ದಾಂಡೇಲಿ : ನಗರದ ರೋಟರಿ ಕ್ಲಬ್ ಆಶ್ರಯದಡಿ ರೋಟರಿ ಶಾಲೆಯ ಸಭಾಭವನದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಅನುಪಮ ಸೇವೆಯನ್ನು ಸಲ್ಲಿಸುತ್ತಿರುವ ತಾಲೂಕಿನ 12 ಶಿಕ್ಷಕರಿಗೆ ನೇಷನ್ ಬಿಲ್ಡರ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ರೋಟರಿ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ , ಲಿಯೋ ಪಿಂಟೋ ಅವರು ಸದೃಢ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಕೊಡುಗೆ ಅಪಾರವಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆಯ ಜೊತೆ ಜೊತೆಗೆ ಅವರ ವ್ಯಕ್ತಿತ್ವ ವಿಕಸನದಲ್ಲಿ ಶಿಕ್ಷಕರ ಪಾತ್ರ ಮಹತ್ವಪೂರ್ಣವಾಗಿದೆ. ಈ ನಿಟ್ಟಿನಲ್ಲಿ ಅಂತರಾಷ್ಟ್ರೀಯ ರೋಟರಿ ಕ್ಲಬ್ಬಿನ ಆಶಯದಂತೆ ಈ ವರ್ಷವೂ ಕೂಡ ತಾಲೂಕಿನ 12 ಶಿಕ್ಷಕರನ್ನು ಗುರುತಿಸಿ ನೇಷನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರಾಹುಲ್ ಬಾವಾಜಿ, ವಿದ್ಯಾರ್ಥಿ ಮುಂದೆ ಪ್ರಜೆಯಾಗಿ ಈ ದೇಶದ ಅಮೂಲ್ಯ ಆಸ್ತಿಯಾಗುವ ನಿಟ್ಟಿನಲ್ಲಿ ಶಿಕ್ಷಕರ ಶ್ರಮ ಸದಾ ಸ್ಮರಣೀಯವಾಗಿದೆ. ಶಿಕ್ಷಕರು ಸದೃಢ ರಾಷ್ಟ್ರ ನಿರ್ಮಾಣದ ಶಿಲ್ಪಿಗಳು. ಶಿಕ್ಷಕರ ಸೇವೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಕಾರ್ಯವನ್ನು ರೋಟರಿ ಕ್ಲಬ್ ಅತ್ಯಂತ ಅಭಿಮಾನದಿಂದ ಮತ್ತು ಗೌರವಯುತವಾಗಿ ಮಾಡುತ್ತಿದೆ ಎಂದರು.
ರೋಟರಿ ಕ್ಲಬ್ಬಿನ ಪ್ರಧಾನ ಕಾರ್ಯದರ್ಶಿ ಅಶುತೋಷ ಕುಮಾರ್ ರಾಯ್ ಅವರು ಇಂದು ನಾವೆಲ್ಲ ಪ್ರಜ್ಞಾವಂತ ನಾಗರಿಕರಾಗಿ ಸಮಾಜದಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳುವಂತಾಗಲು ನಮಗೆ ಕಲಿಸಿದ ಶಿಕ್ಷಕರೇ ಬಹು ಮುಖ್ಯ ಕಾರಣ. ಶಿಕ್ಷಕರನ್ನು ಪೂಜ್ಯ ಭಾವನೆಯಿಂದ ನೋಡುವ ಸಂಸ್ಕೃತಿ ನಮ್ಮದು. ಅತ್ಯಂತ ಬದ್ಧತೆಯಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಅದ್ವಿತೀಯ ಸೇವೆಯನ್ನು ಸಲ್ಲಿಸುತ್ತಿರುವ ಶಿಕ್ಷಕರನ್ನು ಸನ್ಮಾನಿಸುವುದು ನಮ್ಮ ಆದ್ಯ ಕರ್ತವ್ಯವು ಆಗಿದೆ ಎಂದರು.
ರೋಟರಿ ಕ್ಲಬ್ಬಿನ ಇವೆಂಟ್ ಚೇರ್ಮನ್ ಆರ್.ಪಿ. ನಾಯ್ಕ ಮಾತನಾಡಿ, ಈ ಪ್ರಶಸ್ತಿಗೆ ತನ್ನದೇ ಆದ ಮಾನದಂಡವನ್ನು ಇಟ್ಟುಕೊಂಡು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಈ ಬಾರಿ ಗ್ರಾಮೀಣ ಭಾಗದ ಶಿಕ್ಷಕರ ಸೇವೆಯನ್ನ ವಿಶೇಷವಾಗಿ ಗುರುತಿಸುವ ನಿಟ್ಟಿನಲ್ಲಿ ಕ್ರಮವನ್ನು ಕೈಗೊಳ್ಳಲಾಗಿದೆ. ತಾಲೂಕಿನ ಎಲ್ಲ ಶಿಕ್ಷಕರ ಸೇವೆಯು ಅಭಿನಂದನೀಯವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರುಗಳಾದ ಬಿಜು ನಾಯ್ಕ, ಅಮೃತಾ ಶ್ರೀಪಾದ್ ಭಟ್, ಕ್ಯಾತ್ರೀನ್ ಅಂಥೋನಿ ಡಿಕೋಸ್ಟಾ, ಪ್ರವೀಣ್ ಎಲ್, ಮಂಗಲಾ ಆರ್.ಕೇಣಿಕರ, ತೇಜಸ್ವಿನಿ ಜೆ.ನಾಯಕ, ಕಲ್ಪನಾ ಜಿ ನಾಯಕ, ದೇವದಾನಂ ಡೇವಿಡ್, ಲೂಸೀಯ ಡಿ.ಫೆರೇರೊ, ಇಂದಿರಾ ಎನ್.ಮಿರಾಶಿ ಮತ್ತು ನಾರಾಯಣ ನಾಯ್ಕ ಅವರಿಗೆ ನೇಶನ್ ಬಿಲ್ಡರ್ ಅವಾರ್ಡ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಬಿಜು ನಾಯ್ಕ, ಲೂಸೀಯ ಡಿ.ಫೆರೇರೊ, ಕಲ್ಪನಾ ಜಿ.ನಾಯಕ ಮೊದಲಾದವರು ಕೃತಜ್ಞತೆಯನ್ನು ಸಲ್ಲಿಸಿ ಮಾತನಾಡಿದರು.
ರಾಹುಲ್ ಬಾವಾಜಿ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಅಶುತೋಷ್ ಕುಮಾರ್ ರಾಯ್ ವಂದಿಸಿದರು. ರೋಟರಿ ಕ್ಲಬ್ಬಿನ ಪ್ರಮುಖರಾದ ಎಸ್. ಸೋಮ ಕುಮಾರ್ ಮತ್ತು ಶಿಕ್ಷಕಿ ಭಾರತಿ ಸೂರ್ಯಕಾಂತ ಕಲಶೇಖರ್ ಕಾರ್ಯಕ್ರಮವನ್ನು ನಿರೂಪಿಸಿದರು. ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು, ರೋಟರಿ ಶಾಲೆಯ ಶಿಕ್ಷಕರು ಹಾಗೂ ತಾಲೂಕಿನ ವಿವಿಧ ಶಾಲೆಗಳ ಶಿಕ್ಷಕರು ಭಾಗವಹಿಸಿದ್ದರು.