ಯಲ್ಲಾಪುರ: ಲಯನ್ಸ್ ಕ್ಲಬ್, ಆರೋಗ್ಯ ಇಲಾಖೆ, ಅಂಧತ್ವ ನಿಯಂತ್ರಣ ವಿಭಾಗ ಇವರ ಆಶ್ರಯದಲ್ಲಿ ಲಯನ್ಸ್ ರೇವಣಕರ್ ಚಾರಿಟೇಬಲ್ ಕಣ್ಣಿನ ಆಸ್ಪತ್ರೆಯಿಂದ ಕಣ್ಣಿನ ಪೊರೆ ಉಚಿತ ತಪಾಸಣಾ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರವನ್ನು ಪಟ್ಟಣದ ಅಡಕೆ ಭವನದಲ್ಲಿ ಜ.9 ರಂದು ಬೆಳಗ್ಗೆ 10.30 ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಲಯನ್ಸ್ ಕ್ಲಬ್ ಅಧ್ಯಕ್ಷ ಮಂಜುನಾಥ ನಾಯ್ಕ ಹೇಳಿದರು.
ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶಾಸಕ ಶಿವರಾಮ ಹೆಬ್ಬಾರ ಕಾರ್ಯಕ್ರಮ ಉದ್ಘಾಟಿಸಲಿದ್ದು, ತಾಲೂಕು ಆರೋಗ್ಯಾಧಿಕಾರಿ ಡಾ.ನರೇಂದ್ರ ಪವಾರ, ನೇತ್ರ ತಜ್ಞೆ ಡಾ.ಸೌಮ್ಯಾ ಕೆ.ವಿ. ಇತರರು ಭಾಗವಹಿಸಲಿದ್ದಾರೆ ಎಂದರು.
ತಜ್ಞ ವೈದ್ಯರಾದ ಡಾ.ಮನೋಜ, ಡಾ.ರಾಜಶೇಖರ ಭಾಗವಹಿಸಿ, ತಪಾಸಣೆ ನಡೆಸಲಿದ್ದಾರೆ. ಶಿಬಿರಕ್ಕೆ ಬರುವ ಅಂಗವಿಕಲರು ಹಾಗೂ ಹಿರಿಯ ನಾಗರಿಕರಿಗೆ ಬಸ್ ನಿಲ್ದಾಣದಿಂದ ಎಪಿಎಂಸಿವರೆಗೆ ಉಚಿತ ವಾಹನ ಸೌಕರ್ಯವಿದೆ. ತಪಾಸಣೆಯ ನಂತರ ಅಗತ್ಯವಿದ್ದವರನ್ನು ಕುಮಟಾದ ಆಸ್ಪತ್ರೆಗೆ ಕರೆದೊಯ್ದು ಶಸ್ತ್ರ ಚಿಕಿತ್ಸೆ ಮಾಡಲಾಗುವುದು ಎಂದು ವಿವರಿಸಿದರು.
ಲಯನ್ಸ್ ಕ್ಲಬ್ ಕಾರ್ಯದರ್ಶಿ ಶೇಷಗಿರಿ ಪ್ರಭು, ಖಜಾಂಚಿ ಮಹೇಶ ಗೌಳಿ, ಮಾಜಿ ಅಧ್ಯಕ್ಷರಾದ ಗೋಪಾಲ ನೇತ್ರೇಕರ್, ಸುರೇಶ ಬೋರಕರ್ ಇತರರಿದ್ದರು.