ಅರಣ್ಯ ಭೂಮಿಗಾಗಿ ಹೋರಾಟ ನಿರಂತರ: ರವೀಂದ್ರ ನಾಯ್ಕ
ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟವು, ಪ್ರಸಕ್ತ ವರ್ಷ ೨೦೨೪ ರಲ್ಲಿ ಹೋರಾಟವು ೩೩ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ೨೦೨೪ ರಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ವರ್ಷವಿಡಿ ವಿಭಿನ್ನ ಸಾಂಘಿಕ ಹೋರಾಟದ ಹೆಜ್ಜೆ ಹಮ್ಮಿಕೊಂಡಿರುವದು ವಿಶೇಷ. ರಾಜ್ಯ ಸರಕಾರ ಭೂಮಿ ಹಕ್ಕು ನೀಡಲಿಲ್ಲ, ಕೇಂದ್ರ ಸರಕಾರ ಕಸ್ತೂರಿರಂಗನ ರಂಗನ್ ವರದಿ ತಿರಸ್ಕರಿಸಿಲ್ಲ. ಆದರೆ ಭೂಮಿ ಹಕ್ಕು ಸಿಗುವರೆಗೂ ಹೋರಾಟ ನಿರಂತರ ಎಂದು ವರ್ಷದ ಹೋರಾಟದ ಮಜಲುಗಳನ್ನು ಮೆಲಕು ಹಾಕುತ್ತಾ ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಸ್ತಾಪಿಸಿದರು.
ಹೋರಾಟದ ಯಶಸ್ಸಿನ ವರ್ಷವಾಗಬಹುದೆಂಬ ನಿರೀಕ್ಷೆಯಲ್ಲಿ ಇದ್ದಂತ ಅರಣ್ಯವಾಸಿಗಳಿಗೆ ೨೦೨೪ ನೇ ವರ್ಷದಲ್ಲಿ ಸಮಸ್ಯೆ ಬಗ್ಗೆಹರಿಯದೇ, ಮುಂದಿನ ಹೋರಾಟಕ್ಕೆ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದರು.
ಪ್ರಸಕ್ತ ವರ್ಷದಲ್ಲಿ ಜಿಲ್ಲಾದ್ಯಂತ ಅರಣ್ಯವಾಸಿಗಳು ದಶಲಕ್ಷ ಗಿಡ ನೆಡುವ ಅಭಿಯಾನ ಯಶಸ್ವಿಯಾಗಿ ಸಂಘಟಿಸಿ, ಪರಿಸರ ರಕ್ಷಣೆ, ಸಂರಕ್ಷಣೆ ಮತ್ತು ಅರಣ್ಯ ಅಭಿವೃದ್ದಿಯ ಸಂದೇಶ ಅರಣ್ಯವಾಸಿಗಳು ಸಾರಿರುವದ್ದು ಪ್ರಶಂಸಿಯ ಕಾರ್ಯವಾಗಿದೆ ಎಂದು ಅವರು ಹೇಳುತ್ತಾ ವರ್ಷದಲ್ಲಿ ಹೋರಾಟಗಾರರ ವೇದಿಕೆಯು ಜಿಲ್ಲೆಯ ೧೭೩ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ ಕಾನೂನು ಜಾಗೃತೆ, ಅರಣ್ಯ ಹಕ್ಕು ಅಭಿಯಾನ, ದೌರ್ಜನ್ಯ, ಪ್ರತಿಭಟನೆ ಮುಂತಾದವುಗಳು ೩೦೦ ಕ್ಕೂ ಮಿಕ್ಕಿ ಕಾರ್ಯಕ್ರಮ ಸಂಘಟಿಸಿರುವದು ಹೋರಾಟದ ವಿಶೇಷ ಎಂದು ಅವರು ಹೇಳಿದರು.
ಗ್ರೀನ್ ಕಾರ್ಡ ಮತ್ತು ಗುರುತಿನ ಪತ್ರ:
ಬಲಿಷ್ಠ ಸಂಘಟನೆ ಹೊಂದಿರುವ ಹೋರಾಟಗಾರರ ವೇದಿಕೆಯು ಜಿಲ್ಲೆಯಲ್ಲಿ ೩೨,೧೫೭ ಅರಣ್ಯವಾಸಿ ಕುಟುಂಬವು ಸದಸ್ಯತ್ವ ಹೊದಿದ್ದು, ಸುಮಾರು ೨೨,೩೮೨ ಕುಟುಂಬಗಳಿಗೆ ಗುರುತಿನ ಪತ್ರ ನೀಡಲಾಗಿದೆ. ಅಲ್ಲದೇ, ಕ್ರಿಯಾಶೀಲ ಕಾರ್ಯಕರ್ತರಿಗೆ ಜಿಲ್ಲಾದ್ಯಂತ ಸುಮಾರು ೧ ಸಾವಿರ ಸದಸ್ಯರಿಗೆ ೨೦೨೪ ವರ್ಷದಲ್ಲಿ ಗ್ರೀನ್ ಕಾರ್ಡ ವಿತರಿಸಲಾಗಿದೆ ಎಂದು ಅವರು ಹೇಳಿದರು.
ಹೋರಾಟಕ್ಕೆ ೩೩ ವರ್ಷ:
ಪ್ರಸಕ್ತ ೨೦೨೪ ನೇ ಇಸ್ವಿಯಲ್ಲಿ ಹೋರಾಟಕ್ಕೆ ೩೩ ವರ್ಷ ಪಾದಾರ್ಪಣೆ ಮಾಡಿದ್ದು ಸಂಘಟನೆಯ ಕ್ರಿಯಾಶೀಲ ತೋರಿಸುತ್ತದೆ. ಅಲ್ಲದೇ, ಸವೋಚ್ಛ ನ್ಯಾಯಾಲಯದಲ್ಲಿಯೂ ಸಹ ಸಾರ್ವಜನಿಕ ಹಿತಾಶಕ್ತಿಯ ಅರ್ಜಿಯಲ್ಲಿ ಅರಣ್ಯವಾಸಿಗಳ ಪರ ಹೋರಾಟಗಾರರ ವೇದಿಕೆಯು ಕಾನೂನು ಹೋರಾಟ ಹಮ್ಮಿಕೊಂಡಿರುವದು ಹೋರಾಟವು ಹಳ್ಳಿಯಿಂದ ದಿಲ್ಲಿಯವರೆಗೂ ಹೆಜ್ಜೆ ಇಟ್ಟಿರುವದು ಅರಣ್ಯವಾಸಿಗಳ ನೈತಿಕ ಸ್ಥೈರ್ಯ ಹೆಚ್ಚಿಸಿದೆ ಎಂದು ಅಧ್ಯಕ್ಷ ರವೀಂದ್ರ ನಾಯ್ಕ ಹೋರಾಟದ ೨೦೨೪ ರ ಕಾರ್ಯ ಸಾಧನೆಯನ್ನ ವಿಶ್ಲೇಷಿಸುತ್ತಾ ಹೇಳಿದರು.