ಶಿರಸಿ:ತಾಲೂಕಿನ ಚಿಪಗಿ ಸುಬ್ರಾಯಕೊಡ್ಲಿನ ಯಕ್ಷಗಾನದ ಅಭಿಮಾನಿ ಹಾಗೂ ಹಿರಿಯ ಯಕ್ಷಕಲಾವಿದರ ಒಡನಾಡಿಯಾಗಿದ್ದ ದಿವಂಗತ ಕೃಷ್ಣ ಭಟ್ಟ ಅವರ ಸಂಸ್ಮರಣೆಯ ಅಂಗವಾಗಿ ಅನುಭವಿ ಯಕ್ಷ ಕಲಾವಿದರ ಕೂಡುವಿಕೆಯಲ್ಲಿ ಏರ್ಪಡಿಸಲಾಗಿದ್ದ ಗಾನ ವೈಭವ ಕಾರ್ಯಕ್ರಮ ಸೇರಿದ್ದ ಕಲಾಭಿಮಾನಿಗಳಿಗೆ ರಸದೂಟ ನೀಡುವಲ್ಲಿ ಯಶಸ್ವಿಯಾಗಿದೆ.
ಕಾರ್ಯಕ್ರಮವನ್ನು ದೀಪ ಬೆಳಗಿಸಿ, ದಿ.ಕೃಷ್ಣ ಭಟ್ಟ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ಖ್ಯಾತ ಭಾಗವತ ಹಿಲ್ಲೂರ ರಾಮಕೃಷ್ಣ ಹೆಗಡೆ ಅವರು ಚಾಲನೆ ನೀಡಿದರು. ಯಾವುದೇ ಭಾಷಣಗಳಿಲ್ಲದೇ ನೇರವಾಗಿ ಸಂಪ್ರದಾಯದಂತೆ ಗಣಪತಿ ಪೂಜೆಯ ಹಾಡಿನೊಂದಿಗೆ ಗಾನವೈಭವ ಕಾರ್ಯಕ್ರಮ ಆರಂಭಗೊಂಡಿತು. ಆರಂಭಿಕವಾಗಿ ಪೀಠಿಕೆ ಪದ್ಯದಲ್ಲಿ ಪೌರಾಣಿಕ ಪ್ರಸಂಗ ದ್ರೌಪದಿ ಪ್ರತಾಪ, ವಾಲಿವಧೆ ಪ್ರಸಂಗದ ಹಾಡುಗಳನ್ನು ಹಿಲ್ಲೂರು ಭಾಗವತರು ಮತ್ತು ಹಿರಿಯ ಭಾಗವತ ರವೀಂದ್ರ ಭಟ್ಟ ಅಚವೆ ಕ್ರಮವಾಗಿ ಹಾಡಿದರು. ನಂತರ ಸಂವಾದ ಹಂತವಾಗಿ ಹಿಲ್ಲೂರವರು ಹಾಗೂ ಅಚವೆ ರವೀಂದ್ರ ರವರು ಕರ್ಣಾರ್ಜುನ ಕಾಳಗ ಪ್ರಸಂಗದ ಪದ್ಯವನ್ನು ಸೊಗಸಾಗಿ ಹಾಡುತ್ತ, ಶೃಂಗಾರ ರಸವಾಗಿ ಹಿಲ್ಲೂರು ಅವರು ಭೌಮಾಸುರ ಕಾಳಗ ಮತ್ತು ಅಚವೆ ಅವರು ರುಕ್ಮಾಂಗದ ಚರಿತ್ರೆ ಪ್ರಸಂಗದ ಆಯ್ದ ಪದ್ಯಗಳನ್ನು ಹಾಡಿದರು. ನಂತದಲ್ಲಿ ಹಾಸ್ಯ ರಸವಾಗಿ ಹಿಲ್ಲೂರು ರವರು ಶ್ವೇತಕುಮಾರ ಚರಿತ್ರೆ, ಅಚವೆ ಅವರು ಭೀಷ್ಮ ವಿಜಯ ಪ್ರಸಂಗದ ಹಾಡನ್ನು ಹಾಡಿ, ಹಾಸ್ಯ ರಸಕ್ಕೊಂದು ಮೆರಗು ತಂದರು. ವೀರ ರಸದಲ್ಲಿ ಇಬ್ಬರು ಭಾಗವತರು ಬೇರೆ ಬೇರೆ ಪ್ರಸಂಗದ ಹಾಡನ್ನು ಪ್ರಸ್ತುತಪಡಿಸಿ, ನಂತರ ಜನಾಪೇಕ್ಷೆಯ ಮೇರೆಗೆ ಜನಪ್ರಿಯವಾದ ಹಾಡುಗಳನ್ನು ದ್ವಂದವಾಗಿ ಹಾಡುತ್ತ ನೀಲ ಗಗನದೋಳ್…..ಹಾಗೂ ಸುಬ್ರಾಯ ಚೊಕ್ಕಾಡಿಯವರ ಕೃತಿ ಕರಿಮುಗಿಲ ಬಾನಿನಲ್ಲಿ ಹಾಡನ್ನು ಹಿಲ್ಲೂರು ಭಾಗವತರು ಸುಂದರವಾಗಿ ಹಾಡಿದರು. ದ್ವಂದ್ವ ಹಾಡಿನಲ್ಲಿ ಭೀಷ್ಮ ವಿಜಯದ ಪರಮ ಋಷಿ ಮಂಡಲದೋಳ್ ಭಾಮಿನಿ ಪ್ರಸ್ತುತಗೊಳಿಸಿದಾಗ ಸಭೆಯ ಕರತಾಡನ ಒಟ್ಟಾರೆ ಕಾರ್ಯಕ್ರಮದ ಯಶಸ್ಸನ್ನು ಸಾಕ್ಷಿಕರಿಸಿದೆ.
ಮಂಗಲ ಪದ್ಯದ ಪೂರ್ವದಲ್ಲಿ ಕಾರ್ಯಕ್ರಮದ ಸಂಘಕರಾದ ರವಿ ಭಟ್ಟ, ಪ್ರತಿಮಾ ಭಟ್ಟ ಸುಬ್ರಾಯಕೊಡ್ಲು ದಂಪತಿ ಹಾಗೂ ಸುಶೀಲಾ ಕೃಷ್ಣ ಭಟ್ಟ, ಭಾರತಿ ಹೆಗಡೆ ಕಲಾವಿದರನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ, ಗೌರವಿಸಿದರು. ಎರಡುವರೆ ತಾಸುಗಳಿಗೂ ಮಿಕ್ಕಿ ನಡೆದ ಗಾನವೈಭವದ ಪ್ರತಿಯೊಂದು ಹಾಡಿನ ಹಂತದಲ್ಲಿ ಆಯಾ ಹಾಡಿಗೆ ತಕ್ಕಂತೆ ಮದ್ದಲೆ ವಾದನದಲ್ಲಿ ಎ.ಪಿ.ಪಾಠಕ್ ಕಾರ್ಕಳ ಹಾಗೂ ಚಂಡೆ ವಾದನದಲ್ಲಿ ಗಣೇಶ ಗಾಂವ್ಕರ ಹಳವಳ್ಳಿ ಸಮರ್ಥವಾಗಿ ಸಾಥ್ ನೀಡುತ್ತ ಮೆರಗು ತಂದರು.
ನಿರೂಪಕ ಗಿರಿಧರ ಕಬ್ನಳ್ಳಿ ಕಲಾವಿದರನ್ನು ಪರಿಚಯಿಸಿ, ಕಾರ್ಯಕ್ರಮ ನಿರೂಪಿಸಿದರೆ, ಪ್ರತಿಮಾ ಭಟ್ಟ ವಂದಿಸಿದರು.