ಹೊನ್ನಾವರ: ಕಲಾ ವಿಷಯದಲ್ಲಿ ಪದವಿ ಪಡೆದವರಿಗೆ ಉದ್ಯೋಗಾವಕಾಶಗಳು ಕಡಿಮೆ ಎನ್ನುವುದು ಒಂದು ತಪ್ಪು ಕಲ್ಪನೆಯಾಗಿದ್ದು ಕಲಾ ಪದವೀಧರರು ವಿವಿಧ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಿ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ ಹಲವು ನಿದರ್ಶನಗಳಿವೆ ಎಂದು ಎಂ.ಪಿ.ಇ.ಸೊಸೈಟಿಯ ಅಧ್ಯಕ್ಷ ಕೃಷ್ಣಮೂರ್ತಿ ಭಟ್ಟ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಎಸ್.ಡಿ.ಎಂ.ಪದವಿ ಕಾಲೇಜಿನ ಆರ್ಟ್ಸ್ ಸರ್ಕಲ್ ಹಾಗೂ ಐಕ್ಯುಎಸಿ ಸಹಯೋಗದಲ್ಲಿ ಸೋಮವಾರ ನಡೆದ ‘ಕಲಾ ಕಲರವ’ ಕಾರ‍್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಹೊನ್ನಾವರದ ಮೋಹನ ಶೆಟ್ಟಿ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ರವಿ ಗೌಡ ಮಾತನಾಡಿ, ವಿದ್ಯಾರ್ಥಿಗಳು ಬದ್ಧತೆಯೊಂದಿಗೆ ಅಧ್ಯಯನದಲ್ಲಿ ತೊಡಗಿಕೊಂಡರೆ ಯಶಸ್ಸು ಸಾಧಿಸಬಹುದು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಡಿ.ಎಲ್.ಹೆಬ್ಬಾರ ಮಾತನಾಡಿ, ಸ್ಪರ್ಧಾತ್ಮಕ ಜಗತ್ತಿನಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ತರಬೇತಿ ನೀಡಲು ಕಾಲೇಜಿನಲ್ಲಿ ಎಲ್ಲ ಆಧುನಿಕ ಮೂಲ ಸೌರ‍್ಯ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ಐಕ್ಯುಎಸಿ ಸಂಯೋಜಕ ಡಾ.ಸುರೇಶ ಎಸ್.ಮಾತನಾಡಿದರು.
ಎಸ್.ಡಿ.ಎಂ.ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಭಟ್ಟ ಭಾಗವಹಿಸಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥ ಮಂಜುನಾಥ ಭಂಡಾರಿ ಬರೆದ ‘ಉತ್ತರ ಕನ್ನಡ ಜಿಲ್ಲೆಯ ಐತಿಹಾಸಿಕ ತಾಣಗಳು’ ಪುಸ್ತಕವನ್ನು ವೇದಿಕೆಯ ಗಣ್ಯರು ಬಿಡುಗಡೆಗೊಳಿಸಿದರು.
ಡಾ.ಎಂ.ಜಿ.ಹೆಗಡೆ ಸ್ವಾಗತಿಸಿದರು. ಉಪನ್ಯಾಸಕ ವಿದ್ಯಾಧರ ನಾಯ್ಕ ನಿರೂಪಿಸಿದರು. ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ ಹೆಗಡೆ ಪುಸ್ತಕ ಪರಿಚಯಿಸಿದರು. ಮಂಜುನಾಥ ಭಂಡಾರಿ ವಂದಿಸಿದರು.
ತಾಲ್ಲೂಕಿನ ಪಿಯು ಕಾಲೇಜುಗಳ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ ವಿವಿಧ ಸ್ಪರ್ಧೆಗಳ ವಿಜೇತರಿಗೆ ನಗದು ಬಹುಮಾನ ವಿತರಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಪಾಲ್ಗೊಳ್ಳುವಿಕೆಯಲ್ಲಿ ನಡೆದ ವಸ್ತು ಹಾಗೂ ಪುಸ್ತಕ ಪ್ರದರ್ಶನಗಳು, ಆಹಾರ ಮೇಳ,ಸಾಂಸ್ಕೃತಿಕ ಕಾರ‍್ಯಕ್ರಮಗಳು ಗಮನ ಸೆಳೆದವು.