ವಿವಿಧ ಕವಿಗೋಷ್ಠಿ, ಪುಸ್ತಕ ಲೋಕಾರ್ಪಣೆ | ಗೌರವ ಪುರಸ್ಕಾರ, ಸಾಂಸ್ಕೃತಿಕ ಕಾರ್ಯಕ್ರಮ
ಯಲ್ಲಾಪುರ: ಕನ್ನಡ ಸಾಹಿತ್ಯ ಪರಿಷತ್ ತಾಲೂಕಾ ಘಟಕ ಯಲ್ಲಾಪುರ ವತಿಯಿಂದ ಯಲ್ಲಾಪುರ ತಾಲೂಕಾ 6ನೇ ಕನ್ನಡ ಸಾಹಿತ್ಯ ಸಮ್ಮೇಳನವು ತಾಲೂಕಿನ ಮಂಚಿಕೇರಿಯ ಶ್ರೀ ರಾಜರಾಜೇಶ್ವರಿ ರಂಗಮಂದಿರದಲ್ಲಿ ಇಂದು ನಡೆಯಲಿದೆ.
ಬೆಳಿಗ್ಗೆ 8.30ಕ್ಕೆ ಯಲ್ಲಾಪುರ ತಹಶೀಲ್ದಾರ ಯಲ್ಲಪ್ಪ ಗೋಣಣ್ಣೇನವರ ರಾಷ್ಟ್ರಧ್ವಜಾರೋಹಣ ನೆರವೇರಿಸಲಿದ್ದು, ಪರಿಷತ್ ಧ್ವಜಾರೋಹವನ್ನು ಕಸಪ ಅಧ್ಯಕ್ಷ ಬಿ.ಎನ್.ವಾಸರೆ, ನಾಡ ಧ್ವಜಾರೋಹಣವನ್ನು ಯಲ್ಲಾಪುರ ಕಸಾಪ ಅಧ್ಯಕ್ಷ ವಿ. ಸುಬ್ರಹ್ಮಣ್ಯ ಭಟ್ ನಡೆಸಿಕೊಡಲಿದ್ದಾರೆ. ಈ ವೇಳೆ ಪ.ಪಂ.ಯಲ್ಲಾಪುರ ಉಪಾಧ್ಯಕ್ಷ ಅಮಿತ್ ಅಂಗಡಿ, ಮುಖ್ಯಾಧಿಕಾರಿ ಸುನೀಲ್ ಗಾವಡೆ, ಹಾಸಣಗಿ ಗ್ರಾ.ಪಂ.ಉಪಾಧ್ಯಕ್ಷ ಪುರಂದರ ನಾಯ್ಕ್, ಕಂಪ್ಲಿ ಗ್ರಾ.ಪಂ.ಉಪಾಧ್ಯಕ್ಷ ಸದಾಶಿವ ಚಿಕ್ಕೊತ್ತಿ, ಇನ್ನಿತರರು ಹಾಜರಿರಲಿದ್ದಾರೆ.
ಸಮ್ಮೇಳನಾಧ್ಯಕ್ಷ ರಾಮಕೃಷ್ಣ ಭಟ್ ದುಂಡಿ ಇವರ ಸ್ವಾಗತ ಮೆರವಣಿಗೆಯನ್ನು ವಲಯ ಅರಣ್ಯಾಧಿಕಾರಿ ಬಸವರಾಜ ಬೋಚಳ್ಳಿ ಉದ್ಘಾಟಿಸಲಿದ್ದಾರೆ.
ಸಾಹಿತ್ಯ ಸಮ್ಮೇಳನದ ಉದ್ಘಾಟನೆಯನ್ನು ಹಿರಿಯ ಸಾಹಿತಿ ಶ್ಯಾಮಸುಂದರ ಬಿದ್ರಕುಂದಿ ಉದ್ಘಾಟಿಸಲಿದ್ದು, ಯಲ್ಲಾಪುರ ಕಸಾಪ ಅಧ್ಯಕ್ಷ ವಿ.ಸುಬ್ರಹ್ಮಣ್ಯ ಭಟ್ ಪ್ರಾಸ್ತಾವಿಕ ನುಡಿ, ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ಆಶಯ ನುಡಿ ನುಡಿಯಲಿದ್ದಾರೆ. ಇದೇ ವೇಳೆ ದ್ವಾರಗಳ ಉದ್ಘಾಟನೆಯನ್ನು ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ, ಪುಸ್ತಕ ಮಳಿಗೆ ಉದ್ಘಾಟನೆಯನ್ನು ವಿಕೇಂದ್ರೀಕರಣ ಯೋಜನೆ, ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಪ್ರಮೋದ ಹೆಗಡೆ ನೆರವೇರಿಸಲಿದ್ದು, ನಿಕಟಪೂರ್ವ ಸಮ್ಮೇಳನಾಧ್ಯಕ್ಷ ಟಿ.ವಿ.ಕೋಮಾರ ಧ್ವಜ ಹಸ್ತಾಂತರಿಸಲಿದ್ದಾರೆ. ಇದೇ ವೇಳೆ ವನರಾಗ ಶರ್ಮಾರ ‘ಮರಳಿ ಮಿನುಗಿತು ಕಾಮನಬಿಲ್ಲು’ ಕಥಾಸಂಕಲನವನ್ನು ಶಾಸಕ ಶಿವರಾಮ ಹೆಬ್ಬಾರ್ ಲೋಕಾರ್ಪಣೆಗೊಳಿಸಲಿದ್ದಾರೆ.
ನಂತರದಲ್ಲಿ ಕವಿ ಸಮಯ ಗೋಷ್ಠಿ, ಸಮ್ಮೇಳನಾಧ್ಯಕ್ಷರ ಜೊತೆ ಸಂವಾದ ಗೋಷ್ಠಿ, ಸಾಹಿತ್ಯ ಗೋಷ್ಠಿ, ಹಾಗೂ ಸಂಜೆ 6ಗಂಟೆಗೆ ಸಮಾರೋಪ ಸಮಾರಂಭ ಹಾಗೂ ಕಸಾಪ ಗೌರವ ಪುರಸ್ಕಾರ ಕಾರ್ಯಕ್ರಮ ನಡೆಯಲಿದೆ. ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಕಸಾಪ ಅಧ್ಯಕ್ಷ ಬಿ.ಎನ್.ವಾಸರೆ ವಹಿಸಲಿದ್ದು, ಪರಿಸರ ತಜ್ಞ ಶಿವಾನಂದ ಕಳವೆ ಸಮಾರೋಪ ನುಡಿ, ಬೀಸ್ಗೋಡ ಸರಕಾರಿ ಪ್ರೌಢಶಾಲೆ ಶಿಕ್ಷಕ ಶ್ರೀಧರ ಹೆಗಡೆ ಮಾಳಕೊಪ್ಪ, ಅಭಿನಂದನಾ ನುಡಿ ನುಡಿಯಲಿದ್ದಾರೆ. ಸಮ್ಮೇಳನಾಧ್ಯಕ್ಷರ ನುಡಿಯನ್ನು ರಾಮಕೃಷ್ಣ ಭಟ್ ದುಂಡಿ ನುಡಿಯಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿ.ಪಂ.ಮಾಜಿ ಸದಸ್ಯ ರಾಘವೇಂದ್ರ ಭಟ್, ಶ್ರೀಮತಿ ರೂಪಾ ಬೂರನಮನೆ, ನಿವೃತ್ತ ಪ್ರಾಂಶುಪಾಲ ಎನ್.ಎ.ಶೇಖ್, ಮಂಚಿಕೇರಿ ಕಾಲೇಜ್ ಪ್ರಾಂಶುಪಾಲ ಡಿ.ಜಿ.ಹೆಗಡೆ, ಶಿಕ್ಷಣ ತಜ್ಞ ಜಿ.ಟಿ.ಭಟ್ ಬೊಮ್ಮನಹಳ್ಳಿ ಆಗಮಿಸಲಿದ್ದಾರೆ.
ಈ ವೇಳೆ ಕಸಾಪ ಗೌರವ ಪುರಸ್ಕಾರ ನಡೆಯಲಿದ್ದು, ಉಮೇಶ ಭಾಗ್ವತ್ (ಸಹಕಾರ), ಎನ್.ಕೆ.ಭಟ್ ಅಗ್ಗಾಶಿಕುಂಬ್ರಿ (ಕೃಷಿ), ಸುರೇಶ ಸಿದ್ದಿ (ನಾಟಕ), ವಿಘ್ನೇಶ್ವರ ಹೆಗಡೆ (ಸಾಹಿತ್ಯ), ವೇ. ನಾಗೇಂದ್ರ ಭಟ್ (ಜ್ಯೋತಿಷ್ಯ), ಎನ್.ಜಿ.ಹೆಗಡೆ ಭಟ್ರಕೇರಿ (ಸಾಮಾಜಿಕ), ನಾಗರಾಜ ಹೆಗಡೆ (ಸಂಗೀತ ಬಾನ್ಸುರಿ), ದರ್ಶನ ಬಿಲ್ಲವ (ಕ್ರೀಡೆ) ಪುರಸ್ಕೃತಗೊಳ್ಳಲಿದ್ದಾರೆ.
ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ನಾಗಭೂಷಣ ಹೆಗಡೆ ಇವರಿಂದ ಹಿಂದೂಸ್ತಾನಿ ಗಾಯನ ಕಾರ್ಯಕ್ರಮ ನಡೆಯಲಿದೆ.