ಬನವಾಸಿ: ಚಳಿಗಾಲದಲ್ಲಿ ಮಹಿಳೆಯರು, ಮಕ್ಕಳು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಕಾಳಜಿವಹಿಸಬೇಕೆಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಮಹಿಳಾ ಜ್ಞಾನ ವಿಕಾಸ ಕೇಂದ್ರದ ತಾಲ್ಲೂಕು ಸಮನ್ವಯಾಧಿಕಾರಿ ಮಲ್ಲಿಕಾ ಶೆಟ್ಟಿ ಹೇಳಿದರು.
ಸಮೀಪದ ಕಾಂತ್ರಜಿ ಗ್ರಾಮದ ಸಭಾಭವನದಲ್ಲಿ ಬುಧವಾರ ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸ ಕೇಂದ್ರದಿಂದ ಹಮ್ಮಿಕೊಂಡ ಆರೋಗ್ಯ ಕುರಿತು ಮಾಹಿತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಚಳಿಗಾಲದಲ್ಲಿ ಗಾಳಿಯೂ ಶೀತವಾಗಿ ಬೀಸುತ್ತಿರುತ್ತದೆ. ವಾತಾವರಣದ ತಂಪಿನಿಂದ ಮನುಷ್ಯನ ದೇಹದಲ್ಲಿರುವ ಕಫದ ಅಂಶವೂ ಗಟ್ಟಿಯಾಗುತ್ತಾ ಹೋಗುತ್ತದೆ. ಇದರಿಂದ ಚರ್ಮ ಮತ್ತು ಪುಪ್ಪುಸಗಳ ಮಧ್ಯ ನಡೆಯುವ ಉಸಿರಾಟದ ಪ್ರಕ್ರಿಯೆಯೂ ನಿಧಾನಗತಿಯನ್ನು ಹೊಂದುತ್ತದೆ. ಇದರಿಂದಾಗಿ ಉಸಿರಾಟಕ್ಕೆ ಮತ್ತು ಚರ್ಮಕ್ಕೆ ಸಂಬಂಧಿಸಿದ ರೋಗಗಳು ಹೆಚ್ಚಾಗುತ್ತವೆ. ಹೀಗಾಗಿ ಈ ಸಮಸ್ಯೆಗಳಿಂದ ತಪ್ಪಿಸಿಕೊಳ್ಳಲು ನಾವು ನಮ್ಮ ದಿನಚರಿಯಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳುವುದು ಅನಿವಾರ್ಯವಾಗಿದೆ. ಉಸಿರಾಟಕ್ಕೆ ಸಂಬಂಧಪಟ್ಟಂತೆ ಕಾಣಿಸಿಕೊಳ್ಳುವ ನೆಗಡಿ ಕೆಮ್ಮು ದಮ್ಮು ತಲೆನೋವುಗಳು ಮತ್ತು ಚರ್ಮ ಒಡೆದು ರಕ್ತ ಬರುವುದು, ಚರ್ಮರೋಗಗಳ ಕಾಟ, ಮೈ ತುರಿಕೆಗಳು ಮತ್ತು ಗಂಟುಗಳಲ್ಲಿ ನೋವು, ಊತ, ಬಿಗಿತಗಳು – ಹೀಗೆ ಈ ಕಾಲದಲ್ಲಿ ಅನೇಕ ರೋಗಗಳು ಉಲ್ಬಣಗೊಳ್ಳಬಹುದು, ಅಥವಾ ಪ್ರಾರಂಭವಾಗಬಹುದು. ಇದಕ್ಕೆಲ್ಲ ವಾತಾವರಣದ ಬದಲಾವಣೆಗೆ ದೇಹ ಒಗ್ಗಿಕೊಳ್ಳಲು ಸಾಧ್ಯವಾಗದಿರುವುದೇ ಮುಖ್ಯ ಕಾರಣ. ಈ ರೋಗಗಳಿಂದ ದೂರವಿರಲು ಮೊದಲು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು, ಬೆಚ್ಚಗಿನ ವಾತಾವರಣದಲ್ಲಿ ಇರುವುದು, ಬಿಸಿ ಆಹಾರ ಮತ್ತು ಬಿಸಿ ನೀರಿನ ಸೇವನೆ ಇವೇ ಮೊದಲ ಚಿಕಿತ್ಸೆಯಾಗಿದೆ. ಈ ಕಾಲದಲ್ಲಿ ಶರೀರದ ಮತ್ತು ಚರ್ಮದ ಸ್ನಿಗ್ಧತೆಯನ್ನೂ ಬಲವನ್ನೂ ಕಾಪಾಡಿಕೊಳ್ಳಲು ದೇಹದಲ್ಲಿ ಜಿಡ್ಡಿನ ಅಂಶ ಕಡಿಮೆ ಆಗದಂತೆ ನೋಡಿಕೊಳ್ಳಬೇಕಾಗುತ್ತದೆ. ಇದಕ್ಕಾಗಿ ಎಣ್ಣೆಕಾಳುಗಳಾದ ಬಾದಾಮಿ, ಕಡಲೆಬೀಜ, ಎಳ್ಳು ಮೊದಲಾದವುಗಳನ್ನೂ ಮತ್ತು ಹೆಸರುಕಾಳು, ಉದ್ದು, ಅವರೆ, ತೊಗರಿ ಮುಂತಾದ ಕಾಳುಗಳನ್ನೂ ಉಪಯೋಗಿಸುವುದು ಉತ್ತಮ ಎಂದು ಹೇಳಿದರು.
ರಾಣಿ ಚೆನ್ನಮ್ಮ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ಮಾಲಾ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಸೇವಾ ಪ್ರತಿನಿಧಿ ಶಿವಾಜಿ ನಾಯ್ಕ್, ಹಾಗೂ ಮಹಿಳಾ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಇದ್ದರು.
ಕಾರ್ಯಕ್ರಮವನ್ನು ಜ್ಞಾನ ವಿಕಾಸ ಕೇಂದ್ರದ ಸದಸ್ಯೆ ನಿರೂಪಿಸಿ, ಸ್ವಾಗತಿಸಿದರು. ಶಶಿಕಲಾ ವಂದಿಸಿದರು.