ಸಿದ್ದಾಪುರ: ಅಕ್ಷರ ಜಾತ್ರೆ ಎಂಬ ಪದದ ಅರ್ಥವೇ ಔಚಿತ್ಯಪೂರ್ಣವಾಗಿದೆ. ವಿದ್ಯಾರ್ಥಿಗಳಿಗೆ ಕಲಿಕೆಯನ್ನು ಹಬ್ಬದ ವಾತಾವರಣವನ್ನು ಕಲ್ಪಿಸಿ ನೀಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಎಂದು ತಹಶೀಲ್ದಾರ ಎಂ.ಆರ್. ಕುಲಕರ್ಣಿ ಹೇಳಿದರು.
ಪಟ್ಟಣದ ಶಿಕ್ಷಣ ಪ್ರಸಾರಕ ಸಮಿತಿಯ ಅಕ್ಷರ ಜಾತ್ರೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. ಶಿಕ್ಷಣ ಪ್ರಸಾರಕ ಸಮಿತಿಯಿಂದ ತಾಲ್ಲೂಕಿನ ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ದೊರೆಯುತ್ತಿದೆ. ಸಂಸ್ಥೆ ಮತ್ತಷ್ಟು ಎತ್ತರಕ್ಕೆ ಬೆಳೆದು ಇನ್ನಷ್ಟು ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ದೊರೆಯುವಂತಾಗಲಿ ಎಂದರು.
ಮುಖ್ಯ ಅತಿಥಿಗಳಾಗಿ ಭಾಗಿಯಾದ ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಚ್.ನಾಯ್ಕ ಮಾತನಾಡಿ ನಾನೂ ಈ ಸಂಸ್ಥೆಯ ವಿದ್ಯಾರ್ಥಿಯಾಗಿದ್ದು, ಈ ಹಂತಕ್ಕೆ ನಾನು ಬೆಳೆಯಲು ಸಹಕಾರಿಯಾದ ಸಂಸ್ಥೆಗೆ ಋಣಿಯಾಗಿದ್ದೇನೆ. ಮಕ್ಕಳನ್ನು ಕೇವಲ ಪಠ್ಯಕ್ಕೆ ಸೀಮಿತರನ್ನಾಗಿ ಮಾಡದೇ ಅವರಲ್ಲಿರುವ ಪ್ರತಿಭೆ ಅನಾವರಣಗೊಳಿಸಲು ಶಿಕ್ಷಕರು ಪ್ರಯತ್ನಿಸಬೇಕು ಎಂದರು.
ಸಭೆಯಲ್ಲಿ ಇತ್ತೀಚೆಗೆ ದೈವಾಧೀನರಾದ ಕೆ.ಐ. ಹೆಗಡೆ ತಾರಗೋಡು ಇವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಳೆದ ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ಶೇ.೧೦೦ ಫಲಿತಾಂಶ ಪಡೆದ ಶಾಲೆಯ ಮುಖ್ಯಾಧ್ಯಾಪಕರಿಗೆ, ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ, ಶಿಕ್ಷಣ ಪ್ರಸಾರಕ ಸಮಿತಿಯ ನಿವೃತ್ತ ಸಿಬ್ಬಂದಿಗಳಿಗೆ ಮತ್ತು ಪಿಯುಸಿ, ಪದವಿ, ವೈದ್ಯಕೀಯ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಸುರೇಶ ಎಸ್. ಗುತ್ತೀಕರ್ ಮಾತನಾಡಿದರು.ಶಿಕ್ಷಣ ಪ್ರಸಾರಕ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಅರುಣ ಭಾಗ್ವತ ವಂದಿಸಿದರು. ಟಿ.ಎನ್.ಭಟ್ ಮತ್ತು ವಿನೋದಾ ಭಟ್ ನಿರೂಪಿಸಿದರು.