೃತ್ತಿ ಕಲಾವಿದರೋ ಅಥವಾ ಹವ್ಯಾಸಿ ಕಲಾವಿದರೂ ಕೂಡಾ ಆಗಿರದೆ ಇರುವುದೇ ಗಮನಾರ್ಹ ಸಂಗತಿ. ಈ ಸಮಾವೇಶಕ್ಕಾಗಿಯೇ ಸಿದ್ಧಗೊಂಡ ಉತ್ತರ ಕನ್ನಡ ಜಿಲ್ಲೆಯ ಮಾತೆಯರು ಇವರೆಲ್ಲಾ ಬೇರೆ ಬೇರೆ ತಾಲೂಕುಗಳಲ್ಲಿ ವಾಸಿಸುತ್ತಿರುವ ಇವರು ಕೇವಲ ಆನ್ಲೈನ್ ಮೂಲಕ ತರಬೇತಿ ನಡೆಸಿ ರಂಗದಲ್ಲಿ ಅಭಿನಯಿಸಿದ ಮಾತೆಯರ ಕಾರ್ಯ ಶ್ಲಾಘನೀಯ. ಪೇಟೆಯ ಜೀವನದಲ್ಲಿ ಏನೆಲ್ಲಾ ತೊಂದರೆಗಳನ್ನು ಅನುಭವಿಸಬೇಕು, ಹಳ್ಳಿಯ ಜೀವನ ಎಷ್ಟು ನೆಮ್ಮದಿ ಪೇಟೆಯಲ್ಲಿ ಇದ್ದರೂ ಹೇಗೆ ಬದುಕಬೇಕು ಎನ್ನುವ ಕಥಾ ವಸ್ತುವನ್ನು ಇಟ್ಟುಕೊಂಡು ಮಾತಿನ ಚಮತ್ಕಾರ ತೋರಿದ ಮಾತೆಯರನ್ನು ಇಡಿ ಸಭೆ ಚಪ್ಪಾಳೆಯ ಮೂಲಕ ಅಭಿನಂದಿಸಿತು.