ದಾಂಡೇಲಿ : ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳ ಜಾಲ ಹೆಚ್ಚಾಗತೊಡಗಿದ್ದು, ಸೈಬರ್ ವಂಚನೆಗಳಿಂದ ಜನರನ್ನು ಪಾರು ಮಾಡಲು ಪೊಲೀಸರು ವಿಶೇಷ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಸ್ವಾಗತಾರ್ಹ. ಸೈಬರ್ ವಂಚನೆಗೆ ಒಳಗಾದವರು ತಕ್ಷಣವೇ ಸೈಬರ್ ಸಹಾಯವಾಣಿ
1930 ಗೆ ಕರೆ ಮಾಡಿ ದೂರನ್ನು ದಾಖಲಿಸಿದ್ದಲ್ಲಿ, ಆಗಿರುವ ಆರ್ಥಿಕ ನಷ್ಟದಿಂದ ಪಾರಾಗಬಹುದು ಎನ್ನುವುದಕ್ಕೆ ನಗರದಲ್ಲಿ ಸೈಬರ್ ವಂಚನೆಗೆ ಒಳಗಾಗಿ ರೂ.53,000/- ಹಣವನ್ನು ಕಳೆದುಕೊಂಡ ವ್ಯಕ್ತಿಗೆ ಆಸರೆಯಾಗಿದ್ದೇ ಇದೇ ಸೈಬರ್ ಸಹಾಯವಾಣಿ 1930.
ಹಣ ಕಳೆದುಕೊಂಡಿದ್ದ ವ್ಯಕ್ತಿ ನಗರದ ಪೊಲೀಸ್ ಠಾಣೆಯಿಂದ ನಿರ್ವಹಿಸಲ್ಪಡುತ್ತಿರುವ ಸೈಬರ್ ಸುರಕ್ಷಾ ದಾಂಡೇಲಿ ಎಂಬ ವಾಟ್ಸಪ್ ಗ್ರೂಪಿನ ಮೂಲಕ, ಸೈಬರ್ ವಂಚನೆಗಳ ಮಾಹಿತಿಯನ್ನು ಪಡೆದುಕೊಂಡಿದ್ದ ಪರಿಣಾಮವಾಗಿ ತಕ್ಷಣವೇ ಸೈಬರ್ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದರು. ಹಣ ಕಳೆದುಕೊಂಡ ಗೋಲ್ಡನ್ ಅವರ್‌ನಲ್ಲಿಯೆ ದೂರು ದಾಖಲಿಸಿದ್ದರಿಂದ ಕಳೆದುಕೊಂಡಿದ್ದ ರೂ.53,000/- ಹಣ ಮರಳಿ ಪಡೆಯಲು ಸಾಧ್ಯವಾಯಿತು. ಸೈಬರ್ ಸಹಾಯವಾಣಿ 1930 ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯಿಂದ ಪಾರಾದ ವ್ಯಕ್ತಿ ನಗರ ಠಾಣೆಯ ಪಿಎಸ್ಐ ಅಮೀನ್ ಅತ್ತಾರ್ ಅವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.
ನಗರದ ಪೊಲೀಸರು ಸೈಬರ್ ವಂಚನೆಯ ಬಗ್ಗೆ ಕಾಲಕಾಲಕ್ಕೆ ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿಯನ್ನು ನೀಡುತ್ತಲೇ ಬರುತ್ತಿದ್ದು, ಸಾರ್ವಜನಿಕರು ಈ ಮಾಹಿತಿಯನ್ನು ತಿಳಿದು ಸೈಬರ್ ವಂಚನೆಗೆ ಒಳಗಾಗುವುದನ್ನು ತಪ್ಪಿಸಿಕೊಳ್ಳಬೇಕೆಂಬುವುದೇ ನಮ್ಮ ಆಶಯ.