Slide
Slide
Slide
previous arrow
next arrow

ಉಮ್ಮಡಿ ಸರ್ಕಾರಿ ಶಾಲೆಗೆ ಇಕೋಕೇರ್‌ನಿಂದ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ

300x250 AD

ಶಿರಸಿ : ತಾಲೂಕಿನ ಉಮ್ಮಡಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇಕೋ ಕೇರ್ ಸಂಸ್ಥೆಯ ವತಿಯಿಂದ “ಶಿಕ್ಷಣ ಬಂಧು ಯೋಜನೆ”ಯಡಿ ಆರೋಗ್ಯ ಶಿಕ್ಷಣ ಮತ್ತು ಔಷಧಿಗಳ ಬಗ್ಗೆ ಉಪನ್ಯಾಸ ಹಾಗೂ ಪ್ರಥಮ ಚಿಕಿತ್ಸೆ ಪೆಟ್ಟಿಗೆ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಮಾಜಿ ಪ್ರಧಾನಿ ದಿ. ಮನಮೋಹನ್ ಸಿಂಗ್ ಆತ್ಮಕ್ಕೆ ಚಿರಶಾಂತಿಯನ್ನು ಕೋರಿ ಎರಡು ನಿಮಿಷಗಳ ಮೌನ ಪ್ರಾರ್ಥನೆಯ ಮೂಲಕ ಗೌರವ ಸಲ್ಲಿಸಲಾಯಿತು.

ನಂತರ ಗಿಡಕ್ಕೆ ನೀರೆರೆಯುವುದರ ಮೂಲಕ ಉದ್ಘಾಟನೆಯನ್ನು ಬಂಕನಾಳ ಗ್ರಾಮ ಪಂಚಾಯತ್ ಸದಸ್ಯರಾದ ಶಶಿಕುಮಾರ ಬಿ. ನಾಯ್ಕ ನೆರವೇರಿಸಿ ಮಾತನಾಡಿ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಸಂಸ್ಥೆಯು ಹಮ್ಮಿಕೊಳ್ಳುತ್ತಿರುವ  ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಎಸ್.ಡಿ.ಎಮ್.ಸಿ. ಅಧ್ಯಕ್ಷರಾದ ರವಿ ಹುಲಿಯಾ ಗೌಡ ಮಾತನಾಡಿ ಸಂಸ್ಥೆಯು ನಡೆಸುತ್ತಿರುವ ಇಂತಹ ಕಾರ್ಯಕ್ರಮ ಎಲ್ಲಾ ಮಕ್ಕಳಿಗೂ ಸಿಗುವಂತಾಗಲಿ ಎಂದು ಅಭಿಪ್ರಾಯಪಟ್ಟರು.

 ಪ್ರಾಸ್ತಾವಿಕವಾಗಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಮೇಶ ಬಿ. ನಾಯ್ಕ ಪರಿಸರ, ಆರೋಗ್ಯ  ಸ್ವಚ್ಛತೆ  ಕುರಿತು ಮಕ್ಕಳೊಂದಿಗೆ ಸಂವಾದ ನಡೆಸಿದರು.

300x250 AD

 ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಕೋ ಕೇರ್ ಸಂಸ್ಥೆಯ ಅಧ್ಯಕ್ಷ ಸುನೀಲ ಭೋವಿ ವಹಿಸಿ ಸಂಸ್ಥೆಯ ದ್ಯೆಯೋದ್ದೇಶದ ಕುರಿತು ಮಾತನಾಡಿದರು. ಕರ್ನಾಟಕ ರಾಜ್ಯ ಸರ್ಕಾರಿ ಫಾರ್ಮಸಿ ಅಧಿಕಾರಿಗಳ ಸಂಘ (ರಿ.), ಜಿಲ್ಲಾ ಶಾಖೆ: ಉತ್ತರ ಕನ್ನಡ ದ ಅಧ್ಯಕ್ಷರಾದ  ಮಹೇಶ ಡಿ. ನಾಯಕ್ ಸರ್ಕಾರಿ ಆಸ್ಪತ್ರೆಯಲ್ಲಿ ಸಿಗುವ ಸೌಲಭ್ಯಗಳು, ಆರೋಗ್ಯ ಶಿಕ್ಷಣ ಹಾಗೂ ಔಷಧಗಳ ಬಗ್ಗೆ ಉಪನ್ಯಾಸ ನೀಡಿದರು. ಶಾಲಾ ಮುಖ್ಯೋಪಾಧ್ಯಾಯರಾದ ಹರೀಶ ನಾಯಕ್ ಸಂಸ್ಥೆಯು ನಡೆಸುತ್ತಿರುವ ಈ ಉತ್ತಮ ಕಾರ್ಯಕ್ಕೆ ತಾವು ಎಂದಿಗೂ ಸಹಕಾರ ನೀಡುವುದಾಗಿ ತಿಳಿಸಿದರು. 

ನಂತರ ಶಾಲೆಗೆ ಪ್ರಥಮ ಚಿಕಿತ್ಸೆ ಪೆಟ್ಟಿಗೆಯನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ವಕೀಲರಾದ ಜಗದೀಶ ನಾಯ್ಕ, ಎಸ್.ಡಿ.ಎಮ್. ಸಿ. ಸದಸ್ಯರು, ಶಿಕ್ಷಕರು, ಮಕ್ಕಳು, ಉಮ್ಮಡಿ ಹಾಗೂ ಕೋಟೆಕೊಪ್ಪ ಗ್ರಾಮದ ಪಾಲಕರು ಪಾಲ್ಗೊಂಡು ಕಾರ್ಯಕ್ರಮದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

 ಸಂಸ್ಥೆಯ ಸದಸ್ಯರಾದ ರಾಜೇಶ್ ವೆರ್ಣೇಕರ್ ಪ್ರಥಮ ಚಿಕಿತ್ಸೆ ಪೆಟ್ಟಿಗೆಯಲ್ಲಿರುವ ಔಷಧಗಳ ಕುರಿತು ಮಾಹಿತಿ ನೀಡಿದರು. ಪ್ರಧಾನ ಕಾರ್ಯದರ್ಶಿ ರಮೇಶ್ ಬಿ. ನಾಯ್ಕ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಶಾಲಾ ಶಿಕ್ಷಕಿ ಶ್ರೀಮತಿ ರಾಜೇಶ್ವರಿ ಗೌಡ  ವಂದನಾರ್ಪಣೆ ಮಾಡಿದರು.

Share This
300x250 AD
300x250 AD
300x250 AD
Back to top