ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್.ಹೆಗಡೆ ಕರ್ಕಿ ಆಗ್ರಹ
ಶಿರಸಿ: ಮೈಸೂರು ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿಗಳು ಭಂಡತನ ಬಿಟ್ಟು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು. ರಾಜೀನಾಮೆಗೆ ಮುನ್ನ ಸಿಬಿಐ ತನಿಖೆಗೆ ಪ್ರಕರಣವನ್ನು ಹಸ್ತಾಂತರ ಮಾಡಬೇಕು ಎಂದು ಬಿಜೆಪಿ ಉತ್ತರಕನ್ನಡ ಜಿಲ್ಲಾಧ್ಯಕ್ಷರಾದ ಎನ್.ಎಸ್.ಹೆಗಡೆ ಕರ್ಕಿ ಆಗ್ರಹಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಮುಡಾ ಹಗರಣದ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಸ್ನೇಹಮಯಿ ಕೃಷ್ಣ ಅವರು ಬಯಲಿಗೆ ಎಳೆದಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ನ ಶಾಸಕರು ಸದನದ ಒಳಗಡೆ ಹಾಗೂ ಸದನದ ಹೊರಗಡೆ ಹೋರಾಟ ಮಾಡುತ್ತ ಬಂದಿದ್ದಾರೆ. ಮೈಸೂರು ಚಲೋ ಪಾದಯಾತ್ರೆಯ ಮೂಲಕ ಜನಜಾಗೃತಿ ಮೂಡಿಸುವಲ್ಲಿ ನಮ್ಮ ರಾಜ್ಯದ ನಾಯಕತ್ವ ಯಶಸ್ವಿಯಾಗಿದೆ ಎಂದು ತಿಳಿಸಿದ್ದಾರೆ.
ಮುಡಾ ಹಗರಣವು ನಿನ್ನೆ ಮಹತ್ವದ ತಿರುವು ಪಡೆದುಕೊಂಡಿದೆ. ಜಾರಿ ನಿರ್ದೇಶನಾಲಯವು (ಇಡಿ) 300 ಕೋಟಿಗೂ ಹೆಚ್ಚು ಬೆಲೆಬಾಳುವ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಮುಡಾ ಹಗರಣದಲ್ಲಿ ಮುಖ್ಯಮಂತ್ರಿಗಳು ತಮ್ಮ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗಿದೆ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಹಗರಣದಿಂದ ಮುಡಾಕ್ಕೆ ಕೋಟಿಗಟ್ಟಲೆ ನಷ್ಟವಾಗಿದ್ದು, ಇದು ಜನತೆಗೆ ಮಾಡಿದ ದ್ರೋಹ ಎಂದು ಎನ್.ಎಸ್.ಹೆಗಡೆ ತಿಳಿಸಿದ್ದಾರೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರವು ಬಡವರಿಗೆ ಮಂಜೂರಾಗಬೇಕಿದ್ದ ನಿವೇಶನಗಳನ್ನು ರಿಯಲ್ ಎಸ್ಟೇಟ್ ಉದ್ಯಮಿಗಳು, ದಲ್ಲಾಳಿಗಳಿಗೆ ನೀಡಿದ್ದು ಸ್ಪಷ್ಟವಾಗಿದೆ. ಇದೆಂತಹ ಸರಕಾರ, ಇದೇ ಸಿದ್ದರಾಮಯ್ಯ ಅವರ ಸಮಾಜವಾದವಾ…? ಎಂದೂ ಪ್ರಶ್ನಿಸಿದ್ದಾರೆ. ಬಿಜೆಪಿ ಹೋರಾಟಕ್ಕೆ ಮಣಿದು, ಮುಖ್ಯಮಂತ್ರಿಗಳು ಸೈಟ್ ವಾಪಸ್ ಮಾಡಿದ್ದಾರೆ; ಇದರಿಂದ ಸಿದ್ದರಾಮಯ್ಯ ಅಪರಾಧಿ ಎಂಬುದು ಸ್ಪಷ್ಟವಾಗುತ್ತದೆ ಎಂದು ತಿಳಿಸಿದ್ದಾರೆ.
ಪ್ರಕರಣದ ದಿಕ್ಕು ತಪ್ಪಿಸಲು ದೂರುದಾರ ಸ್ನೇಹಮಯಿ ಕೃಷ್ಣ ಅವರ ಮೇಲೆ ಆರೋಪ ಹೊರಿಸಿ – ಬಂಧಿಸುವ ಹಂತಕ್ಕೂ ರಾಜ್ಯ ಸರಕಾರ ಹೋಗಿತ್ತು. ಇ.ಡಿ. ಕೈಗೊಂಡ ಕ್ರಮಗಳಿಂದ ಸಿದ್ದರಾಮಯ್ಯನವರು ಮತ್ತೊಮ್ಮೆ ಅಪರಾಧಿ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಹೇಳಿದ್ದಾರೆ. ಇಷ್ಟಾಗಿಯೂ ಅಧಿಕಾರದಲ್ಲಿ ಮುಂದುವರೆಯುವುದು ಸಿದ್ದರಾಮಯ್ಯ ಅವರ ಭಂಡತನಕ್ಕೆ ಸಾಕ್ಷಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರ ವಿರುದ್ಧ ಪ್ರಾಸಿಕ್ಯೂಶನ್ಗೆ ಅನುಮತಿ ಕೊಟ್ಟ ಮಾನ್ಯ ರಾಜ್ಯಪಾಲರ ಮೇಲೂ ಅಪವಾದ ಹೊರಿಸುವ ಕೆಲಸವನ್ನು ಸಿದ್ದರಾಮಯ್ಯನವರ ನೇತೃತ್ವದ ಸರಕಾರದ ಸಚಿವರು ಮಾಡಿದ್ದರು. ಘನತೆವೆತ್ತ ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ಕೊಟ್ಟದ್ದೇ ತಪ್ಪು ಎಂಬಂತೆ ಬಿಂಬಿಸಲು ಯತ್ನಿಸಿದ್ದರು. ನಂತರ ರಾಜ್ಯ ಹೈಕೋರ್ಟ್, ರಾಜ್ಯಪಾಲರು ಪ್ರಾಸಿಕ್ಯೂಶನ್ಗೆ ಅನುಮತಿ ಕೊಟ್ಟದ್ದು ಸರಿಯಾಗಿದೆ; ಮೇಲ್ನೋಟಕ್ಕೆ ಮುಡಾ ಹಗರಣದಲ್ಲಿ ತಪ್ಪು, ಅವ್ಯವಹಾರ ನಡೆದಿದೆ ಎಂದಿತ್ತು. ಅಲ್ಲದೆ, ಸಿಎಂ ಕುಟುಂಬಕ್ಕೆ ಅಕ್ರಮವಾಗಿ 14 ನಿವೇಶನ ಕೊಟ್ಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಋಜುವಾತಾಗಿದ್ದನ್ನು ಹೈಕೋರ್ಟ್ ಮತ್ತೊಮ್ಮೆ ಹೇಳಿತ್ತು ಎಂದು ವಿವರಿಸಿದ್ದಾರೆ.
ತಪ್ಪು ಸಾಬೀತಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಸ್ವಯಂಪ್ರೇರಿತರಾಗಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕಿತ್ತು. ಸಿದ್ದರಾಮಯ್ಯನವರು ಹಗರಣವನ್ನು ದೀರ್ಘ ಕಾಲ ಎಳೆದುಕೊಂಡು ಬಂದಿದ್ದಾರೆ, ಅಧಿಕಾರದಾಹ ಬಿಟ್ಟು, ಸಿ.ಎಂ ಸ್ಥಾನಕ್ಕೆ ಕೂಡಲೇ ರಾಜೀನಾಮೆ ಕೊಟ್ಟು ಹೋಗಲಿ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಎಸ್. ಹೆಗಡೆ ಕರ್ಕಿ ಆಗ್ರಹ ಮಾಡಿದ್ದಾರೆ.