ದಾಂಡೇಲಿ : ಆನ್ಲೈನ್ ಮೂಲಕ ಪಾರ್ಸೆಲ್ ಬಂದಿದೆ ಎಂದು ಹೇಳಿ ಮನೆಯ ಹತ್ತಿರ ಬಂದು ಹಣ ತೆಗೆದುಕೊಂಡು ಪಾರ್ಸೆಲ್ ಕೊಟ್ಟು ಹೋದ ತಕ್ಷಣವೆ, ಬಂದ ಪಾರ್ಸೆಲ್ ಪ್ಯಾಕನ್ನು ತೆರೆದು ನೋಡಿದಾಗ ಅದರಲ್ಲಿ ಹಳೆಯದಾದ ಹರಿದ ಜೀನ್ಸ್ ಪ್ಯಾಂಟೊಂದನ್ನಷ್ಟೆ ಕಳುಹಿಸಿ ವಂಚನೆಗೊಳಗಾದ ವಿದ್ಯಮಾನ ಮಂಗಳವಾರ ನಗರದ ಸುದರ್ಶನ ನಗರದಲ್ಲಿ ನಡೆದಿದೆ.
ಸಂತೋಷ ನಾಕಾಡಿ ಎನ್ನುವವರೇ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಇವರ ಮನೆಗೆ ಟೌನಶಿಪ್’ನ ವ್ಯಕ್ತಿಯೋರ್ವ ನಿಮಗೆ ಪಾರ್ಸೆಲ್ ಬಂದಿದೆ, ರೂ.598/- ಹಣ ಪಾವತಿಸಿದ್ದಲ್ಲಿ ಬಂದಿರುವ ಪಾರ್ಸೆಲ್ ಕೊಡುವುದಾಗಿ ತಿಳಿಸಿದ್ದಾನೆ. ಸಂತೋಷ ನಾಕಾಡಿ ಅವರು ಮನೆಯಲ್ಲಿ ಇಲ್ಲದಿರುವುದರಿಂದ ಅವರ ಪತ್ನಿ ಮೊಬೈಲ್ ಕರೆ ಮಾಡಿ ಪಾರ್ಸೆಲ್ ಬಂದಿರುವುದನ್ನು ತಿಳಿಸಿದ್ದಾರೆ. ಆಗ ಸಂತೋಷ ನಾಕಾಡಿಯವರು ಮಕ್ಕಳೇನಾದ್ರೂ ಆರ್ಡರ್ ಮಾಡಿರಬಹುದು. ಹಣ ನೀಡಿ ಪಾರ್ಸೆಲ್ ಸ್ವೀಕರಿಸು ಎಂದಿದ್ದಾರೆ. ಅಂತೆಯೆ ಸಂತೋಷ ನಾಕಾಡಿಯವರ ಪತ್ನಿ ರೂ.598/- ನೀಡಿ ಬಾಕ್ಸ್ ಹಿರೋ ಎಂದು ಹೆಸರಿನಿಂದ ಬಂದಿದ್ದ ಪಾರ್ಸೆಲನ್ನು ಸ್ವೀಕರಿಸಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಬಂದಿರುವ ಪಾರ್ಸೆಲನ್ನು ಬಿಚ್ಚಿ ನೋಡಿದಾಗ ಮೋಸ ಹೋಗಿರುವುದು ದೃಢವಾಗಿದೆ.
ಆನಂತರ ಸಂತೋಷ ನಾಕಾಡಿಯವರು ಬಂದಿರುವ ಪಾರ್ಸೆಲ್ ಕವರ್ ಮತ್ತು ಅದರೊಳಗಿದ್ದ ಹಳೆಯ ಹರಿದ ಜೀನ್ಸ್ ಪ್ಯಾಂಟನ್ನು ಮಾಧ್ಯಮಕ್ಕೆ ತಂದು ತೋರಿಸಿ, ಆಗಿರುವ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ನನ್ನ ಮಕ್ಕಳು ಆನ್ಲೈನ್ ನಲ್ಲಿ ಆರ್ಡರ್ ಮಾಡುತ್ತಾರೆ ಹಾಗಾಗಿ ಅವರು ಮಾಡಿರಬಹುದು ಎಂದು ತಿಳಿದು ಪಾರ್ಸೆಲ್ ಸ್ವೀಕರಿಸಲು ಹೇಳಿದ್ದೆ. ಆದರೆ ನನ್ನ ಮಕ್ಕಳಾಗಲೀ, ನಾವಾಗಲಿ ಯಾರು ಆರ್ಡರ್ ಮಾಡದೆ ಇದ್ದರೂ ನನ್ನ ವಿಳಾಸಕ್ಕೆ ಪಾರ್ಸಲ್ ಬಂದಿದೆ. ನನಗೆ ಇದರಿಂದ ಮೋಸ ಆಗಿದೆ. ಈ ಪಾರ್ಸೆಲನ್ನು ತಂದುಕೊಟ್ಟ ಸ್ಥಳೀಯ ಟೌನಶಿಪ್‌ನಲ್ಲಿರುವಾತನ ಮನೆಗೆ ಹೋಗಿ ವಿಚಾರಿಸಿದಾಗ, ನನಗೇನು ಸಂಬಂಧವಿಲ್ಲ ಎಂದಿದ್ದಾನೆಯಂತೆ. ಹಾಗಾಗಿ ಆನ್ಲೈನ್ ಪಾರ್ಸೆಲ್ ಬಗ್ಗೆ ನಗರದ ಸಾರ್ವಜನಿಕರು ಬಹಳಷ್ಟು ಎಚ್ಚರಿಕೆಯನ್ನು ಹೊಂದಿರಬೇಕೆಂದು ಸಂತೋಷ ನಾಕಾಡಿ ಅವರು ಮಾಧ್ಯಮದ ಮೂಲಕ ಮನವಿಯನ್ನು ಮಾಡಿದ್ದಾರೆ. ಈ ಬಗ್ಗೆ ನಗರ ಠಾಣೆಗೆ ದೂರು ನೀಡುವುದಾಗಿ ಸಂತೋಷ ನಾಕಾಡಿ ಅವರು ತಿಳಿಸಿದ್ದಾರೆ.