ಹಳಿಯಾಳ: ನೂರಾ ಹದಿನಾಲ್ಕು ಗ್ರಾಮಗಳಿಗೆ ಸರಬರಾಜಾಗುವ ಬಹುಗ್ರಾಮ ಕುಡಿಯುವ ನೀರಿನ ಘಟಕವು ಬಹುದಿನಗಳಿಂದ ನಿರ್ಮಾಣವಾಗುತ್ತಿದ್ದು, ಸಿವಿಲ್ ಕಾರ್ಯ ಮಾತ್ರ ಪೂರ್ಣಗೊಂಡಿದ್ದು, ಬಾಕಿ ಕೆಲಸಗಳನ್ನು ಫೆ. 15 ರೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಮನೆಗಳಿಗೆ ನೀರು ಸರಬರಾಜಾಗಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಈಶ್ವರ ಕಾಂದೂ ಹೇಳಿದರು.
ಅವರು ಶುಕ್ರವಾರ ಹಳಿಯಾಳ ತಾಲೂಕಿನ ಯಡೋಗ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಹುಗ್ರಾಮ ಕುಡಿಯುವ ನೀರಿನ ಘಟಕಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮಾತನಾಡಿದರು.
ಬಳಿಕ ತಾಲೂಕ ಪಂಚಾಯತ ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿ, ನರೇಗಾ ಯೋಜನೆಯಡಿ ಕಡಿಮೆ ಮಾನವ ದಿನಗಳನ್ನು ಸೃಜನೆ ಮಾಡಿದ ಗ್ರಾಮ ಪಂಚಾಯತಿಗಳು ಪ್ರಗತಿ ಸಾಧಿಸುವುದು ಹಾಗೂ ಕಾಮಗಾರಿಯನ್ನು ಪೂರ್ಣಗೊಳಿಸದ ಸಾರ್ವಜನಿಕರಿಂದ ಹಣವನ್ನು ಹಿಂಪಡೆಯುವಂತೆ ತಿಳಿಸಿದರು. 15 ನೇ ಹಣಕಾಸಿನಲ್ಲಿರುವ ಮೊತ್ತವನ್ನು ಗ್ರಾಮದ ವಿವಿಧ ಅಭಿವೃದ್ಧಿ ಕೆಸಲಕ್ಕೆ ವಿನಿಯೋಗಿಸುವುದು ಹಾಗೂ ಅರಿವು ಕೇಂದ್ರದ ಸಿಬ್ಬಂದಿ ವೇತನವನ್ನು 15 ನೇ ಹಣಕಾಸಿನಿಂದ ಮಾಡಲು ತಿಳಿಸಿದರು.
ರಾಜ್ಯದಲ್ಲಿಯೇ ಕರವಸೂಲಿಯಲ್ಲಿ ಜಿಲ್ಲೆಯು ಮೊದಲ ಸ್ಥಾನದಲ್ಲಿದ್ದು, ಅಭಿಯಾನಗಳನ್ನು ಕೈಗೊಳ್ಳುವ ಮೂಲಕ ಹೆಚ್ಚು ಪ್ರಗತಿ ಸಾಧಿಸಲು ಸೂಚಿಸಿದರು. ಹಾಗೆಯೇ ದಾಂಡೇಲಿ ತಾಲೂಕಿನ ಜಾಕವೇಲ್ ಕಾಮಗಾರಿ, ಅಂಬೇವಾಡಿಯ ಚೆಸ್ ಪಾರ್ಕ್ ಮತ್ತು ವ್ಯಾಯಾಮ ಶಾಲೆ, ಛತ್ರನಾಳದ ಎಂವಿಎಸ್ನಲ್ಲಿ ನಿರ್ಮಾಣವಾದ ZPT, ಬಿಕೆ ಹಳ್ಳಿ ಗ್ರಾಮ ಪಂಚಾಯತಿ ಕಟ್ಟಡ ಕಾಮಗಾರಿ ಹಾಗೂ ನರೇಗಾ ಯೋಜನೆಯಡಿ ಚಿಬ್ಬಲಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಗನಳ್ಳಿ ಗ್ರಾಮದಲ್ಲಿ ನಿರ್ಮಾಣವಾದ ಸ್ಮಶಾನ ಕಾಮಗಾರಿ ಪರಿಶೀಲಿಸಿ ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ದಾಂಡೇಲಿ ತಾಲೂಕ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿ ಎಮ್ ಭಾರತಿ, ಹಳಿಯಾಳ ತಾಲೂಕ ಪಂಚಾಯತನ ಕಾರ್ಯ ನಿರ್ವಾಹಕ ಅಧಿಕಾರಿ ಆರ್ ಸತೀಶ್, ನರೇಗಾ ಸಹಾಯಕ ನಿರ್ದೇಶಕರಾದ ಸಂತೋಷ್ ರಾಠೋಡ್, ಅನುಪಮಾ ಬೆನ್ನೂರ್, ಎಲ್ಲ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ನರೇಗಾ ಹಾಗೂ ಎನ್ಆರ್ಎಲ್ಎಂ, ತಾಲೂಕು ಪಂಚಾಯತ ಸಿಬ್ಬಂದಿಗಳು ಸಿಬ್ಬಂದಿಗಳು ಹಾಜರಿದ್ದರು.